ಸಂಹಿತೆ ಉಲ್ಲಂಘನೆ: ಶೀಘ್ರ ಕ್ರಮ ಜರುಗಿಸಿ
ಗದಗ: ಪ್ರತಿಯೊಂದು ಪಕ್ಷ, ಅಭ್ಯರ್ಥಿ ನಡೆಸುವ ಸಭೆ, ಸಮಾರಂಭ ಚಟುವಟಿಕೆ ದಾಖಲೀಕರಣ, ವೆಚ್ಚಗಳ ಕ್ರೂಡೀಕರಣ ಮುಂತಾದವುಗಳನ್ನು ಜವಾಬ್ದಾರಿಯಿಂದ ದೈನಂದಿನ ಆಧಾರದ ಮೇಲೆ ಪೂರ್ಣಗೊಳಿಸಬೇಕು. ಅವುಗಳ ಸಂರಕ್ಷಣೆಗೆ ಹೆಚ್ಚಿನ ಮುತುವರ್ಜಿ ವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎನ್.ಎಸ್. ಪ್ರನಸ್ನಕುಮಾರ ಆದೇಶಿಸಿದ್ದಾರೆ.
ಶುಕ್ರವಾರ ಗದಗ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಸಹಾಯಕ ಚುನಾವಣಾ ವೆಚ್ಚದ ಅಧಿಕಾರಿಗಳ ಹಾಗೂ ಗದಗ, ರೋಣ, ಶಿರಹಟ್ಟಿ ನರಗುಂದ ವಿಧಾನಸಭಾ ಕ್ಷೇತ್ರಗಳ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಈವರೆಗೆ ತಂಡಗಳು ನಿರ್ವಹಿಸಿರುವ ಕಾರ್ಯ ಪರಿಶೀಲಿಸಿ ಮಾತನಾಡಿದರು.
ಪಕ್ಷದ ಹಿತಾಸಕ್ತಿಯಿಂದ ತಪ್ಪು ಮಾಹಿತಿ ನೀಡುವುದು, ದಾಖಲೆ ತಿದ್ದುಪಡಿ ಅಥವಾ ವೆಚ್ಚದ ವ್ಯಕ್ತಿ ದಾಖಲೀಕರಣ ಕೆಲಸವನ್ನೇ ತಪ್ಪು ದಾರಿಗಳೆಯುವ ಯಾವುದೇ ಅಧಿಕಾರಿ, ಸಿಬ್ಬಂದಿ ಇರಲಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಫಾರ್ಮೆಟ್‌ನಲ್ಲಿ ವೆಚ್ಚದ ಪ್ರತಿ ವಿವರ ದಾಖಲಿಸುವ ಪಕ್ಕಾ ವಿಡಿಯೋ ರೆಕಾರ್ಡಿಂಗ್ ಆಗಬೇಕು. ಸ್ಟೇಜ್, ಪೆಂಡಾಲ್, ವಾಹನಗಳು ಅವುಗಳ ಸಂಖ್ಯೆ, ಜನ ಒದಗಿಸಿದ ಸೌಲಭ್ಯ, ಸ್ಟೇಜ್ ಮೇಲಿರುವವರು ಉಪಯೋಗಿಸುವ ವಾಹನಕ್ಕೆ ಅನುಮತಿ ಪತ್ರ ಇತ್ಯಾದಿ ಜತೆಗೆ ಪ್ರತಿ ಕಾರ್ಯಕ್ರಮದ ವಿಡಿಯೋ ದಾಖಲೆಗೆ ಕ್ಯೂ ಶೀಟನ್ನು ತಪ್ಪದೇ ಒದಗಿಸಬೇಕು. ವೆಚ್ಚದ ಸರಿಯಾದ ಚಿತ್ರಣ ದೊರಕುವಂತೆ ಹೆಚ್ಚಿನ ಕಾಳಜಿಯಿಂದ ಕಾರ್ಯನಿರ್ವಹಿಸಬೇಕು. ಪಕ್ಷ, ಅಭ್ಯರ್ಥಿಗಳ ವೆಚ್ಚವನ್ನು ಒಪ್ಪುವ ಅಥವಾ ತಿರಸ್ಕರಿಸುವ ಅಧಿಕಾರ ಜಿಲ್ಲಾಧಿಕಾರಿಗಳದ್ದು, ವೆಚ್ಚದ ಸ್ಪಷ್ಟ ಚಿತ್ರಣ ದಾಖಲೆ ನೀಡುವ ಜವಾಬ್ದಾರಿ ಪಕ್ಷ ಮತ್ತು ಅಭ್ಯರ್ಥಿಗಳಾದ್ದಾಗಿರುತ್ತದೆ. ಸಭೆ, ಸಮಾರಂಭಗಳ ವಿಡಿಯೋಗಳ ಎಲ್ಲ ದಾಖಲೆಗಳನ್ನು ಮತದಾನ ಮುಗಿಯುವವರೆಗೆ ನಿತ್ಯದ ವಿಡಿಯೋ ದಾಖಲೆಯ ಪ್ರತಿಯನ್ನು ಎನ್‌ಐಸಿಯಲ್ಲಿ ಸೂಚಿತ ಅಧಿಕಾರಿಗಳಿಗೆ ನೀಡಲು ತಿಳಿಸಿದ ಜಿಲ್ಲಾಧಿಕಾರಿಗಳು, ಯಾವುದೇ ವರದಿ ಅಥವಾ ಸಾಕ್ಷ್ಯಾಧಾರಗಳ ತಿದ್ದುಪಡಿ ಅಥವಾ ಅಳಿಸಿ ಹಾಕುವುದಕ್ಕೆ ಆಸ್ಪದ ನೀಡದಂತೆ ಕ್ರಮ ಜರುಗಿಸಲು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ನಾಗರಾಜ ಮಾತನಾಡಿ, ಪ್ರತಿಯೊಂದು ವಿಡಿಯೋ ಚುನಾವಣಾ ಆಯೋಗ ನಿರ್ದಿಷ್ಟಪಡಿಸಿದ ಫಾರ್ಮೆಟ್‌ನಲ್ಲಿ ಆಗಬೇಕು. ಸಮಾರಂಭದ ವಿವರ, ದಿನಾಂಕ, ವೇಳೆ ತಪಾಸಣಾ ಅಧಿಕಾರಿ ಹೆಸರು, ವಿಡಿಯೋ ತಂಡದ ವಿವರ ಇತ್ಯಾದಿ ತಪ್ಪದೇ ಒದಗಿಸಬೇಕು. ಪ್ರತಿದಿನ ಪರಿಶೀಲನಾ ತಂಡ ಜರುಗಿಸಬೇಕಾದ ಕಾರ್ಯಗಳ ಚೆಕ್‌ಲಿಸ್ಟ್ ಮಾಡಿಕೊಂಡು ಅದರಂತೆ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದರು. ಜಿಲ್ಲೆಯ ಚುನಾವಣಾ ವೆಚ್ಚದ ನೋಡಲ್ ಅಧಿಕಾರಿ ಜಿಪಂ ಮುಖ್ಯ ಲೆಕ್ಕಾಧಿಕಾರಿ ರಾಮಪ್ಪ ಹಟ್ಟಿ, ವೆಚ್ಚ ನಿರ್ಧಾರಿತ ಅಂಶಗಳ ದಾಖಲಾತಿ ಸಂರಕ್ಷಣೆ ಹಾಗೂ ವಿವಿಧ ತಂಡಗಳ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಪಕ್ಷ ಅಥವಾ ಅಭ್ಯರ್ಥಿಯ ವೆಚ್ಚದ ಸಾಮಗ್ರಿ ಚಿತ್ರಣ ನೀಡುವ ಕುರಿತು ವಿವರಿಸಿದರು. ಚುನಾವಣಾ ವೆಚ್ಚದ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ಅಧಿಕಾರಿಗಳು ವಿವಿಧ ತಂಡಗಳ ಸದಸ್ಯರು ಭಾಗವಹಿಸಿದ್ದರು.