ಮೋದಿ ಬಂದ್ರೆ ಅಶಾಂತಿ
ಮುಂಡರಗಿ: ನರೇಂದ್ರ ಮೋದಿ ಪ್ರಧಾನಿಯಾದರೆ ದೇಶದ ಜನ ಶಾಂತಿ, ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಜಾತಿ ಹಾಗೂ ಕೋಮುಗಳ ಮಧ್ಯೆ ಬೆಂಕಿ ಹಚ್ಚುತ್ತಾರೆ. ದೇಶದ ಜನತೆ ನೆಮ್ಮದಿಯಿಂದ ಇರಬೇಕಾದರೆ ಮತ್ತೊಮ್ಮೆ ಕೇಂದ್ರದಲ್ಲಿ ಯುಪಿಎ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬುಧವಾರ ಮುಂಡರಗಿಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಪರ ಬಹಿರಂಗ ಪ್ರಚಾರದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುಜರಾತ್ ರಾಜ್ಯ ಕೈಗಾರಿಕೆಯಲ್ಲಿ ನಂಬರ್ ಒನ್ ಇದೆ ಎಂದು ಹೇಳುವ ಮೂಲಕ ನರೇಂದ್ರ ಮೋದಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಕೈಗಾರಿಕಾ ಕ್ಷೇತ್ರದಲ್ಲಿ ಗುಜರಾತ್ 3ನೇ ಸ್ಥಾನದಲ್ಲಿದೆ. ಕರ್ನಾಟಕ ಅದಕ್ಕಿಂತ ಮೇಲಿದೆ. ಗುಜರಾತಿನಲ್ಲಿ ಶೇ. 23ರಷ್ಟು ಮಹಿಳೆಯರು ಇಂದಿಗೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಲ್ಲಿ 10 ವರ್ಷಗಳ ಕಾಲ ಲೋಕಾಯುಕ್ತರ ನೇಮಕ ಮಾಡಿಲ್ಲ. ಕೋರ್ಟ್ ಆದೇಶವಾದ ಮೇಲಷ್ಟೇ ನೇಮಕ ಮಾಡಿದರು. ಬಿಜೆಪಿ ಜನರನ್ನು ದಾರಿ ತಪ್ಪಿಸುತ್ತ, ದೂರದ ಗುಜರಾತ್ನ್ನು ತೋರಿಸಿ ಮತಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರತಿವರ್ಷ ನೀರಾವರಿ ಯೋಜನೆಗಳಿಗಾಗಿ ರು. 10 ಸಾವಿರ ಕೋಟಿ ಖರ್ಚು ಮಾಡಲಿದೆ. ಸಿಂಗಟಾಲೂರು ಏತ ನೀರಾವರಿ ಯೋಜನೆಗಾಗಿ ರು. 2 ಸಾವಿರ ಕೋಟಿ ಖರ್ಚು ಮಾಡಿದ್ದು, 2015ರ ವೇಳೆಗೆ ಕಾಮಗಾರಿ ಮುಕ್ತಾಯವಾಗಲಿದೆ. ರು. 1.4 ಕೋಟಿ ಕುಟುಂಬಗಳಿಗೆ ರು. 4.5 ಸಾವಿರ ಕೋಟಿ ಸಬ್ಸಿಡಿಯಲ್ಲಿ ಕುಟುಂಬಕ್ಕೆ ಒಂದು ರು.ಗೆ 1 ಕೆಜಿಯಂತೆ ಅಕ್ಕಿ ವಿತರಿಸಲಾಗುತ್ತಿದೆ. 1 ಲೀಟರ್ ಹಾಲಿಗೆ ರು. 4 ಸಬ್ಸಿಡಿ ನೀಡುವ ಮೂಲಕ ಪ್ರತಿದಿನ ರೈತರಿಗೆ ರು. 2 ಕೋಟಿ ಸಬ್ಸಿಡಿ ನೀಡಲಾಗುತ್ತಿದೆ. ರಾಜ್ಯದ ರೈತರು ಬೆಳೆದ ಜೋಳ, ಕಡಲೆ, ಸೂರ್ಯಕಾಂತಿ, ಮೆಕ್ಕೆಜೋಳ, ರಾಗಿ, ತೊಗರಿ ಸೇರಿದಂತೆ ವಿವಿಧ 1.5 ಕೋಟಿ ಕ್ವಿಂಟಲ್ ಧಾನ್ಯಗಳನ್ನು ಸರ್ಕಾರವೇ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿ ಮಾಡಿದೆ. ರೈತರು ಬೆಳೆದ ಕಬ್ಬಿಗೂ ಹೆಚ್ಚಿನ ಬೆಲೆ ನೀಡಿದೆ. ಹಿಂದುಳಿದ ವರ್ಗದವರಿಗೆ 8600 ಕೋಟಿ ತೆಗೆದಿರಿಸಲಾಗಿದೆ. ನಿಗದಿತ ಅವಧಿಯಲ್ಲಿ ಫಲಾನುಭವಿಗಳಿಗೆ ಮುಟ್ಟಿಸದಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಹ ಸರ್ಕಾರ ಸಿದ್ಧವಾಗಿದೆ ಎಂದು ಎಚ್ಚರಿಸಿದರು. ಮತದಾರರು ಅಭಿವೃದ್ಧಿ ಪರವಾದ ಹಾಗೂ ಜಾತ್ಯತೀತವಾಗಿ ಅಧಿಕಾರ ನಡೆಸುವ ಕಾಂಗ್ರೆಸ್ ಸರ್ಕಾರಕ್ಕೆ ಮತ ನೀಡಬೇಕು. ಹಾವೇರಿ ಲೋಕಸಭೆ ಕ್ಷೇತ್ರದ ಮತದಾರರಿಂದ ಈ ಬಾರಿ ತಪ್ಪದೇ ಸಲೀಂ ಅಹ್ಮದ್ ಆಯ್ಕೆ ಖಚಿತ ಎಂದರು. ಸಚಿವ ಎಚ್.ಕೆ. ಪಾಟೀಲ ಮಾತನಾಡಿದರು. ಸಲೀಂ ಅಹ್ಮದ್, ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ, ಶಾಸಕ ರಾಮಕೃಷ್ಣ ದೊಡ್ಡಮನಿ, ಜಿ.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿದರು. ಐ.ಜಿ. ಸನದಿ, ಶ್ರೀನಿವಾಸ ಮಾನೆ, ಕಸ್ತೂರೆವ್ವ ಪಾಟೀಲ, ಭಾರತಿ ಹಕ್ಕಿ, ವಿ.ಎಲ್. ನಾಡಗೌಡ್ರ, ಟಿ.ಈಶ್ವರ, ಐ.ಎಸ್. ಪಾಟೀಲ, ಮಿತುನ್ ಪಾಟೀಲ, ರವೀಂದ್ರ ಉಪ್ಪಿನಬೆಟಗೇರಿ, ಕೊಟ್ರೇಶ ಅಂಗಡಿ, ಧ್ರುವಕುಮಾರ ಹೊಸಮನಿ, ಎಸ್.ಡಿ. ಮಕಾಂದಾರ ಮತ್ತಿತರರು ಇದ್ದರು.