ಕಾಂಗ್ರೆಸ್ನಿಂದ ಜಾತ್ಯತೀತ, ಸುಭದ್ರ ರಾಷ್ಟ್ರ
ಗದಗ: ಜಾತ್ಯತೀತ ಸಮಾಜ, ಸುಭದ್ರ ರಾಷ್ಟ್ರ ಕೇವಲ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಅದಕ್ಕಾಗಿ ಎಲ್ಲರೂ ಕಾಂಗ್ರೆಸ್ ಪಕ್ಷ ಬೆಂಬಲಿಸುವ ಮೂಲಕ ದೇಶದ ಏಕತೆಗೆ ಕೊಡುಗೆ ನೀಡಿ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಹೇಳಿದರು.
ಅವರು ಬುಧವಾರ ರಾತ್ರಿ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಇದೊಂದು ಅಗ್ನಿಪರೀಕ್ಷೆಯಾಗಿದೆ. ಈ ಅಗ್ನಿಪರೀಕ್ಷೆಯಲ್ಲಿ ನಿಮ್ಮ ಎಚ್.ಕೆ. ಪಾಟೀಲರಿಗೆ ನೀಡಿದ ಮತಕ್ಕಿಂತ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಪಕ್ಷದಲ್ಲಿ ನನ್ನ ಕೈಯನ್ನು ಮತ್ತಷ್ಟು ಬಲಪಡಿಸಿ ಎಂದು ವಿನಂತಿಸಿದರು.
ನಮ್ಮ ಸರ್ಕಾರ ಕ್ರಾಂತಿಕಾರಿ ಯೋಜನೆಗಳ ಮೂಲಕ ಬಡವರಿಗೆ ನೀಡಿದ ವಚನಗಳನ್ನು ಪೂರೈಸಿದೆ. ಕಾಂಗ್ರೆಸ್ ಬಡವರ ಹಸಿವನ್ನು ಹತ್ತಿರದಿಂದ ಬಲ್ಲ ಪಕ್ಷವಾಗಿದ್ದು, ಅದಕ್ಕಾಗಿಯೇ ಶ್ರಮಿಸುತ್ತೇವೆ. ಮೋದಿ ಅಲೆ ಎನ್ನುವುದು ಕೇವಲ ಮಾಧ್ಯಮಗಳ ಸೃಷ್ಟಿ. ಮೋದಿ ಅವರ ದೊಂಬರಾಟಕ್ಕೆ ದೇಶದ ಜನತೆ ಮನ್ನಣೆ ನೀಡುವುದಿಲ್ಲ ಎಂದರು.
ಟಿ. ಈಶ್ವರ, ಶಾಸಕ ಜಿ.ಎಸ್. ಪಾಟೀಲ, ರಾಮಕೃಷ್ಣ ದೊಡ್ಡಮನಿ, ಶ್ರೀನಿವಾಸ ಮಾನೆ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ, ಶಿವಕುಮಾರಗೌಡ ಪಾಟೀಲ, ನಗರಸಭೆ ಅಧ್ಯಕ್ಷೆ ರುದ್ರವ್ವ ಕೆರಕಲಮಟ್ಟಿ, ಉಪಾಧ್ಯಕ್ಷ ಕೃಷ್ಣಾ ಪರಾಪುರ, ಬಿ.ಎಫ್. ದಂಡೀನ, ವಿ.ಆರ್. ಗುಡಿಸಾಗರ, ಚಂದ್ರಶೇಖರ ಬಡ್ನಿ, ಕೆ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಐ.ಎಸ್. ಪಾಟೀಲ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು.
ಮಾಧ್ಯಮಗಳು ಸತ್ಯ ಸಾರುವ ಧೈರ್ಯ ಕಳೆದುಕೊಳ್ಳುತ್ತಿವೆ: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಾಧ್ಯಮಕ್ಕೆ ನಾಲ್ಕನೇ ಅಂಗದ ಸ್ಥಾನವಿದೆ. ಆದರೆ, ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದಲ್ಲಿ ಮಾಧ್ಯಮಗಳು ಸತ್ಯ ಸಾರುವ ಧೈರ್ಯ ಕಳೆದುಕೊಂಡು ಕಾರ್ಪೊರೇಟ್ಗಳ ಕಪಿಮುಷ್ಟಿಗೆ ಸಿಲುಕಿವೆ. ಇಂದು ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಅವರು ಭಾಷಣದಲ್ಲಿ ಹೇಳಿದ್ದು ಗಮನಾರ್ಹವಾಗಿತ್ತು.