ಕಾಂಗ್ರೆಸ್ ಮುಖಂಡರ ಬಿಜೆಪಿ ಸೇರ್ಪಡೆ
ಹಾನಗಲ್ಲ: ತಾಲೂಕಿನಲ್ಲಿ ಲೋಕಸಭಾ ಚುನಾವಣೆ ಕಾವೇರುತ್ತಿದ್ದು, ಕಾಂಗ್ರೆಸ್-ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿರುವುದರ ನಡುವೆಯೇ ಕಾರ್ಯಕರ್ತರು, ಮುಖಂಡರು ಪಕ್ಷ ಬಿಟ್ಟು ಪಕ್ಷ ಸೇರುವ ಪಕ್ಷಾಂತರ ಪ್ರಕ್ರಿಯೆ ಚುರುಕುಗೊಂಡಿದೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಮಾಜಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಿ.ಎಸ್. ದೇಶಪಾಂಡೆ ಮಾತನಾಡಿ, ದೇಶ ಇಂದು ಅಭದ್ರತೆ ಎದುರಿಸುತ್ತಿದ್ದು ಗಂಡಾಂತರದಲ್ಲಿದೆ. ಅತಂತ್ರ ಸರ್ಕಾರ, ಮಿತ್ರ ಪಕ್ಷಗಳು ಅಧಿಕಾರಕ್ಕೆ ಬಂದರೆ ದೇಶವನ್ನು ಸದೃಢಗೊಳಿಸಲು ಸಾಧ್ಯವಿಲ್ಲ. ಮೋದಿಯಂತಹ ಅಭಿವೃದ್ಧಿಪರ ಚಿಂತಕರ ನಾಯಕತ್ವ ಇಂದು ದೇಶಕ್ಕೆ ಬೇಕಾಗಿದೆ. ನಿದ್ರಾವಸ್ಥೆಯಲ್ಲಿ ಮಾತನಾಡುವ ನಾಯಕರು ದೇಶಕ್ಕೆ ಬೇಡವೇ ಬೇಡ. ಯುವ ನಾಯಕತ್ವದ ಅವಶ್ಯಕತೆ ಇದೆ. ಅಲ್ಪಸಂಖ್ಯಾತರು ಬಿಜೆಪಿಗೆ ಮತ ನೀಡುವುದಿಲ್ಲವೆಂಬ ಅಪಪ್ರಚಾರ ನಡೆದಿದ್ದು ಇದು ಶುದ್ಧ ಸುಳ್ಳು. ಈ ಬಾರಿ ಅಲ್ಪಸಂಖ್ಯಾತರು ದೇಶದ ಅಭಿವೃದ್ಧಿಗೆ ಮೋದಿ ಅವರನ್ನು ಬೆಂಬಲಿಸಲಿದ್ದಾರೆ ಎಂದರು. ಇದರೊಟ್ಟಿಗೆ ಮಾಜಿ ಸಚಿವ ಸಿ.ಎಂ. ಉದಾಸಿ ಅವರ ನಿಕಟ ರಾಜಕಾರಣಿ, ಕೆಜೆಪಿ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ, ಹಾನಗಲ್ಲಿನ ಮಾಜಿ ಪುರಸಭಾಧ್ಯಕ್ಷ ಸೈಯ್ಯದ್ ಅಹ್ಮದ್ ಬಾಷಾ ಪೀರಜಾದೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾಶೀನಾಥ ನ್ಯಾಮತಿ, ಸಾಮಾಜಿಕ ಮುಖಂಡ ಸುರೇಶ ಅಗಸನಹಳ್ಳೇರ, ಬಸವಂತಪ್ಪ ತಹಸೀಲ್ದಾರ್, ಬಸವರಾಜ ನರೇಂದ್ರ, ಸೋಮಶೇಖರ ಕೋಡದ, ಶಮಂತಕುಮಾರ ನ್ಯಾಮತಿ, ಆರ್.ಎ. ಸಿಂಧೂರ, ನಿಂಗಣ್ಣ ಆಲದಕಟ್ಟಿ, ಸಿ.ಎಸ್. ಪಾಟೀಲ, ಮಾರುದ್ರಪ್ಪ ದೇಸಾಯಿ, ಮಾರುತಿ ದೇವಗಿರಿ, ಮಂಜುನಾಥ ಕಮಾಟಿ, ಸುರೇಶ ವಡ್ಡರ, ವೆಂಕಟೇಶ ವಡ್ಡರ, ಚಿಕ್ಕಪ್ಪ ತಳವಾರ, ಸತೀಶ ಕ್ಷೌರದ, ಶಂಕ್ರಪ್ಪ ಪೂಜಾರ, ಅಲ್ಲಾವುದ್ದೀನ್ಸಾಬ್, ಶಿವಾನಂದ ಯಲಿಗಾರ, ಮೋಹನ ಕಮಾಟಿ ಮುಂತಾದವರು ಮಾಜಿ ಸಚಿವ ಸಿ.ಎಂ. ಉದಾಸಿ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.