ವ್ಯಕ್ತಿ, ಪಕ್ಷಕ್ಕಿಂತ ದೇಶ ದೊಡ್ಡದು
ನರೇಗಲ್ಲ: ವ್ಯಕ್ತಿ, ಪಕ್ಷಕ್ಕಿಂತ ದೇಶ ದೊಡ್ಡದು. ದೇಶಕ್ಕೆ ಉತ್ತಮ ಪ್ರಧಾನಿಯೆಂದು ಮನಗಂಡಿರುವ ನಾನು ಮತ್ತು ಯಡಿಯೂರಪ್ಪ ಅವರು ನಮ್ಮೆಲ್ಲ ಪ್ರತಿಷ್ಠೆಗಳನ್ನು ಬದಿಗಿಟ್ಟು ಮತ್ತೆ ಬಿಜೆಪಿ ಸೇರಿ, ದೇಶ ಕಟ್ಟಲು ಮುಂದಾಗಿದ್ದೇವೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ಅವರು ಭಾನುವಾರ ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಹಾವೇರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಮತಯಾಚನೆ ಮಾಡಿದರು. ಜಗತ್ತಿನಲ್ಲಿ ಭಾರತ ತಲೆ ಎತ್ತಿ ನಿಲ್ಲಬೇಕಿತ್ತು. ಆದರೆ ಹತ್ತು ವರ್ಷಗಳ ಕಾಲ ದೇಶದಲ್ಲಿ ಅಧಿಕಾರ ನಡೆಸಿರುವ ಯುಪಿಎ, ದೇಶ ತಲೆ ತಗ್ಗಿಸುವಂತೆ ಮಾಡಿದೆ. ಅದನ್ನು ಹೊಡೆದೋಡಿಸಿ ಸುಭದ್ರ ಸರ್ಕಾರ ನಿರ್ಮಿಸಲು ನಿಮಗೆ ಒಳ್ಳೆಯ ಅವಕಾಶ ಒದಗಿ ಬಂದಿದೆ ಎಂದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಈ ದೇಶಕ್ಕೆ ಏನಾದರೂ ಒಳ್ಳೆಯದಾಗಿದ್ದರೆ ಅದು ಕೆಲವೇ ಕೆಲವು ಕಾಲ ಈ ದೇಶ, ರಾಜ್ಯ ಆಳಿದ ಎನ್ಡಿಎ, ಬಿಜೆಪಿಯಿಂದ ಮಾತ್ರ ಎಂದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಕಳಕಪ್ಪ ಬಂಡಿ, ಅಭ್ಯರ್ಥಿ ಶಿವಕುಮಾರ ಉದಾಸಿ, ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್. ಕರಿಗೌಡರ ಮಾತನಾಡಿದರು. ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ನರೇಗಲ್ಲ ಘಟಕದ ಅಧ್ಯಕ್ಷ ಉಮೇಶ ಸಂಗನಾಳಮಠ, ಪಪಂ ಸದಸ್ಯ ಶಶಿಧರ ಸಂಕನಗೌಡ್ರ, ಯಲ್ಲಪ್ಪ ಮಣ್ಣೊಡ್ಡರ, ಅಂದಪ್ಪ ಮಡಿವಾಳರ ಉಪಸ್ಥಿತರಿದ್ದರು. ಬಸವರಾಜ ಕೊಟಗಿ ಸ್ವಾಗತಿಸಿದರು. ಆರ್.ಜಿ. ಪಾಟೀಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.