ಸ್ವಾವಲಂಬನೆ ಬದುಕು ಯುವಕರ ಗುರಿಯಾಗಲಿ
ಗದಗ: ಯುವಕರಿಗೆ ಸ್ವಾವಲಂಬನೆಯೇ ಗುರಿಯಾಗಿರಬೇಕೆಂದು ಗದುಗಿನ ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ.ಎಲ್. ಗುಳೇದಗುಡ್ಡ ಹೇಳಿದರು.
ಅವರು ತಾಲೂಕಿನ ಹುಲಕೋಟಿ ಗ್ರಾಮದ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಂತರಿಕ ಗುಣಮಟ್ಟ ಭರವಸೆ ಕೋಶ (ಐ.ಕ್ಯು.ಎ.ಸಿ)ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರಗಳ ಬದಲಾವಣೆಗಳು ಮತ್ತು ಉದ್ಯೋಗವಕಾಶಗಳ ಕುರಿತು ಉಪನ್ಯಾಸ ನೀಡಿದರು. ಇಡೀ ಜಗತ್ತಿನ ಆಗುಹೋಗುಗಳು ಆರ್ಥಿಕ ಮತ್ತು ವಾಣಿಜ್ಯ ಚಟುವಟಿಕೆಯನ್ನು ಅವಲಂಬಿಸಿರುತ್ತದೆ. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಯುವಕರ ಪಾತ್ರ ಮುಖ್ಯವಾಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಶಿವಪ್ಪ ಕುರಿ ಮಾತನಾಡಿ, ಯುವಜನಾಂಗ ಕ್ರಿಯಾಶೀಲವಾಗಿ ಮುಂದೆ ಬಂದು ಆರ್ಥಿಕ, ಸಾಮಾಜಿಕ ಹಾಗೂ ಔದ್ಯೋಗಿಕ ರಂಗಗಳ ಬೆಳವಣಿಗೆಯಲ್ಲಿ ತೊಡಗಬೇಕು. ವಿದ್ಯಾರ್ಥಿಗಳು ಹಿಂಜರಿಕೆಯಿಂದ ಮುಕ್ತವಾಗಿ ಸಮರ್ಥ ಜ್ಞಾನ ಸಂಪಾದಿಸಿ, ಆಧುನಿಕ ವ್ಯವಹಾರಿಕ ಪ್ರಪಂಚದಲ್ಲಿ ಕೌಶಲ್ಯಗಳನ್ನು ವೃದ್ಧಿಸಿಕೊಂಡು, ನಾಡಿನಲ್ಲಿ ಸಾಧನೆಗೈದ ಮಹನೀಯರ ಜೀವನ ಸಂದೇಶಗಳನ್ನು ಪಾಲನೆ ಮಾಡಿದರೆ ಯಶಸ್ಸು ನಿಮ್ಮ ಬೆನ್ನಿನ ಹಿಂದೆ ಓಡಿಬರುತ್ತದೆ ಎಂದರು.
ಐಕ್ಯುಎಸಿ ಸಂಯೋಜಕ ಪ್ರೊ. ಗಂಗಾಧರ ಗುಮಗೋಳಮಠ, ಪ್ರಾಧ್ಯಾಪಕ ರಮಜಾನಸಾಬ್ ನದಾಫ, ನಾಗರಾಜ ಹಾವಿನಾಳ, ಡಾ. ಎಂ.ಕೆ. ಹೊನಕಾಂಬಳೆ, ಸವಿತಾ ಪಾಟೀಲ, ರಂಜನಾ ಭಂಡಾರೆ, ಜಯಶ್ರೀ ಮುತಗಾರ, ಅಣ್ಣಪ್ಪ ರೊಟ್ಟಿಗವಾಡ, ಬಸವರಾಜ ಅಂಬಿಗೇರ, ಮುತ್ತಪ್ಪ ಬದ್ನಿಕಾಯಿ, ಮಹಾಂತೇಶ ಕರ್ಲವಾಡ ಮುಂತಾದವರು ಉಪಸ್ಥಿತರಿದ್ದರು. ಬಸವರಾಜ ಗೂರನವರ ಪ್ರಾರ್ಥಿಸಿದರು. ಚಂದ್ರಪ್ಪ ಎಚ್.ಎಸ್. ಸ್ವಾಗತಿಸಿದರು. ಡಾ. ಉಮೇಶ ಅರಹುಣಸಿ ನಿರೂಪಿಸಿದರು. ಫಕೀರಪ್ಪ ಆನಿ ವಂದಿಸಿದರು.
ರಕ್ತದಾನ ಎಲ್ಲ ದಾನಕ್ಕಿಂತ ಶ್ರೇಷ್ಠ: ಹಳ್ಳಿಕೇರಿ
ಲಕ್ಷ್ಮೇಶ್ವರ: ರಕ್ತದಾನ ಎಲ್ಲ ದಾನಗಳಿಗಿಂತ ಶ್ರೇಷ್ಠವಾಗಿದ್ದು, ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವುದು ಸಾಮಾಜಿಕ ಕಳಕಳಿಯ ಪ್ರತೀಕ ಎಂದು ಹುಬ್ಬಳ್ಳಿ ಕ್ಯಾನ್ಸರ್ ಆಸ್ಪತ್ರೆ ವೈದ್ಯ ಡಾ. ಉಮೇಶ ಹಳ್ಳಿಕೇರಿ ಹೇಳಿದರು.
ಅವರು ಪಟ್ಟಣದ ಕಮಲಾ ಅಗಡಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎನ್ಎಸ್ಎಸ್ ಘಟಕದ ವತಿಯಿಂದ ಈಚೆಗೆ ಜರುಗಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿ. ವೆಂಕಪ್ಪ ಎಂ. ಅಗಡಿಯವರ 82ನೇ ಜನ್ಮದಿನಾಚರಣೆ ಅಂಗವಾಗಿ ಜರುಗಿದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ವಿದ್ಯಾರ್ಥಿ ನವೀನ ಹಿರೇಮಠ ಮಾತನಾಡಿ, ಹಿಂದುಳಿದ ಗ್ರಾಮಾಂತರ ಪ್ರದೇಶದಲ್ಲಿ ಅತ್ಯಾಧುನಿಕ ತಾಂತ್ರಿಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಪ್ರಾರಂಭಗೊಂಡ ಅಗಡಿ ತಾಂತ್ರಿಕ ಮಹಾವಿದ್ಯಾಲಯದ ರುವಾರಿ ದಿ. ವೆಂಕಪ್ಪ ಅಗಡಿಯವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ರಕ್ತದಾನ ಶಿಬಿರ ಏರ್ಪಡಿಸುತ್ತಿರುವುದು ಅಭಿನಂದನಾರ್ಹ ಎಂದರು.
ಪ್ರಾಚಾರ್ಯ ಡಾ.ಎಸ್.ವಿ. ಗೋರಬಾಳ ಅಧ್ಯಕ್ಷತೆ ವಹಿಸಿದ್ದರು. ಮೈಲಾರಪ್ಪ ಅಗಡಿ, ಡಾ.ಎನ್. ಹಯವದನ್, ಎನ್ಎಸ್ಎಸ್ ಘಟಕದ ಸಂಯೋಜನಾಧಿಕಾರಿ ಸೋಮಶೇಖರ ಕೆರಿಮನಿ, ಡಾ. ಎಂ.ವಿ. ಕರಮುರಿ, ಹುಬ್ಬಳ್ಳಿಯ ರೋಟರಿ ಕ್ಲಬ್ ಅಧ್ಯಕ್ಷ ಜಿ.ಎನ್. ಮುಟಗಿ, ಬ್ಲಡ್ ಬ್ಯಾಂಕ್ ಅಧ್ಯಕ್ಷ ನರೇಂದ್ರ ಬಾರವಾಲ್ ಇದ್ದರು.
ಪ್ರೀತಿ ಜೆ. ಸ್ವಾಗತಿಸಿದರು. ಸ್ನೇಹಾ ನಿರೂಪಿಸಿದರು. ಮೇಘಾ ಮಠದ ವಂದಿಸಿದರು. ಒಟ್ಟು 160ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ರಕ್ತದಾನ ಮಾಡಿದರು.
ಯುವ ಸಂಘಟನೆಗಳಿಂದ ಸಮಾಜದ ಅಭಿವೃದ್ಧಿ
ಗದಗ: ಗದಗ-ಬೆಟಗೇರಿ ನಗರದಲ್ಲಿ ಅತ್ಯಂತ ಹೀನಾಯ ಪರಿಸ್ಥಿತಿ ಅನುಭವಿಸುತ್ತಿರುವವರು ಸ್ಲಂ ಪ್ರದೇಶದ ಜನರು. ಅವರಿಗೆ ಸರ್ಕಾರದ ಯಾವುದೇ ಯೋಜನೆಗಳಾಗಲಿ, ಸೌಲಭ್ಯಗಳಾಗಲಿ ಸಿಗದಿರುವುದು ಅಲ್ಲಿನ ಅವ್ಯವಸ್ಥೆಗೆ ಕಾರಣವಾಗಿದೆ. ಸ್ಲಂ ಪ್ರದೇಶದ ಯುವಕರು ಸಂಘಟಿತರಾಗಿ ಹೋರಾಟ ಮಾಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಸ್ಲಂ ಯುವ ಸಮಿತಿ ಉಪಾಧ್ಯಕ್ಷ ಯಲ್ಲಪ್ಪ ರಾಮಗಿರಿ ಹೇಳಿದರು.
ಗುರುವಾರ ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿಯ ಸ್ಲಂ ಯುವ ಘಟಕದಿಂದ ನಗರದ ಸಮಿತಿಯ ಕಾರ್ಯಾಲಯದಲ್ಲಿ ಜರುಗಿದ ಕಾರ್ಯಕರ್ತರ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಸ್ಲಂ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ ಮಾನ್ವಿ ಮಾತನಾಡಿ, ಈಗಾಗಲೇ ಸ್ಲಂ ಪ್ರದೇಶಗಳಲ್ಲಿ ನೂರಾರು ಸಂಖ್ಯೆಗಳಲ್ಲಿ ಜನರು ಸಂಘಟಿತರಾಗಿದ್ದಾರೆ. ಇದೇ ರೀತಿ ಯುವಕರು ಸಂಘಟಿತರಾದರೇ ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಿತಿಗೆ ಬಲ ಬಂದಂತಾಗುತ್ತದೆ. ಯುವಕರು ಜಾತಿ ಸಂಘಟನೆಗಳೆನ್ನದೆ ಒಟ್ಟಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.ಸ್ಲಂ ಯುವ ಸಮಿತಿ ಅಧ್ಯಕ್ಷ ಶರೀಫ ಬಿಳೆಯಲಿ ಮಾತನಾಡಿ, ಯುವ ಸಮಿತಿಯ ಸದಸ್ಯತ್ವ ಅಭಿಯಾನದಲ್ಲಿ ಗದಗ-ಬೆಟಗೇರಿ ನಗರದ ಸ್ಲಂ ಪ್ರದೇಶದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದು ಸಮಾಜದ ಅಭಿವೃದ್ಧಿಗೆ ಮತ್ತು ಸಂಘಟನೆಯ ಬೆಳವಣಿಗೆಗೆ ಶ್ರಮಿಸಬೇಕು ಎಂದರು. ಸ್ಲಂ ಯುವ ಸಮಿತಿಯ ಸದಸ್ಯ ಸಲೀಂ ಬಳ್ಳಾರಿ, ನಾಗರಾಜ ಮುಟಗಾರ, ರಾಜು ಭರಮಣ್ಣವರ, ಯುಸೂ ಫ ಮಜಗಿ, ಅಬೂಬಕರ ಮಕಾನದಾರ, ಬಸವರಾಜ ಬಿಳೆಯಲಿ, ರಾಜು ಕಣಗಿನಹಾಳ, ಪ್ರಶಾಂತ ಇದ್ದರು. ಪರಶುರಾಮ ಕಾಳೆ ನಿರೂಪಿಸಿದರು. ಅನಿಲ ಕಾಳೆ ವಂದಿಸಿದರು.
ಸವಿತಾ ಸಮಾಜ ಒಗ್ಗಟ್ಟಿನಿಂದ ಹೋರಾಡಲಿ
ಗದಗ: ಸವಿತಾ ಸಮಾಜ ಬಾಂಧವರು ತಮ್ಮ ಹಕ್ಕುಗಳನ್ನು ಪಡೆಯಲು ಭೇದಭಾವ ತೊರೆದು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕೆಂದು ಹಿರಿಯ ಸಾಹಿತಿ ಐ.ಕೆ. ಕಮ್ಮಾರ ಹೇಳಿದರು. ಗದಗ ಸವಿತಾ ಸಮಾಜದ ವತಿಯಿಂದ ಈಚೆಗೆ ಯುಗಾದಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ತೆಲುಗು ಹಾಗೂ ಮರಾಠ ಸವಿತಾ ಸಮಾಜದ ಹಿರಿಯರ ಸಾಮೂಹಿಕ ಜನ್ಮದಿನಾಚರಣೆ ಹಾಗೂ ಸಮಾಜದ ಹಿರಿಯ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಬಸಯ್ಯ ನಂದಿಕೋಲಮಠ ಮಾತನಾಡಿ, ಸವಿತಾ ಸಮಾಜದ ಹಿರಿಯರ ಜನ್ಮದಿನಾಚರಣೆ ಹಾಗೂ ಸಮಾಜಕ್ಕೆ ಸೇವೆ ಸಲ್ಲಿಸುತ್ತ ಬಂದಿರುವ ಸಮಾಜದ ಹಿರಿಯ ಸಾಧಕರನ್ನು ಗುರುತಿಸಿ ಅವರಿಗೆ ಸತ್ಕರಿಸಿರುವ ಕಾರ್ಯ ಶ್ಲಾಘನೀಯ ಎಂದರು. ಕೃಷ್ಣಾ ಹಡಪದ ಅಧ್ಯಕ್ಷತೆ ವಹಿಸಿದ್ದರು. ಗಿರಿರಾಜ ಕೋಟೆಕಲ್ಲ, ಹನಮಂತಪ್ಪ ರಾಂಪೂರ, ವಿಷ್ಣು ಮಾನೆ, ಪರಶುರಾಮ ರಾಂಪೂರ, ವಾಸು ಗೌಳಿ, ಅರುಣ ಮಾನೆ, ಕಾಶಪ್ಪ ಬೂದೂರ ಮಾತನಾಡಿದರು. ಈ ಸಂದರ್ಭ ಪರಶುರಾಮ ಕೋಟೆಕಲ್ಲ, ತೆಲುಗು ಸಮಾಜದ ಅಧ್ಯಕ್ಷ ಹೇಮಂತ ವಡ್ಡೆಪಲ್ಲಿ, ಮರಾಠಾ ಸಮಾಜದ ಅಧ್ಯಕ್ಷ ರಾಜು ಮಾನೆ, ಕೃಷ್ಣಾ ಬಾಯಲಗುಡ್ಡ, ಪಾಂಡು ಕಾಳೆ, ಶಂಕರ ಮಾನೆ, ಶ್ರೀನಿವಾಸ ಶಿಕಾರಿಪುರ, ಸುರೇಶ ಬೂದೂರ, ಯಲ್ಲಪ್ಪ ರಾಂಪೂರ, ವಿಶಾಲ ಮಾನೆ, ರಾಮ ಮಾನೆ, ಜಂಬಣ್ಣ ಕಡಮೂರ, ಶ್ರೀನಿವಾಸ ಕೋಟೆಕಲ್ಲ, ಗಣೇಶ ಕಡಮೂರ, ಬಸವರಾಜ ಬಹದ್ದೂರಬಂಡಿ ಇದ್ದರು. ಕುಮಾರ ಹಡಪದ ಸ್ವಾಗತಿಸಿದರು. ಬಾಲರಾಜ ಕೋಟೆಕಲ್ಲ ನಿರೂಪಿಸಿದರು. ವಸಂತ ಮಾನೆ ವಂದಿಸಿದರು.