ರೋಣ: ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ
ರೋಣ: ರೋಣ ವಿಧಾನಸಭೆ ಮತಕ್ಷೇತ್ರದ 258 ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳಿಗೆ ಚುನಾವಣೆ ವೇಳೆಯಲ್ಲಿ ಕಾರ್ಯ ನಿರ್ವಹಣೆ ಮತ್ತು ಜವಾಬ್ದಾರಿ ಕುರಿತು ಪಟ್ಟಣದ ಸ್ವತಂತ್ರ ಪಪೂ ಕಾಲೇಜಿನಲ್ಲಿ ಶನಿವಾರ ತರಬೇತಿ ಕಾರ್ಯಾಗಾರ ಜರುಗಿತು.
ತರಬೇತಿದಾರ ನಗರಾಭಿವೃದ್ಧಿ ಯೋಜನೆ ಇಲಾಖೆ ನಿರ್ದೇಶಕ ರಮೇಶ ದೇಸಾಯಿ ಮಾತನಾಡಿ, ಚುನಾವಣೆ ವೇಳೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮತದಾರರಿಗೆ ಸಹಾಯವಾಣಿಯಂತೆ ಕಾರ್ಯ ನಿರ್ವಹಿಸಬೇಕು. ಮತದಾರರಿಗೆ ಅಗತ್ಯವಿರುವ ಮಾಹಿತಿ ನೀಡಬೇಕು. ಅಲ್ಲದೇ ಮತದಾನ ಪವಿತ್ರವಾದದ್ದು, ಕಡ್ಡಾಯವಾಗಿ ಮತ ಚಲಾಯಿಸುವ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸುವ ದಿಸೆಯಲ್ಲಿ ಕಾರ್ಯ ನಿರ್ವಹಿಸುವುದು ಅತಿ ಮುಖ್ಯವಾಗಿದೆ. ಈಗಾಗಲೇ ಸಿದ್ಧಗೊಂಡಿರುವ ಮತದಾರರ ಗುರುತಿನ ಚೀಟಿಯನ್ನು ಮತದಾರರಿಗೆ ಮುಟ್ಟಿಸುವ ಕೇಲಸವಾಗಬೇಕು. ಅಲ್ಲದೇ ಮತದಾನ ದಿನದಂದು ಯಾವ ಮತದಾರರಿಗೆ ಗುರುತಿನ ಚೀಟಿ ಮುಟ್ಟಿರುವುದಿಲ್ಲ ಅಂತಹವರನ್ನು ಸಂಪರ್ಕಿಸಿ ಮತದಾರ ಚೀಟಿ ಮುಟ್ಟಿಸಬೇಕು. ಒಂದು ಮತದಾರರ ಗುರುತಿನ ಚೀಟಿ ಉಳಿದಲ್ಲಿ ಅವುಗಳನ್ನು ಒಂದು ಲಕೋಟಿಯಲ್ಲಿ ಸಂಗ್ರಹಿಸಿ ಚುನಾವಣೆ ಅಧಿಕಾರಿಗಳಿಗೆ ತಲುಪಿಸಬೇಕು. ಯಾವುದೇ ಸಂದರ್ಭದಲ್ಲಿ ಮತದಾರರಿಗೆ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ತಿಳಿವಳಿಕೆ ನೀಡುವ ವೇಳೆ ನಿಮ್ಮ ಸಲಹೆ ಪಕ್ಷಾತೀತವಾಗಿರಬೇಕು ಎಂದರು. ತಹಸೀಲ್ದಾರ್ ಎ.ಜಿ. ಪಂಡಿತ ಮಾತನಾಡಿ, ಬೂತ್ ಮಟ್ಟದ ಅಧಿಕಾರಿಗಳು ನಿಮಗೆ ವಹಿಸಿದ ಜವಾಬ್ದಾರಿಯನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು. ಚುನಾವಣಾ ವೇಳೆ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಜಾಗೃತಿ ಮುಖ್ಯ. ಈಗಾಗಲೇ ವಿತರಿಸಲಾದ ಮತ ಸಂಕಲ್ಪ ಪತ್ರವನ್ನು ಮತದಾರರಿಂದ ಬರೆಸಿಕೊಳ್ಳಬೇಕು. ಮತದಾನಕ್ಕೆ ಬರುವ ಮತದಾರರಿಗೆ ಯಾವುದಾದರೊಂದು ಗುರುತಿನ ಚೀಟಿ ಕಡ್ಡಾಯವಾಗಿರುವ ಕುರಿತು ತಿಳಿವಳಿಕೆ ನೀಡಬೇಕು. ಹಣ, ಸೀರೆ ಸೇರಿದಂತೆ ಅನೇಕ ಆಸೆ ಆಮಿಷಗಳಿಗೆ ಒಳಗಾಗದೇ ನಿಷ್ಪಕ್ಷಪಾತವಾಗಿ, ಪ್ರಾಮಾಣಿಕವಾಗಿ ಚುನಾವಣೆ ಕಾರ್ಯ ನಿರ್ವಹಿಸಬೇಕು ಎಂದರು. ಸೆಕ್ಟರ್ ಆಫೀಸರ್ ಸಹಾಯಕ ಕೃಷಿ ನಿರ್ದೇಶಕ ಎಸ್.ಎ. ಸೂಡಿಶೆಟ್ಟರ, ಪಶು ಸಂಗೋಪನಾ ಅಧಿಕಾರಿ ಡಾ. ಎಚ್.ಬಿ. ಹುಲಗನ್ನವರ, ಉಪ ತಹಸೀಲ್ದಾರ್ ಎನ್.ಎಸ್. ಕೂಡಲ, ಆರ್.ಎನ್. ಜೋಶಿ, ಪುರಸಭೆ ಮುಖ್ಯಾಧಿಕಾರಿ ಬಾಬುರಾವ್ ಕಮತರ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಎಲ್.ವಿ. ಮೇಸ್ತಾ ಮುಂತಾದವರು ಮಾಹಿತಿ ನೀಡಿದರು. ರೋಣ ವಿಧಾನಸಭೆ ವ್ಯಾಪ್ತಿಯ ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳಾದ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ, ಪುರಸಭೆ, ಪಪಂ ಕರ ವಸೂಲಿಗಾರರು ಮತ್ತು ಗುಮಾಸ್ತರು ಪಾಲ್ಗೊಂಡಿದ್ದರು.