ಸುದ್ದಿ ಸಂಕ್ಷೇಪ
ಇಂದು ಶಿಕ್ಷಕರ ದಿನಾಚರಣೆ
ಗಜೇಂದ್ರಗಡ: ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ತಾಲೂಕು ಘಟಕ ವತಿಯಿಂದ 5ನೇ ವರ್ಷದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಸೆ. 30ರಂದು ಸಂಜೆ 5.30ಕ್ಕೆ ಮೈಸೂರು ಮಠದಲ್ಲಿ ನಡೆಯಲಿದೆ. ಮೈಸೂರು ಸಂಸ್ಥಾನ ಮಠದ ಜ. ವಿಜಯ ಮಹಾಂತ ಶ್ರೀಗಳು ಸಾನ್ನಿಧ್ಯ ವಹಿಸುವರು. ಶಾಸಕ ಜಿ.ಎಸ್. ಪಾಟೀಲ ಉದ್ಘಾಟಿಸುವರು. ಕರವೇ ಜಿಲ್ಲಾಧ್ಯಕ್ಷ ವೆಂಕಟೇಶ ದಾಸರ, ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ, ಜೆಡಿಎಸ್ ಮುಖಂಡ ನಿಂಗನಗೌಡ ಪಾಟೀಲ, ಕೆ.ಎಸ್. ಕೊಡತಗೇರಿ, ಶರಣಪ್ಪ ರೇವಡಿ, ಶಿವರಾಜ ಘೋರ್ಪಡೆ ಮುಂತಾದವರು ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಕೊತಬಾಳದ ಸೃಷ್ಟಿ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ಯಾಂಕ್‌ಗೆ ವಂಚನೆ: 10 ಜನರ ಬಂಧನ
ಗದಗ: ಜಿಲ್ಲೆಯ ರೋಣ ತಾಲೂಕಿನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ರೋಣ ಶಾಖೆಯಲ್ಲಿ ಅಸಲಿ ಬಂಗಾರವೆಂದು ನಂಬಿಸಿ ನಕಲಿ ಅಡವಿಟ್ಟು 8.71 ಲಕ್ಷ ರುಪಾಯಿ ಸಾಲಪಡೆದು ವಂಚಿಸಿರುವ ಘಟನೆ ನಡೆದಿದೆ. ಅಸಲಿ ಬಂಗಾರ ಎಂದು ನಕಲಿ ಬಂಗಾರ ನೀಡಿದ್ದಾರೆ ಎನ್ನಲಾಗಿರುವ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ನಾಗರಾಜ ಜನ್ನು, ಸಿದ್ದಪ್ಪ ಗದಗಿನ, ಹನಮಂತ ಕಂದಗಲ್, ಮರಿಗೌಡ ಜುಂಜನಗೌಡ್ರ, ಮಹಾಂತಪ್ಪ ರೋಣದ, ಬಸಲಿಂಗಪ್ಪಗೌಡ ಪಾಟೀಲ, ವಿರೂಪಾಕ್ಷಗೌಡ ಗೋಳನಗೌಡ, ಈರಪ್ಪ ಕಿನ್ನಾಳ, ಭೀಮಪ್ಪ ಹವಳಪ್ಪನವರ, ಅಮರಪ್ಪ ಕಿರೇಸೂರ ಬಂಧಿತ ಆರೋಪಿಗಳು. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಗುಪ್ಸೆ: ಮಹಿಳೆ ಆತ್ಮಹತ್ಯೆ
ಗದಗ: ಯುವತಿಯೋರ್ವಳ ತಲೆಗೆ ಚಿಕ್ಕ ವಯಸ್ಸಿನಲ್ಲಿ ಬಿದ್ದ ಪೆಟ್ಟಿನಿಂದ ಮಾನಸಿಕವಾದ ಕಾರಣ ಯುವತಿಯೂ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ನಿರ್ಮಲಾ ಮಹಾಂತೇಶ ಇಟಗಿ (21) ಮೃತಮಹಿಳೆ. ತಲೆಗೆ ಪೆಟ್ಟಾಗಿದ್ದರಿಂದ ಚಿಕಿತ್ಸೆ ಕೊಡಿಸದಿರುವುದನ್ನೇ ಮಾನಸಿಕ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಕಾ: ಓರ್ವ ಬಂಧನ
ಗದಗ: ಜಿಲ್ಲೆಯ ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಮಟ್ಕಾ ನಂಬರ್ ಬರೆದುಕೊಳ್ಳುತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ನಿವಾಸಿ ಬಸನಗೌಡ ಲಿಂಗನಗೌಡ ಪಾಟೀಲ ಬಂಧಿತ ವ್ಯಕ್ತಿ. ಬಂಧಿತ ವ್ಯಕ್ತಿಯಿಂದ ರು. 3210 ಹಾಗೂ ಒಂದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.