ಯುಗಾದಿ ಹೊಸ ವರ್ಷದ ಮುನ್ನುಡಿ: ಶಾಂತಲಿಂಗ ಶ್ರೀ
ಗದಗ: ಯುಗಾದಿ ಹಬ್ಬವು ಹೊಸವರ್ಷದ ಮುನ್ನುಡಿಯಾಗಿದ್ದು, ಜೀವನದಲ್ಲಿ ಬರುವ ನೋವು-ನಲಿವುಗಳನ್ನು ಬೇವು-ಬೆಲ್ಲದಂತೆ ಸಮನಾಗಿ ಸವಿಯುವ ಮೂಲಕ ಹೊಸವರ್ಷವನ್ನು ಸಂಭ್ರಮದಿಂದ ಸ್ವೀಕರಿಸುವಂತೆ ನರಗುಂದ ತಾಲೂಕಿನ ಬೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಹೇಳಿದರು.
ಅವರು ಸೋಮವಾರ ರಾತ್ರಿ ತಾಲೂಕಿನ ಕೋಟುಮಚಗಿ ಗ್ರಾಮದ ದುರ್ಗಾದೇವಿ ಸಮುದಾಯ ಭವನದಲ್ಲಿ ದುರ್ಗಾದೇವಿ ಜಾತ್ರಾ ಮಹೋತ್ಸವ, ಯುಗಾದಿ ಹಬ್ಬದ ಅಂಗವಾಗಿ ಶ್ರೀದುರ್ಗಾ ಗೆಳೆಯರ ಮತ್ತು ಹಾಗೂ ಶ್ರೀದುರ್ಗಾದೇವಿ ಟ್ರಸ್ಟ್ ಕಮಿಟಿಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಹಾಗೂ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಯುಗಾದಿಯೇ ವರ್ಷದ ಮೊದಲ ದಿನವಾಗಿದೆ. ಆದರೆ, ಇಂದು ಪಾಶ್ಚಿಮಾತ್ಯ ಸಂಸ್ಕೃತಿಯ ಅಳವಡಿಕೆಯಿಂದಾಗಿ ಪಾಶ್ಚಿಮಾತ್ಯರ ದಿನದರ್ಶಿಕೆಗೆ ನಾವೆಲ್ಲ ಹೊಂದಿಕೊಂಡಿದ್ದೇವೆ. ಹೊಸ ವರ್ಷಕ್ಕೆ ಮುನ್ನುಡಿಯಾಗಲಿರುವ ಈ ಯುಗಾದಿ ಹಬ್ಬದಂದು ಕೋಟುಮಚಗಿ ಗ್ರಾಮದ ಆದಿದೇವತೆ ದುರ್ಗಾದೇವಿ ಜಾತ್ರಾಮಹೋತ್ಸವವನ್ನು ನೂರಾರು ವರ್ಷಗಳಿಂದಲೂ ಆಚರಿಸಿಕೊಂಡು ಬರುತ್ತಿರುವುದು ಅಭಿನಂದನಾರ್ಹ. ಎಲ್ಲ ಗ್ರಾಮಗಳಲ್ಲಿ ಗ್ರಾಮದಲ್ಲಿಯೇ ಯುಗಾದಿ ಹಬ್ಬವನ್ನು ಆಚರಿಸುವುದು ನಾವು ಕಂಡಿದ್ದೇವೆ. ಆದರೆ, ಕೋಟುಮಚಗಿ ಗ್ರಾಮಸ್ಥರು ಬೇರೆ ಊರಿಗೆ ಸಾವಿರಾರು ಸಂಖ್ಯೆಯಲ್ಲಿ ತೆರಳಿ ಅಲ್ಲಿ ಯುಗಾದಿ ಹಬ್ಬವನ್ನು ಆಚರಿಸುವುದು ವಿಶೇಷ. ಕೋಟುಮಚಗಿ ಗ್ರಾಮದ ದುರ್ಗಾದೇವಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಬಳಿಯ ತುಂಗಭದ್ರಾ ನದಿಗೆ ಪಾದಯಾತ್ರೆಯ ಮೂಲಕ ತೆರಳಿ 101 ಕುಂಭಜಲಾಭಿಷೇಕ ಕಾರ್ಯಕ್ರಮವನ್ನು ಗ್ರಾಮದ ಹಿರಿಯರು ಹಾಗೂ ಸಂಘಟನೆಯವರು ಹಮ್ಮಿಕೊಳ್ಳುತ್ತಾ ಬಂದಿರುವುದು ಇತರರಿಗೆ ಮಾದರಿಯಾಗಿದೆ ಎಂದರು. ಗ್ರಾಮೀಣ ಕ್ರೀಡೆಗಳು ನಶಿಸುತ್ತಿರುವ ಸಂದರ್ಭದಲ್ಲಿ ಶ್ರೀದುರ್ಗಾ ಗೆಳೆಯರ ಬಳಗದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ರಂಗೋಲಿ ಸ್ಪರ್ಧೆಯು ಮತ್ತೆ ಗ್ರಾಮೀಣ ಕ್ರೀಡೆಗಳನ್ನು ಮರುಕಳಿಸುವಂತೆ ಮಾಡಿದೆ. ಇಂದು ಪಟ್ಟಣ, ನಗರ ಪ್ರದೇಶಗಳಲ್ಲಿ ಮಾಯವಾಗಿರುವ ರಂಗೋಲಿಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸಂಘಟನೆಯವರು ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆ ಹಾಗೂ ಗ್ರಾಮೀಣ ಭಾಗದಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರಹಾಕಲು ರಸಮಂಜರಿ ಕಾರ್ಯಕ್ರಮಗಳು ಸಹಕಾರಿಯಾಗಿದ್ದು, ಇದೇ ರೀತಿ ಸಂಘಟನೆಯ ನೇತೃತ್ವದಲ್ಲಿ ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸೂಚಿಸಿದರು. ಸಾನ್ನಿಧ್ಯ ವಹಿಸಿದ್ದ ಗಂಗಾಧರಯ್ಯ ಆಶೀರ್ವಚನ ನೀಡಿದರು. ಈಚೆಗೆ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿ ಹೇಮಾ ಇಟಗಿ ಪ್ರಥಮ, ರಂಜಿತಾ ಪಟ್ಟಣದ ದ್ವಿತೀಯ ಹಾಗೂ ವಿಜಯಲಕ್ಷ್ಮಿ ನೆಲುಗಿ ತೃತೀಯ ಸ್ಥಾನ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಬೈರನಹಟ್ಟಿಯ ಶಾಂತಲಿಂಗ ಶ್ರೀಗಳನ್ನು ಹಾಗೂ ಶ್ರೀದುರ್ಗಾದೇವಿ ಟ್ರಸ್ಟ ಕಮಿಟಿಯ ಅಧ್ಯಕ್ಷ ಹುಚ್ಚೀರಪ್ಪ ಬಡಿಗೇರ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಕಾಶಪ್ಪ ನೀರಲಗಿ, ಕಾರ್ಯದರ್ಶಿ ಎಂ.ಜಿ. ಪಾಟೀಲ, ಮಲ್ಲಪ್ಪ ಕರಡಿ, ಉಮೇಶ ಬೂದಿಹಾಳ, ಈರಪ್ಪ ಚವಡಿ, ಚಿದಾನಂದ ಹೊಸಮನಿ, ಈರಪ್ಪ ತಳವಾರ, ಶಿಕ್ಷಕ ಹಳ್ಳಿಗುಡಿ ಮತ್ತು ಶ್ರೀದುರ್ಗಾ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ನೆಲುಗಿ ಪ್ರಾರ್ಥಿಸಿದರು. ಮಂಜುನಾಥ ಬ್ಯಾಳಿ ಸ್ವಾಗತಿಸಿದರು. ಶರಣಪ್ಪ ಗೋದಿ ನಿರೂಪಿಸಿದರು. ನಂತರ ಎಸ್.ಕೆ. ಅಕಾಡೆಮಿ ಹಾಗೂ ಒಕೆ ಅಕಾಡೆಮಿ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.