ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಿವೇಶನಕ್ಕಾಗಿ ಕಾರ್ಮಿಕರ ಧರಣಿ

Mainashree
Updated On : 1 Oct 2013, 10:42 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಸೆ. 30
ಮನೆ ನಿವೇಶನ ಮಂಜೂರಾತಿ ಹಾಗೂ ಬಗರಹುಕುಂ ಸಾಗುವಳಿ ಸಕ್ರಮಕ್ಕಾಗಿ ಒತ್ತಾಯಿಸಿ ಕೃಷಿ ಕೂಲಿಕಾರರು ವಿಶೇಷ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸೋಮವಾರ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದಾರೆ.
ಧರಣಿಯ ನೇತೃತ್ವವಹಿಸಿದ ಕೃಷಿ ಕೂಲಿಕಾರರ ಸಂಘದ ತಾಲೂಕಾಧ್ಯಕ್ಷ ಬಾಲು ರಾಠೋಡ ಮಾತನಾಡಿ, ರಾಜ್ಯದ ವಿವಿಧ ಜಿಲ್ಲೆಗಳ ಬಡ ಬಗರಹುಕುಂ ಸಾಗುವಳಿದಾರರು ಹಾಗೂ ಭೂರಹಿತ ಅರಣ್ಯ ಭೂಮಿ ಸಾಗುವಳಿದಾರರು, ಸರ್ಕಾರಿ ಜಾಗೆಗಳಲ್ಲಿ ಮನೆ ಕಟ್ಟಿಕೊಂಡ ಬಡವರು, ಜತೆಗೆ ಸ್ವಂತ ನಿವೇಶನ ಇಲ್ಲದವರು ಕಳೆದ 2 ವರ್ಷದಿಂದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಆಯಾ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಲ್ಲದೆ ಸಾಮೂಹಿಕ ಹೋರಾಟಗಳನ್ನು ಮಾಡಿದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸದಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು.
ಪುರಸಭೆ ಸದಸ್ಯ ಎಂ.ಎಸ್. ಹಡಪದ ಮಾತನಾಡಿ, ಬಗರಹುಕುಂ ಸಾಗುವಳಿದಾರರಿಗೆ ತಕ್ಷಣವೇ ಶಾಸಕರ ಅಧ್ಯಕ್ಷತೆಯಲ್ಲಿ ಭೂ ವಿತರಣಾ ಮಂಡಳಿ ರಚಿಸಿ ಪಟ್ಟಣ ಸೇರಿದಂತೆ ರಾಜೂರ, ದಿಂಡೂರ, ಬೈರಾಪುರ, ನಾಗರಸಕೊಪ್ಪ ಮಾಟರಂಗಿ, ಕುಂಟೋಜಿ, ಜಿಗೇರಿ, ಶಾಂತಗೇರಿ, ಬೊಮ್ಮಸಾಗರ, ಬೆಣಚಮಟ್ಟಿ, ಗ್ರಾಮ ವ್ಯಾಪ್ತಿಯಲ್ಲಿನ ಜನತೆಗೆ ಹಕ್ಕುಪತ್ರ ವಿತರಿಸಿ ಜಮೀನುಗಳನ್ನು ಕೂಡಿ ನಕ್ಷೆ ಮಾಡಿ ಜಂಟಿ ಖಾತೆಯಲ್ಲಿನ ಹೆಸರುಗಳನ್ನು ಬೇರ್ಪಡಿಸಿ ಪ್ರತ್ಯೇಕ ಉತಾರ ನೀಡಬೇಕು. ರೋಣ ಮತ್ತು ಗಜೇಂದ್ರಗಡ ಪಟ್ಟಣದಲ್ಲಿನ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಸಿಬ್ಬಂದಿ, ಸೌಕರ್ಯ ಒದಗಿಸಲು ಮುಂದಾಗಬೇಕು ಎಂದರು.
ಹೋರಾಟವನ್ನು ಉದ್ದೇಶಿಸಿ ಪೀರು ರಾಠೋಡ, ಮಾರುತಿ ಚಿಟಗಿ, ಬಿ.ಎಸ್. ಶೀಲವಂತರ, ಕಳಕೇಶ ಉಕ್ಕಿಸಲ ಮಾತನಾಡಿದರು. ಇದಕ್ಕೂ ಮುನ್ನ ಬೆಳಗ್ಗೆ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ದುರ್ಗಾ ವೃತ್ತ, ಬಸವೇಶ್ವರ ವೃತ್ತ, ಹಾಗೂ ಮೈಸೂರ ಮಠ ರಸ್ತೆ ಮೂಲಕ ಪ್ರತಿಭಟನಾ ರ್ಯಾಲಿ ನಡೆಸಿ, ವಿಶೇಷ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಅಹೋ ರಾತ್ರಿ ಧರಣಿಗೆ ಮುಂದಾದರು. ಸಂಜೆ 6 ಗಂಟೆಯಾದರೂ ಸಂಬಂಧಪಟ್ಟ ಅಧಿಕಾರಿಗಳು ಪ್ರತಿಭಟನಾಕಾರರತ್ತ ಸುಳಿಯಲಿಲ್ಲ. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಧರಣಿ ಮುಂದುವರಿಸಿದರು.
ಸಕ್ರಪ್ಪ ಮಾಳೋತ್ತರ, ಬಾಲಕೃಷ್ಣ ಜಾಡಬಂಡಿ, ಶಿವಾನಂದ ಭೋಸಲೆ, ಶರಣಯ್ಯ ಸೂಗೀರಯ್ಯನಮಠ, ಎಚ್ಚರಪ್ಪ ಬಡಿಗೇರ, ಕರಿಯಪ್ಪ ಗುರಿಕಾರ, ಫಕೀರಪ್ಪ ಸೊಬರದ, ಕಳಕಪ್ಪ ಹೊಸಮನಿ, ತುಳಜವ್ವ ರಾಠೋಡ, ಲಕ್ಷ್ಮವ್ವ ಮಾಳೋತ್ತರ, ನೀಲವ್ವ ಗುರಿಕಾರ, ಕರಿಯಪ್ಪ ಮಾದರ, ಉಮೇಶ ಹೊಸಮನಿ ಇತರರು ಪ್ರತಿಭಟನೆಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement