ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಭ್ರಷ್ಟ ಯುಪಿಎ ಸರ್ಕಾರ ಸೋಲಿಸಿ: ಪಾಟೀಲ

Mainashree
Updated On : 3 Apr 2014, 12:16 pm

ಕನ್ನಡಪ್ರಭ ವಾರ್ತೆ, ನರಗುಂದ, ಏ. 2
ಯುಪಿಎ ಸರ್ಕಾರ 2 ಅವಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶವೇ ತಲೆ ತಗ್ಗಿಸುವ ಸ್ಥಿತಿಗೆ ತಂದಿದೆ. ಅಲ್ಲದೇ ಹಲವು ಭ್ರಷ್ಟಾಚಾರ ಮಾಡಿ ದೇಶವನ್ನು ಲೂಟಿ ಮಾಡಿದ ಯುಪಿಎ ಸರ್ಕಾರವನ್ನು ಜನತೆ ಕಿತ್ತು ಹಾಕಬೇಕು ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ಅವರು ಬುಧವಾರ ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ಶ್ರೀಗಳ ಗದ್ದುಗಿಗೆ ಪೂಜೆ ಸಲ್ಲಿಸಿ, ಸಮುದಾಯ ಭವನದಲ್ಲಿ ಮತಯಾಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಹಿಂದಿನ 10 ವರ್ಷದ ಅವಧಿಯಲ್ಲಿ ಯುಪಿಎ ಸರ್ಕಾರ ಎಲ್ಲ ಕ್ಷೇತ್ರಗಳಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ಮಾಡಿ ದೇಶದ ಅಧೋಗತಿಗೆ ಕಾರಣವಾಗಿದೆ. ಈ ದೇಶದ ಗಡಿ ಕಾಯುವ ಸೈನಿಕರ ರುಂಡವನ್ನು ಪಾಕಿಸ್ತಾನಿ ಸೈನಿಕರು ಕಡಿದರೂ ಅದನ್ನು ನೋಡಿಕೊಂಡು ಸುಮ್ಮನೇ ಕುಳಿತಿರುವ ಈ ದೇಶದ್ರೋಹಿ ಸರ್ಕಾರವನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲಿಸಬೇಕು. ನರೇಂದ್ರ ಮೋದಿಯವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಲು ಎಲ್ಲರೂ ಸಂಕಲ್ಪ ಮಾಡಬೇಕು. ಬಿಜೆಪಿಗೆ ಮತ ನೀಡುವ ಮೂಲಕ ಪಿ.ಸಿ. ಗದ್ದಿಗೌಡರನ್ನು ಆಯ್ಕೆ ಮಾಡುವಂತೆ ಕೋರಿದರು.
ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ನನ್ನ ಅಧಿಕಾರದ ಅವಧಿಯಲ್ಲಿ ಬಾಗಲಕೋಟೆ ಲೋಕಸಭೆಗೆ ಹೊಂದಿಕೊಂಡಿರುವ 8 ವಿಧಾನಸಭಾ ಕ್ಷೇತ್ರಗಳಿಗೆ ಹಲವಾರು ಸಮುದಾಯ ಭವನ, ರಸ್ತೆ, ಸೇರಿದಂತೆ ಅಭಿವೃದ್ಧಿ ಪರ ಕಾರ್ಯಗಳನ್ನು ಮಾಡಿದ್ದೇನೆ. ಮಾಜಿ ಸಚಿವ ಸಿ.ಸಿ. ಪಾಟೀಲರು ತಮ್ಮ ಅಧಿಕಾರದ ಅವಧಿಯಲ್ಲಿ ಈ ನರಗುಂದ ಮತಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೆ ರಸ್ತೆ, ಕುಡಿಯುವ ನೀರು, ಚರಂಡಿ, ಕಾಲುವೆಗಳ ನವೀಕರಣ, ರೈತರ ಪರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅಂಥವರು ಹಿಂದಿನ ಚುನಾವಣೆಯಲ್ಲಿ ಗೆಲ್ಲಬೇಕಾಗಿತ್ತು. ಆದರೆ, ಆರೋಗ್ಯ ಸರಿಯಿಲ್ಲದ್ದರಿಂದ ಅವರಿಗೆ ಸೋಲಾಯಿತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಬೆಂಬಲಿಸಿ ದೇಶದ ಸಮಗ್ರ ಅಭಿವೃದ್ಧಿಗೆ ಕಾರಣರಾಗುವಂತೆ ಕೋರಿದರು.
ಜಿಪಂ ಸದಸ್ಯ ಎಂ.ಎಸ್. ಪಾಟೀಲ, ಮತಕ್ಷೇತ್ರದ ಅಧ್ಯಕ್ಷ ವಿ.ಎಸ್. ಹಿರೇಮಠ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಬಿ.ಬಿ. ಐನಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ದಂಡಿನ, ಬಸವರಾಜ ತಳವಾರ, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಹುಡೇದ, ಮುತ್ತು ಜ್ಞಾನೋಪಂತ, ಅಖಂಡಪ್ಪ ಮುರಾರಿ, ಅನಿಲ ಧರಿಯಣ್ಣವರ, ಬಸನಗೌಡ ಚಿಕ್ಕನಗೌಡರ, ಗ್ರಾಪಂ ಸದಸ್ಯ ಹನುಮಂತ ಸಂಗಿಟಿ, ಧರ್ಮರಾಜಪ್ಪ ತೆಗ್ಗಿನಮನಿ, ಬಸವರಾಜ ಐನಾಪುರ, ಬಿ.ಸಿ. ಐನಾಪುರ, ರಮೇಶ ಐನಾಪುರ, ಉಮೇಶ ಮೊರಬದ, ನಾಗೇಶ ನರಸಾಪುರ, ಎಲ್.ಎಂ. ಪಾಟೀಲ, ಮಹಾಂತಗೌಡ ಪಾಟೀಲ, ತಿಪ್ಪಣ್ಣ ದಂಡಿನ, ನಾಗಪ್ಪ ಬೆನ್ನುರ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement