ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹೊಸ ಯುಗ ಪ್ರಾರಂಭಕ್ಕೆ ಬಿಜೆಪಿ ಬೆಂಬಲಿಸಿ

Vishwanath S
Updated On : 2 Apr 2014, 11:20 am

ಕನ್ನಡಪ್ರಭ ವಾರ್ತೆ, ಗದಗ, ಮಾ. 30
ದೇಶದ ಭದ್ರತೆ, ಏಕತೆ ಹಾಗೂ ಸರ್ವತೋಮುಖ ಬೆಳವಣಿಗೆಗಾಗಿ ಬಿಜೆಪಿಯನ್ನು ಬೆಂಬಲಿಸುವ ಮೂಲಕ ನರೇಂದ್ರ ಮೋದಿ ಅವರ ಕೈಬಲ ಪಡಿಸಲು ಎಲ್ಲರೂ ಪಣ ತೊಡಬೇಕಿದೆ ಎಂದು ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಹೇಳಿದರು.
ಅವರು ಭಾನುವಾರ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪಿ.ಸಿ. ಗದ್ದಿಗೌಡ್ರ ಪರ ಮತಯಾಚನೆ ಅನಂತರ ಏರ್ಪಡಿಸಲಾಗಿದ್ದ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದರು.
ವಿಶ್ವ ಹೊಸ ಸಂವತ್ಸರದ ಪ್ರಾರಂಭದಲ್ಲಿದ್ದು, ಭಾರತವನ್ನು ಗಮನಿಸುತ್ತದೆ. ಅದಕ್ಕಾಗಿ ನಾವೆಲ್ಲಾ ಸನ್ನದ್ಧರಾಗಬೇಕಿದೆ. ಸಮಸ್ಯೆಗಳನ್ನು ಕಳೆದ 60 ವರ್ಷಗಳಿಂದ ಜೀವಂತವಾಗಿರಿಸಿ ಅದರ ಆಧಾರದಲ್ಲಿಯೇ ಮತ ಪಡೆದು ರಾಜಕಾರಣ ಮಾಡುವ ಕಾಂಗ್ರೆಸ್ ವ್ಯವಸ್ಥೆಯನ್ನು ಸಂಪೂರ್ಣ ಕಿತ್ತು ಹಾಕಬೇಕಿದೆ. 10 ವರ್ಷಗಳ ಆಡಳಿತದಲ್ಲಿ ಮಾಡಿರುವ ಹಗರಣಗಳಿಂದ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯರ ಬದುಕು ದುಸ್ತರಗೊಂಡಿದೆ ಎಂದರು.
ಮಾಜಿ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಸದ್ಯದ ಚುನಾವಣೆ ದೇಶದ ಭದ್ರತೆ, ಸ್ವಾಭಿಮಾನ ಹಾಗೂ ಪ್ರಗತಿ ಸಂಕೇತವಾಗಿದೆ. ಹಿಂದಿನ ಚುನಾವಣೆಯಲ್ಲಿ ನಾವು ಹಾಗೂ ನಮ್ಮ ನಾಯಕರು ಮಾಡಿದ ಕೆಲ ತಪ್ಪಿನಿಂದಾಗಿ ಮತ ವಿಭಜನೆಗೊಂಡು ಪಕ್ಷದ ಸೋಲಿಗೆ ಕಾರಣವಾಯಿತು ಎಂದರು.
ದೇಶದ ಅಭಿವೃದ್ಧಿ ಮತ್ತು ಏಕತೆಯನ್ನು ಗಮನದಲ್ಲಿಟ್ಟುಕೊಂಡು ನಾವೆಲ್ಲ ಮತ್ತೆ ಒಂದಾಗಿ ಬಂದಿದ್ದು, ಯಾವ ಕಾರಣಕ್ಕೂ ಅಗಲುವುದಿಲ್ಲ. ಶಕ್ತಿಹೀನ ಕಾಂಗ್ರೆಸ್ ಆಡಳಿತವನ್ನು ಹಿಮ್ಮೆಟ್ಟಿಸಿ, ಸಮಗ್ರ ಅಭಿವೃದ್ಧಿಯ ಸಾಮರ್ಥ್ಯ ಉಳ್ಳ ನರೇಂದ್ರ ಮೋದಿ ಆಯ್ಕೆ ಮಾಡುವ ನಿಟ್ಟಿನಲ್ಲಿ ನಾವೆಲ್ಲಾ ಭಿನ್ನಾಭಿಪ್ರಾಯ ಬದಿಗಿರಿಸಿ ಒಂದಾಗಬೇಕಿದೆ. ಕಳೆದ 10 ತಿಂಗಳಿಂದ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ಸಿಗರು, ನಮ್ಮ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳನ್ನೇ ಉದ್ಘಾಟನೆ ಮಾಡುತ್ತಿದ್ದು, ಮತ್ತೆ ಕೆಲವಡೆ ಈಗಾಗಲೇ ಚಾಲನೆ ಕಂಡ ಕಾಮಗಾರಿಗೆ ಮರು ಚಾಲನೆ ನೀಡುವ ಮೂಲಕ ಕೀಳು ಪ್ರಚಾರ ಹುಚ್ಚಿಗೆ ಬಿದ್ದಿದ್ದಾರೆ ಎಂದರು.
ಬಾಗಲಕೋಟೆ ಕ್ಷೇತ್ರದ ಅಭ್ಯರ್ಥಿ ಪಿ.ಸಿ. ಗದ್ದಿಗೌಡ್ರ ಮಾತನಾಡಿ, ದೂರದೃಷ್ಟಿ ಹಾಗೂ ನಿರ್ದಿಷ್ಟ ಗುರಿ ಇಲ್ಲದೇ ದೇಶವನ್ನು ಆಡಳಿತ ಕಾಂಗ್ರೆಸ್ ಸರ್ಕಾರದ ಆಡಳಿತ ಹಾಗೂ ಅಟಲ್‌ಬಿಹಾರಿ ವಾಜಪೇಯಿ ಅವರ ಆಡಳಿತ ಅವಧಿಯನ್ನು ಮತದಾರರು ಗಮನಿಸಬೇಕಿದೆ. ನರೇಂದ್ರ ಮೋದಿ ಅವರ ಪರವಾದ ಅಲೆ ದೇಶಾದ್ಯಂತ ಬೀಸುತ್ತಿದ್ದು, ಅವರನ್ನು ಪ್ರಧಾನ ಮಂತ್ರಿ ಮಾಡುವ ನಿಟ್ಟಿನಲ್ಲಿ ನೀವೆಲ್ಲಾ ಬಿಜೆಪಿಗೆ ಮತ ಹಾಕಬೇಕು ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಕಳಕಪ್ಪ ಬಂಡಿ, ಜಿಪಂ ಸದಸ್ಯೆ ಚಂಬವ್ವ ಪಾಟೀಲ, ನವೀನ ಗುಳಗಣ್ಣವರ, ಶಾಂತಪ್ಪ ಕಲಕೇರಿ, ಮಹೇಶ ಮುಸ್ಕಿನಬಾವಿ, ಎಂ.ಎಸ್. ಕರಿಗೌಡ್ರ, ಎಸ್.ಎಚ್. ಶಿವನಗೌಡ್ರ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು. ಇದೇ ಸಂದರ್ಭ ಬಿಎಸ್‌ಆರ್ ಸೇರಿದಂತೆ ಹಲವಾರು ಪಕ್ಷದಿಂದ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು.
ಬಡತನ ಅರಿಯದ ವ್ಯಕ್ತಿ, ಬಡವನ ಸಮಸ್ಯೆಗೆ ಸ್ಪಂದಿಸಲಾರ
ಗದಗ: ಸದ್ಯದ ಲೋಕಸಭಾ ಚುನಾವಣೆ ಒಂದೆಡೆ, ಬಾಯಲ್ಲಿ ಬಂಗಾರದ ಚಮಚ ಇಟ್ಟುಕೊಂಡೇ ಹುಟ್ಟಿದ ಶ್ರೀಮಂತ ವಂಶಪಾರಂಪರ್ಯದ ರಾಜಕಾರಣ ಹಾಗೂ ಚಹಾ ಮಾರುತ್ತಲೇ ಜೀವನ ಕಳೆದು ದೇಶಕ್ಕಾಗಿ ತಮ್ಮನ್ನು ಅರ್ಪಿಸಿಕೊಳ್ಳುತ್ತಿರುವ ವ್ಯಕ್ತಿಯ ನಡುವಿನ ಸಂಘರ್ಷ ಎಂದು ವ್ಯಾಖ್ಯಾನಿಸುವ ಮೂಲಕ ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸ್ಟಾರ್ ಪ್ರಚಾರಕ ಬಿ. ಶ್ರೀರಾಮಲು ರಾಹುಲ್ ಗಾಂಧಿ ಹಾಗೂ ಮೋದಿ ನಡುವಿನ ಅಂತರವನ್ನು ಜನತೆಗೆ ತಿಳಿಸಿದರು.
ಭಾನುವಾರ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಶ್ರೀರಾಮುಲು, ಬಡತನ ಅರಿಯದ ವ್ಯಕ್ತಿ, ಯಾವ ಕಾಲಕ್ಕೂ ಬಡವನ ಸಮಸ್ಯೆಗೆ ಸ್ಪಂದಿಸಲಾರ. ಕೇವಲ ಚುನಾವಣೆ ಸಂದರ್ಭ ಮಾತ್ರ ಜನರತ್ತ ಬರುವ ಇವರೆಲ್ಲ ನಾಯಕರಾಲು ಸಾಧ್ಯವಿಲ್ಲ. ಚುನಾವಣೆ ಘೋಷಣೆಯಾಗುವ ವರೆಗೂ ಮನೆಯಲ್ಲಿಯೇ ಇದ್ದ ಇವರು, ಇಂದು ಜನರ ಮಧ್ಯೆ ನಾವಿದ್ದೇವೆ ಎಂದು ಹೇಳುತ್ತಿರುವುದು ತೀರಾ ಹಾಸ್ಯಾಸ್ಪದ ಸಂಗತಿ ಎಂದು ಕಾಂಗ್ರೆಸ್ಸಿಗರನ್ನು ಟೀಕಿಸಿದರು.
ಆದರೆ, ಬಡವರಾಗಿ ಹುಟ್ಟಿ ಚಹಾ ಮಾರುತ್ತಲೇ ಜೀವನ ಕಟ್ಟಿಕೊಂಡು ರಾಜಕೀಯಕ್ಕೆ ಕಾಲಿಟ್ಟು, 12 ವರ್ಷಗಳಿಂದ ಗುಜರಾತ್ ರಾಜ್ಯವನ್ನು ದೇಶದಲ್ಲಿಯೇ ಅಭಿವೃದ್ಧಿ ದೃಷ್ಟಿಯಿಂದ ನಂಬರ್ 1 ಸ್ಥಾನಕ್ಕೆ ನಿಲ್ಲಿಸಿದ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ದೇಶ ಕಟ್ಟಲು ನಾವೆಲ್ಲ ಸನ್ನದ್ಧರಾಗೋಣ. ಅದಕ್ಕಾಗಿ ನಾವೆಲ್ಲ ಏ. 17ರಂದು ಬಿಜೆಪಿಗೆ ಮತ ನೀಡುವ ಮೂಲಕ ಹೊಸ ಮನ್ವಂತರಕ್ಕೆ ಕಾರಣವಾಗೋಣ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement