ಎಲುವು ಸಾಂದ್ರತೆ ತಪಾಸಣೆ ಶಿಬಿರ ಮುಕ್ತಾಯ
ಕನ್ನಡಪ್ರಭ ವಾರ್ತೆ, ಗದಗ, ಏ. 6
ಮಹಿಳೆಯರಿಗೆ 35 ವರ್ಷಗಳ ಬಳಿಕ ಹಲವು ಕಾರಣಗಳಿಂದ ಕ್ಯಾಲ್ಸಿಯಂ ಕೊರತೆ, ಮೂಳೆ ಸವೆತ ಹೆಚ್ಚಾಗಿ ಕಂಡುಬರುತ್ತದೆ. ಅದನ್ನು ತಡೆಗಟ್ಟಲು ಹೆಚ್ಚಾಗಿ ಕ್ಯಾಲ್ಸಿಯಂ, ಪ್ರೋಟೀನ್ಯುಕ್ತ ಆಹಾರ ಸೇವನೆ, ಒತ್ತಡಮುಕ್ತ ಜೀವನ, ನಿಯಮಿತ ವ್ಯಾಯಾಮ ಅಳವಡಿಸಿಕೊಳ್ಳಬೇಕು. ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು ಎಂದು ಎಲುವು-ಕೀಲು ತಜ್ಞ ಡಾ. ಎಂ.ವಿ. ಆಚಾರ್ ಹೇಳಿದರು.
ಅವರು ಶನಿವಾರ ನಗರದ ಅಧಮ್ಯ ಆಸ್ಪತ್ರೆಯಲ್ಲಿ ಸುವರ್ಣ ಲೇಡೀಸ್ ಕ್ಲಬ್ ಆಯೋಜಿಸಿದ್ದ ಎಲುವು ಸಾಂದ್ರತೆ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಪ್ರತಿಯೊಬ್ಬರೂ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಅದರಿಂದ ಆರೋಗ್ಯದಲ್ಲಿ ಏನೇ ವ್ಯತ್ಯಾಸವಾದರೂ ಬೇಗ ಕಂಡು ಹಿಡಿದು ಅದಕ್ಕೆ ಸೂಕ್ತ ಚಿಕಿತ್ಸೆ ಕಂಡುಕೊಳ್ಳಬಹುದು ಎಂದರು.
ಆಧ್ಯಕ್ಷತೆ ವಹಿಸಿದ್ದ ಸುವರ್ಣ ಲೇಡೀಸ್ ಕ್ಲಬ್ನ ಅಧ್ಯಕ್ಷೆ ಶೈಲಜಾ ಕವಲೂರ ಮಾತನಾಡಿ, ಮನೆಯಲ್ಲಿ ಮಹಿಳೆ ಆರೋಗ್ಯವಾಗಿದ್ದರೆ ಆ ಮನೆಯು ಆರೋಗ್ಯದಿಂದಿರುತ್ತದೆ. ಮಹಿಳೆಯರಿಗಾಗಿಯೇ ಆಯೋಜಿಸಿದ್ದ ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಕವಿತಾ ಕಾಶಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಪ್ರಿಯಾ ವೈದ್ಯ, ಟೀಕುಬಾಯಿ ಬಸವಾ, ಶಕುಂತಲಾ ಮೇರವಾಡೆ, ಭಾರತಿ ಬದಿ, ಗಿರಿಜಾ ಅಕ್ಕೂರ, ಅಧ್ಯಮ ಆಸ್ಪತ್ರೆಯ ಸಿಬ್ಬಂದಿ ಶ್ರೀಧರ ಪತ್ತೇಪುರ, ಅಸ್ಲಂ, ರೇಷ್ಮಾ, ಸುನಿತಾ, ಮೇಯರ್ ಆಗ್ರ್ಯಾನಿಕ್ನ ಅಜೇಯ ಹಿರೇಮಠ, ಎಲುವು ಸಾಂದ್ರತೆ ತಜ್ಞ ಉಮೇಶ ಹಾಗೂ ಲೇಡೀಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು. ಖಜಾಂಜಿ ಸಮುನ್ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಡಾ. ರಾಜಶ್ರೀ ಆಚಾರ ವಂದಿಸಿದರು.