ಕಾಂಗ್ರೆಸ್ ಅಭಿವೃದ್ಧಿಯೇ ನನಗೆ ಶ್ರೀರಕ್ಷೆ: ಸಲೀಂ
ಕನ್ನಡಪ್ರಭ ವಾರ್ತೆ, ರೋಣ, ಮಾ. 30
ರಾಜ್ಯ ಮತ್ತು ಕೇಂದ್ರದ ಅಭಿವೃದ್ಧಿ ಮತ್ತು ಉತ್ತಮ ಆಡಳಿತ ಸಾಧನೆಯೆ ಈ ಬಾರಿ ನನ್ನ ಗೆಲವಿಗೆ ಶ್ರೀರಕ್ಷೆಯಾಗಲಿದೆ ಎಂದು ಹಾವೇರಿ ಲೋಕಸಭೆ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು.
ಭಾನುವಾರ ಪಟ್ಟಣದ ವಿವಿಧ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಲೋಕಸಭೆ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭೆಗಳಲ್ಲಿ ಕಳೆದ ಬಾರಿಗಿಂತ ಈ ಬಾರಿ ಚಿತ್ರಣ ಸಂಪೂರ್ಣ ಬದಲಾಗಿದೆ. ಈ ಬಾರಿ ಕಾಂಗ್ರೆಸ್ 7 ಕಡೆಗಳಲ್ಲಿ ಗೆಲುವು ಸಾಧಿಸಿದೆ. ಇದನ್ನು ಗಮನಿಸಿದಲ್ಲಿ ಜನತೆಯ ಹುರುಪು, ಹುಮ್ಮಸ್ಸು, ಪ್ರೀತಿ, ವಿಶ್ವಾಸ ಕಾಂಗ್ರೆಸ್ನತ್ತವಿದೆ ಎಂಬುದು ಸ್ಪಷ್ಟವಾಗುತ್ತದೆ. ರಾಜ್ಯದ ವಿವಿಧ ಮತ್ತು ಹಾವೇರಿ ಲೋಕಸಭೆ ಮತಕ್ಷೇತ್ರದಲ್ಲಿ ಯಾವುದೇ ರೀತಿಯಿಂದ ಮೋದಿ ಅಲೆಯಿಲ್ಲ. ಇಲ್ಲಿರುವುದು ಕೇವಲ ಕಾಂಗ್ರೆಸ್ ಬಿರುಗಾಳಿ. ಕಾಂಗ್ರೆಸ್ ಬಿರುಗಾಳಿಗೆ ಮೋದಿ ಅಲೆ ತತ್ತರಿಸಲಿದೆ ಎಂದರು.
ಸ್ವಂತಿಕೆಯಿಲ್ಲ: ಸಂಸದ ಶಿವಕುಮಾರ ಉದಾಸಿ ಈ ಕ್ಷೇತ್ರದಲ್ಲಿ ಕೇಳಿಕೊಳ್ಳವಂತಹ ಮತ್ತು ಹೇಳುವಂತಹ ಯಾವುದೇ ಅಭಿವೃದ್ಧಿ ಮಾಡಿರುವುದಿಲ್ಲ. ಒಂದು ಬಾರಿಯೂ ಜನತೆಯ ಸಮಸ್ಯೆಗಳತ್ತ ತಿರುಗಿ ನೋಡಿರುವುದಿಲ್ಲ. ಶಿವಕುಮಾರ ಉದಾಸಿ ಅವರೇ ಕ್ಷೇತ್ರದಲ್ಲಿ ಒಂದಾದರೂ ಜನಸಂಪರ್ಕ ಸಭೆಗೆ ಹಾಜರಾಗಿದ್ದಾರಾ? ಯಾವುದಾದರೊಂದು ಉತ್ತಮ ಅಭಿವೃದ್ಧಿ ಕೆಲಸದ ಕುರಿತು ಹೇಳಿ ನೋಡೋಣ ಎಂದು ಪ್ರಶ್ನಿಸಿದರು.
ಹತ್ತಿಕುವ ತಂತ್ರ ನಡೆದಿಲ್ಲ: ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಚಿವರಾದ ಎಚ್.ಕೆ. ಪಾಟೀಲರಿಗೂ ನಮಗೂ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ಅವರು ನನಗೆ ಯಾವಾಗಲೂ ಮಾರ್ಗದರ್ಶಿಕರು, ಹಿತೈಷಿಗಳಾಗಿದ್ದಾರೆ. ನನ್ನ ಪ್ರತಿ ಕಾರ್ಯದಲ್ಲಿ ಅವರು ಭಾಗಿಯಾಗುತ್ತಿದ್ದಾರೆ. ಅವರಿಂದ ನನಗೆ ಸಂಪೂರ್ಣ ಬೆಂಬಲವಿದೆ. ಮೊನ್ನೆ ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಎಚ್.ಕೆ. ಪಾಟೀಲರೇ ಮುಂದಿದ್ದರು. ಇಂತಹ ಪ್ರಶ್ನೆಗಳಿಗೆ ಇಂದೇ ತೆರೆಬೀಳಲಿ ಎಂದರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನ, ಮಾರುತೇಶ್ವರ ದೇವಸ್ಥಾನ ಮತ್ತು ಗುಲಗಂಜಿ ಮಠಗಳಿಗೆ ತೆರಳಿ ದರ್ಶನ ಪಡೆದರು. ಬಳಿಕ ಮನೆ ಮನೆಗಳಿಗೆ ತೆರಳಿ ಮತ ಯಾಚಿಸಿದರು. ಬಳಿಕ ತಾಲೂಕಿನ ಇಟಗಿ ಭೀಮಾಂಭೀಕಾ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು.
ಶಾಸಕರಾದ ಜಿ.ಎಸ್. ಪಾಟೀಲ, ರಾಮಕೃಷ್ಣ ದೊಡ್ಡಮನಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಗಡ್ಡದ್ದೇವರಮಠ, ಐ.ಎಸ್. ಪಾಟೀಲ, ಟಿ. ಈಶ್ವರ, ಮಿಥುನ ಪಾಟೀಲ, ಅಶೋಕ ಬಾಗಮರ, ರವಿ ದಂಡಿನ, ವಿ.ಆರ್. ಗುಡಿಸಾಗರ, ಹುಮಾಯೂನ ಮಾಗಡಿ, ಯೂಸೂಫ್ ಇಟಗಿ, ದಶರಥ ಗಾಣಿಗೇರ, ಪರಶುರಾಮ ಅಳಗವಾಡಿ, ವಿ.ಬಿ. ಸೋಮನಕಟ್ಟಿಮಠ, ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ, ಮಂಜುನಾಥ ಹಾಳಕೇರಿ, ಸಂಗು ನವಲಗುಂದ, ಇನಾಯತ ತರಪದಾರ ಮುಂತಾದವರು ಇದ್ದರು.