ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅನಾವರಣವಾಗದ ಗಾಂಧಿ ಪುತ್ಥಳಿ

Mainashree
Updated On : 1 Oct 2013, 10:42 am

ಕನ್ನಡಪ್ರಭ ವಾರ್ತೆ, ಗದಗ, ಸೆ. 30
ಬೆಟಗೇರಿ ಜನರ ಹಲವು ವರ್ಷಗಳ ಬೇಡಿಕೆಯಾಗಿದ್ದ ಇಲ್ಲಿನ ಹೊಸಪೇಟೆ ಚೌಕ್‌ನಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಬೇಕೆಂಬ ಹೋರಾಟಕ್ಕೆ 2012ರಲ್ಲಿಯೇ ಜಯ ದೊರೆತಿದ್ದು, ಅಂದೇ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಪುತ್ಥಳಿ ನಿರ್ಮಾಣವಾಗಿದೆ. ಆದರೆ, ಇಲ್ಲಿಯವರೆಗೂ ಪುತ್ಥಳಿ ಅನಾವರಣ ಭಾಗ್ಯ ಕಾಣದೇ ಇರುವುದು ಇಲ್ಲಿನ ದೇಶಾಭಿಮಾನಿಗಳಿಗೆ ಹೋರಾಟಗಾರರಿಗೆ ನೋವುಂಟು ಮಾಡಿದೆ.
ಗದಗ ಜಿಲ್ಲೆಗೂ ಮಹಾತ್ಮಾಗಾಂಧೀಜಿಯವರಿಗೂ ಅವಿನಾಭಾವ ಸಂಬಂಧವಿದೆ. ಜಿಲ್ಲೆಯು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿತ್ತು. ಜಿಲ್ಲೆಯ ಹಲವಾರು ಸ್ವಾತಂತ್ರ್ಯ ಹೋರಾಟಗಾರರು ರಾಷ್ಟ್ರಪಿತನ ಹೋರಾಟಕ್ಕೆ ಕೈ ಜೋಡಿಸಿದ್ದರು.
ಅವಳಿ ನಗರಕ್ಕೆ 1921ರಲ್ಲಿ ಗಾಂಧೀಜಿ
ಗಾಂಧೀಜಿ 1921ರಂದು ಗದಗ-ಬೆಟಗೇರಿ ಅವಳಿ ನಗರಕ್ಕೆ ಭೇಟಿ ನೀಡಿದ್ದರು. ಅಂದು ಸ್ವಾತಂತ್ರ್ಯ ಹೋರಾಟಗಾರ ದಿ. ಅಂದಾನಪ್ಪ ದೊಡ್ಡಮೇಟಿ ಅವರ ಆಹ್ವಾನದ ಮೇರೆಗೆ ರೋಣ ತಾಲೂಕಿನ ಜಕ್ಕಲಿ ಗ್ರಾಮಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಅವಳಿ ನಗರಕ್ಕೆ ಆಗಮಿಸಿ, ಸ್ಥಳೀಯ ನಗರಸಭೆ ಮೈದಾನದಲ್ಲಿ ಬಹಿರಂಗ ಭಾಷಣ ಮಾಡಿದ್ದರು. ಅಲ್ಲದೆ 1916ರಲ್ಲಿ ಬಾಲಗಂಗಾಧರ ತಿಲಕ ಗದುಗಿನ ಪಂಚರಹೊಂಡದ ಬಯಲಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದ್ದರು.
ಹೊಸಪೇಟ್ ಚೌಕ್ ಭಾಗದ ಹಿರಿಯರು ಹಾಗೂ ಹೋರಾಟಗಾರರಾಗಿದ್ದ ಹನುಮಂತಸಾ ಬಾಕಳೆ, ಫಕೀರಪ್ಪ ಭರದ್ವಾಡ, ಅಂಟೀನವರು, ತುಳಜಪ್ಪ ಮಿಸ್ಕಿನ್, ಬೊದ್ಲೇಖಾನ್, ಸಂಕಪ್ಪ ಚೋಳಿನ, ಶಂಕ್ರಪ್ಪ ಜೂಜಗಾರ, ಮಿರಜಕರ್ ಮುಂತಾದವರು ಗಾಂಧೀಜಿಯವರ ನಿಧನಾನಂತರ ಅಂದಿನ ಧಾರವಾಡ ಜಿಲ್ಲಾಧಿಕಾರಿಗಳ ಸಹಕಾರದೊಂದಿಗೆ ಗದುಗಿನ ಎಪಿಎಂಸಿ ಹಾಗೂ ಬೆಟಗೇರಿಯ ಹೊಸಪೇಟ ಚೌಕ್‌ನಲ್ಲಿರುವ ಬಾಕಳೆಯವರ ಮನೆಹತ್ತಿರ ಚಿತಾಭಸ್ಮವನ್ನು ಸ್ಥಾಪಿಸಿ, ರಾಷ್ಟ್ರಪಿತ ಗಾಂಧೀಜಿಯವರಿಗೆ ಸ್ಮಾರಕ ನಿರ್ಮಿಸಿ ಗಾಂಧಿಗುಡಿ ಎಂದು ನಾಮಕರಣ ಮಾಡಲಾಯಿತು.
ಹಲವು ಬಾರಿ ಹೋರಾಟ: ಹಲವಾರು ವರ್ಷಗಳ ನಂತರ ಗಾಂಧೀಜಿ ಪುತ್ಥಳಿ ಸ್ಥಾಪನೆಯಾಗಬೇಕೆಂದು ಇಲ್ಲಿನ ಹಲವು ಪ್ರಗತಿಪರ ಚಿಂತಕರು, ಹೋರಾಟಗಾರರು ಗಾಂಧಿಚೌಕ್‌ನಲ್ಲಿ ಗಾಂಧಿಪುತ್ಥಳಿ ಅನಾವರಣಗೊಳಿಸುವಂತೆ ಹಲವು ಬಾರಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಹೋರಾಟಕ್ಕೆ ಸ್ಪಂದಿಸಿದ ಅಂದಿನ ಶಾಸಕ ಶ್ರೀಶೈಲಪ್ಪ ಬಿದರೂರ ಹಾಗೂ ಅಂದಿನ ನಗರಸಭೆಯ ಅಧ್ಯಕ್ಷ ಶಿವಣ್ಣ ಮುಳಗುಂದ 2012ರಲ್ಲಿ ಗಾಂಧಿ ಪುತ್ಥಳಿ ನಿರ್ಮಾಣಕ್ಕೆ ಜೈಪುರದಲ್ಲಿ ಪುತ್ಥಳಿ ನಿರ್ಮಿಸಿ ತಂದು ನಗರಸಭೆಯ ಜವಾಬ್ದಾರಿಗೆ ನೀಡಲಾಗಿದೆ. ಮೂರ್ತಿಯು ಬಂದು ಒಂದು ವರ್ಷ ಕಳೆಯುತ್ತಾ ಬಂದರೂ ಅನಾವರಣದ ಭಾಗ್ಯ ಕಾಣದೇ ಇರುವುದು ಇಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಜೈಪುರದಿಂದ ತಂದ ಗಾಂಧಿ ಪುತ್ಥಳಿ...
ಗಾಂಧಿ ಮೂರ್ತಿ ಪ್ರತಿಷ್ಠಾಪನಾ ಸಮಿತಿಯವರು ಕಳೆದ ವರ್ಷ ಹಿಂದಿನ ಶಾಸಕರಾದ ಶ್ರೀಶೈಲಪ್ಪ ಬಿದರೂರ ಹಾಗೂ ಹಿಂದಿನ ನಗರಸಭೆ ಅಧ್ಯಕ್ಷರಾದ ಶಿವಣ್ಣಾ ಮುಳಗುಂದ ಹಾಗೂ ನಗರಸಭೆ ಜನಪ್ರತಿನಿಧಿಗಳಿಗೆ ಗಾಂಧೀಜಿ ಪುತ್ಥಳಿ ಸ್ಥಾಪನೆಗಾಗಿ ಮನವಿ ಮಾಡಿದ್ದರು. ಸಮಿತಿಯ ಮನವಿಗೆ ಸ್ಪಂದಿಸಿದ ಶ್ರೀಶೈಲಪ್ಪ ಬಿದರೂರ ಅವರು ಬೆಟಗೇರಿಯಲ್ಲಿಯೇ ಸ್ಥಾಪಿಸಬೇಕಾದ ಇನ್ನೊಂದು ಪುತ್ಥಳಿ ವಚನ ಪಿತಾಮಹ ಶರಣ ದೇವರದಾಸೀಮಯ್ಯನವರ ಮೂರ್ತಿ ಪರಿಶೀಲನೆಗೆ ಜೈಪುರಕ್ಕೆ ತೆರಳಿದ್ದಾಗ ಅಲ್ಲಿಯೇ ಗಾಂಧೀಜಿ ಪುತ್ಥಳಿಯನ್ನು ಜೈಪುರದಿಂದ ತಂದು ಗದಗ-ಬೆಟಗೇರಿ ನಗರಸಭೆಯ ಜವಾಬ್ದಾರಿಗೆ ನೀಡಿದ್ದರು. ಆದರೆ, ಗಾಂಧೀಜಿ ಪುತ್ಥಳಿಯು ನಗರಸಭೆಗೆ ಬಂದು ಒಂದು ವರ್ಷ ಗತಿಸಿದರೂ ಉದ್ಘಾಟನೆಯಾಗದೆ ದೂಳು ತಿನ್ನುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಗಮನ ನೀಡಬೇಕಾಗಿದೆ. ಗಾಂಧೀಜಿ ಪುತ್ಥಳಿ ಅನಾವರಣಕ್ಕೆ  ಕೂಡಲೇ ಕ್ರಮ ಕೈಗೊಳ್ಳಬೇಕು ಎಂಬುದು ಇಲ್ಲಿನ ಸಾರ್ವಜನಿಕರ ಆಗ್ರಹವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement