ಪ್ರಜಾತಂತ್ರ ಬಲಪಡಿಸಲು ತಪ್ಪದೇ ಮತ ಚಲಾಯಿಸಿ
ಕನ್ನಡಪ್ರಭ ವಾರ್ತೆ, ಗದಗ, ಏ. 1
ನಾಡಿನ ಅಭಿವೃದ್ಧಿಗೆ ಸುಭದ್ರ ಆಡಳಿತಕ್ಕೆ ಪ್ರಜಾಪ್ರತಿನಿಧಿ ವ್ಯವಸ್ಥೆ ಮುಖ್ಯವಾಗಿದೆ. ಜನರು ತಮ್ಮ ಜನಪ್ರತಿನಿಧಿಗಳ ಆಯ್ಕೆಗಾಗಿ ಮತದಾನ ಕ್ರಿಯೆಯಲ್ಲಿ ತಪ್ಪದೇ ಭಾಗವಹಿಸಲು ಗದಗ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಿ. ರೇವಣ್ಣ ಕರೆ ನೀಡಿದರು.
ಅವರು ಮಂಗಳವಾರ ಬೆಟಗೇರಿ ಬಸ್ ನಿಲ್ದಾಣದಲ್ಲಿ ವಾರ್ತಾ ಇಲಾಖೆ ಹಾಗೂ ಜಿಲ್ಲಾ ಮತ್ತು ತಾಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಮತದಾರ ಜಾಗೃತಿಗಾಗಿ ಆಯೋಜಿಸಿದ ಬೀದಿನಾಟಕ ಉದ್ಘಾಟಿಸಿ ಮಾತನಾಡಿದರು. ಕಾರಣ ಏನೇ ಇದ್ದರೂ ಮತದಾನವನ್ನು ಅರ್ಹ ಅದರಲ್ಲೂ ಯುವ ಮತದಾರರು ಉತ್ಸಾಹದಿಂದ ಮಾಡಬೇಕು. ಚುನಾವಣಾ ಆಯೋಗ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಪ್ರತಿನಿಧಿಗಳ ಆಯ್ಕೆ ಪಟ್ಟಿಯಲ್ಲಿ ಮತದಾರರಿಗೆ ಯಾರನ್ನೂ ಆಯ್ಕೆ ಮಾಡುವ ಮನಸ್ಸಿಲ್ಲದಿದ್ದರೆ 'ಮತ ನಿರಾಕರಣೆ' ಹಕ್ಕು ನೀಡಿದೆ. ಕಾರಣ ಪ್ರತಿಯೊಬ್ಬರೂ ಏ. 17ರಂದು ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ನಡೆಯುವ ಚುನಾವಣೆಯಲ್ಲಿ ತಪ್ಪದೆ ಮತದಾನ ಮಾಡಬೇಕು ಎಂದು ಮನವಿ ಮಾಡಿದರು. ಪ್ರಜಾತಂತ್ರದಲ್ಲಿ ಜನಪ್ರತಿನಿಧಿಗಳ ಪಾತ್ರ ನಿರ್ಣಯಿಸಲು ಒಂದೇ ಒಂದು ಮತ ಕೂಡ ಕಾರಣವಾಗಬಲ್ಲದು. ಸಮಸ್ಯೆಗಳ ಕುರಿತು ಮಾತನಾಡುವುದಕ್ಕಿಂತ ಅವುಗಳನ್ನು ಪರಿಹರಿಸಬಲ್ಲ ವ್ಯವಸ್ಥೆ, ಪ್ರಜಾಪ್ರತಿನಿಧಿ ಆಯ್ಕೆ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸುವಂತೆ ಕರೆ ನೀಡಿದರು. ಅನಂತರ ಗದಗ ಶಹರದ ಟಾಂಗಾ ಕೂಟದಲ್ಲಿ ಮತದಾರ ಜಾಗೃತಿಯ ಬೀದಿ ನಾಟಕ ಪ್ರದರ್ಶಿಸಲಾಯಿತು. ಅಲ್ಲದೇ ಅರುಣೋದಯ ಕಲಾವಿದರ ತಂಡ ನಗರದ ತೋಂಟದಾರ್ಯ ಮಹಿಳಾ ಕಾಲೇಜಿನಲ್ಲಿ ಯುವ ಮತದಾರ ಜಾಗೃತಿ ಕುರಿತು ಬೀದಿ ನಾಟಕ ಪ್ರದರ್ಶಿಸಿತು.