ಅರಣ್ಯದಂತೆ ಉದ್ಯಾನ ಬೆಳೆಸಿ
ಕನ್ನಡಪ್ರಭ ವಾರ್ತೆ, ಗದಗ, ಸೆ. 30
ಸಕಾಲಕ್ಕೆ ಮಳೆ-ಬೆಳೆ ಬರಲು ಗಿಡಗಳನ್ನು ಬೆಳೆಸಿ, ಅರಣ್ಯಗಳ ರೀತಿಯಲ್ಲಿ ಉದ್ಯಾನವನವನ್ನು ಅಭಿವೃದ್ಧಿಪಡಿಸಬೇಕು ಎಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಸ್ಥಳೀಯ ವಿವೇಕಾನಂದ ನಗರದಲ್ಲಿನ ಉದ್ಯಾನವನದಲ್ಲಿ ಈಚೆಗೆ 50 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗದಗ ಡಿಎಫ್ಒ ಡಿ.ಎನ್. ಅಘೋರೆ ಮಾತನಾಡಿ, ಜಾಗತಿಕ ತಾಪಮಾನವು ದಿನ ದಿನಕ್ಕೆ ಅಧಿಕವಾಗುತ್ತಿದ್ದು, ಮುಂದಿನ 40 ವರ್ಷಗಳಲ್ಲಿ ಇಡೀ ಜಗತ್ತಿನಲ್ಲಿ ಮಾನವಕುಲಕ್ಕೆ ಕಂಟಕ ಕಟ್ಟಿಟ್ಟ ಬುತ್ತಿ. ಇದಕ್ಕೆ ಕಾರಣ ಅರಣ್ಯಗಳ ನಾಶ. ಕಾರಣ ಜನಸಾಮಾನ್ಯರು ಒಂದೊಂದು ಗಿಡವನ್ನು ನೆಟ್ಟು ಪೋಷಿಸಿದರೆ ಸಹಾಯಕವಾಗುತ್ತದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಉಚಿತವಾಗಿ ಸಸಿಗಳನ್ನು ವಿತರಿಸುತ್ತದೆ. ಇಲಾಖೆ ನೀಡಿದ ಗಿಡಗಳನ್ನು ಸಂರಕ್ಷಿಸುವ ಹೊಣೆ ಜನಸಾಮಾನ್ಯರದ್ದಾಗಿದೆ ಎಂದರು.
ವಿವೇಕಾನಂದ ನಗರದ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಬಿ.ಎನ್. ಯರನಾಳ ಮಾತನಾಡಿ, ಅರಣ್ಯೀಕರಣದ ಮಹತ್ವವನ್ನು ವಿವರಿಸಿದರು. ಮರ ಬೆಳೆಸಿ ದೇಶ ಉಳಿಸಿ, ಪ್ರತಿಯೊಬ್ಬರೂ ಒಂದೊಂದು ಗಿಡವನ್ನು ದತ್ತು ತೆಗೆದುಕೊಂಡು ಉದ್ಯಾನವನದಲ್ಲಿ ಗಿಡಗಳನ್ನು ಬೆಳೆಸಬೇಕು ಎಂದರು. ರೋಟರಿ ಸೆಂಟ್ರಲ್ ಗದಗ ಅಧ್ಯಕ್ಷ ಪುರುಷೋತ್ತಮ ಮಾತನಾಡಿದರು. ಉದ್ಯಾನವನವನ್ನು ಸುಂದರವಾಗಿ ಮಾರ್ಪಡಿಸಲು ಸಕಲ ಸಹಾಯವನ್ನು ನಿಡುವುದಾಗಿ ಹೇಳಿದರು. ನಾಗರಿಕ ಜಾಗೃತ ವೇದಿಕೆ ಅಧ್ಯಕ್ಷ ವಿ.ಆರ್. ಮಾಳೆಕೊಪ್ಪಮಠ, ಎಸ್.ವಿ. ಹುರಳಿ, ನಿರ್ಮಲಾ ಪಾಟಿಲ, ಪ್ರಕಾಶ ಕರಿಸೋಮನಗೌಡರ, ವಿ.ಕೆ. ಗುರುಮಠ ನಗರಸಭೆ ಸದಸ್ಯೆ ಶಿವಲೀಲಾ ಅಕ್ಕಿ, ಆರ್.ಕೆ. ಗುಡಿ. ಡಾ. ಅನಂತ ಶಿವಪುರ, ಕಲ್ಲೋಳಕರ ಉಪಸ್ಥಿತರಿದ್ದರು. ರೇಣುಕಾ ಕರಿಗೌಡರ ಪ್ರಾರ್ಥಿಸಿದರು. ನೀಲಾ ಪಾಟೀಲ ಸ್ವಾಗತಿಸಿದರು. ಎಸ್.ಐ. ಯಾಳಗಿ ವಂದಿಸಿದರು. ಎಂ.ಎನ್. ಕಾಮನಹಳ್ಳಿ ಕಾರ್ಯಕ್ರಮ ನಿರೂಪಿಸಿದರು.