ಮೋದಿ ಮೋಡಿ ನಡೆಯೊಲ್ಲ
ರೋಣ: ರಾಜ್ಯ ಮತ್ತು ಕೇಂದ್ರದಲ್ಲಿ ಉತ್ತಮ ಆಡಳಿತ ನೀಡಿದ ಕಾಂಗ್ರೆಸ್ ಜನತೆಯ ಪ್ರೀತಿ, ವಿಶ್ವಾಸ, ಮೆಚ್ಚುಗೆಗೆ ಪಾತ್ರವಾಗಿದ್ದು, ಕಾಂಗ್ರೆಸ್ ಮುಂದೆ ಮೋದಿ ಮೋಡಿ ನಡೆಯಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಗುರುವಾರ ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ಹಾವೇರಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ ಪರ ಮತಯಾಚನೆಗಾಗಿ ಜರುಗಿದ ರೋಣ ಮತಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಕೇವಲ 8 ತಿಂಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಯಾವ ರೀತಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ ಎಂಬುದರ ಕುರಿತು ಮೋದಿಯವರಿಗೆ ಗೊತ್ತಿರಲಿಕ್ಕಿಲ್ಲ. ಕೈಗಾರಿಕೆಯಲ್ಲಿ ಗುಜರಾತ 3ನೇ ಸ್ಥಾನದಲ್ಲಿದ್ದರೆ, ಕರ್ನಾಟಕ 2ನೇ ಸ್ಥಾನದಲ್ಲಿದೆ. ಹೀಗೆ ಗುಜರಾತ್ಗಿಂತ ಕರ್ನಾಟಕ ರಾಜ್ಯ ಯಾವುದರಲ್ಲೂ ಕಡಿಮೆಯಿಲ್ಲ ಎಂಬುದನ್ನು ಮೋದಿ ತಿಳಿಯಬೇಕು. ಅಭ್ಯರ್ಥಿ ಸಲೀಂ ಅಹ್ಮದ್ ಮಾತನಾಡಿ, ರಾಜ್ಯದಲ್ಲಿ ಹಿಂದೆ ಆಡಳಿತ ನಡೆಸಿದ ಬಿಜೆಪಿ ಅಧಿಕಾರ ಅವಧಿಯುದ್ದಕ್ಕೂ ಕೇವಲ ಭ್ರಷ್ಟಾಚಾರ, ಅನೈತಿಕತೆ, ಗಣಿ ಲೂಟಿ, ಅನಾಚಾರ, ಅಶ್ಲೀಲ ಚಿತ್ರ ವೀಕ್ಷಣೆ, ಸ್ನೇಹಿತನ ಹೆಂಡತಿ ಮೇಲೆ ಕಣ್ಣು, ಸ್ವಜನ ಪಕ್ಷಪಾತದಲ್ಲಿಯೇ ಕಾಲಹರಣ ಮಾಡಿದ ಬಿಜೆಪಿ ಜನತೆಯನ್ನು ಅಭಿವೃದ್ಧಿ ನೆಪದಲ್ಲಿ ವಂಚಿಸಿದ್ದು, ಇವುಗಳೇ ಬಿಜೆಪಿ ಸಾಧನೆಯಾಗಿವೆ ಎಂದು ವ್ಯಂಗವಾಡಿದರು.
ಬಿಜೆಪಿ ಇತಿಹಾಸವಿಲ್ಲದ ಪಕ್ಷ. ಕಾಂಗ್ರೆಸ್ 125 ವರ್ಷಗಳ ಇತಿಹಾಸ ಹೊಂದಿದ ಪಕ್ಷವಾಗಿದ್ದು, ಅನೇಕ ಮಹತ್ವಪೂರ್ಣ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಕಾಂಗ್ರೆಸ್ಗಿದೆ. ಸಂಸದ ಶಿವಕುಮಾರ ಉದಾಸಿ ನಾಲ್ಕು ಮುಕ್ಕಾಲು ವರ್ಷಗಳಲ್ಲಿ ತನ್ನ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಿಗೆ ಒಮ್ಮೆಯೂ ಭೇಟಿ ನೀಡದೇ ಇರುವುದು ವಿಪರ್ಯಾಸದ ಸಂಗತಿ. ಜನತೆ ಇದೆಲ್ಲವನ್ನು ಗಮನಿಸಿದ್ದು, ಈ ಬಾರಿ ಕಾಂಗ್ರೆಸ್ಗೆ ಆಶೀರ್ವದಿಸಲಿದ್ದಾರೆ ಎಂದರು. ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಲೋಕಪಾಲ ಮಸೂದೆ ಜಾರಿಗೆ, ಶಿಕ್ಷಣ ಹಕ್ಕು ಕಾಯ್ದೆ, ಮಾಹಿತಿ ಹಕ್ಕು, ಆಹಾರ ಭದ್ರತೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದ ಕಾಂಗ್ರೆಸ್ ದೇಶದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ. ದೇಶದಲ್ಲಿ ರು. 73 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದೆ. ದೀನ, ದಲಿತರ, ಬಡವರ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಜನಾಂಗದ ಸಮಸ್ಯೆಗಳಿಗೆ ಸ್ಪಂದಿಸುವ ಕಾಂಗ್ರೆಸ್ಗೆ ಜನತೆ ಆಶೀರ್ವದಿಸಿ ಬಹುಮತದಿಂದ ಗೆಲ್ಲಿಸಬೇಕು ಎಂದರು. ಇದಕ್ಕೂ ಮುನ್ನ ಗ್ರಾಮದ ಬಸ್ ನಿಲ್ದಾಣದಿಂದ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿ ಮತ ಯಾಚಿಸಿದರು. ಪ್ರಚಾರ ಸಭೆಯಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್. ಗಡ್ಡದ್ದೇವರಮಠ, ದಶರಥ ಗಾಣಿಗೇರ, ರವಿ ದಂಡಿನ, ಪರಶುರಾಮ ಅಳಗವಾಡಿ, ಮಿಥುನ್ ಪಾಟೀಲ, ಮಂಜುಳಾ ಹುಲ್ಲನ್ನವರ, ವಿ.ಆರ್. ಗುಡಿಸಾಗರ, ಪ್ರಭು ಮೇಟಿ, ಎಂ.ಎಸ್. ಕರಿಗೌಡ್ರ, ಇನಾಯತ ತರಪದಾರ ಇತರರಿದ್ದರು. ವಿ.ಬಿ. ಸೋಮನಕಟ್ಟಿಮಠ ನಿರೂಪಿಸಿ, ವಂದಿಸಿದರು.