ಧಾರ್ಮಿಕ ಸಭೆ, ಧಾನಿಗಳಿಗೆ ಸನ್ಮಾನ
ಮುಂಡರಗಿ: ತೇರೆಳೆವ ಜಾತ್ರೆಗಳು ಮಾನವ ಜೀವನ ಬಾಳ ಕಥನವನ್ನು ಮುನ್ನಡೆಸುವ ಒಂದು ಪ್ರತೀಕ ಎಂದು ಅಭಿವೃದ್ಧಿ ಹೋರಾಟ ವೇದಿಕೆ ತಾಲೂಕಾಧ್ಯಕ್ಷ ವೈ. ಎನ್. ಗೌಡರ ಹೇಳಿದರು.
ಶುಕ್ರವಾರ ರಾತ್ರಿ ತಾಲೂಕಿನ ಸುಕ್ಷೇತ್ರ ಶಿಂಗಟಾಲೂರು ವೀರಭದ್ರೆಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆ ಹಾಗೂ ಧಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ನೆಮ್ಮದಿ ಹಾಗೂ ಮಾನಸಿಕ ಶಾಂತಿ ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳಲ್ಲ. ಶ್ರೀಮಂತಿಕೆ ಮತ್ತು ಅಧಿಕಾರದ ಹುಚ್ಚಿನಲ್ಲಿ ಇಂದಿನ ಪೀಳಿಗೆ ತಮ್ಮ ಮಾನಸಿಕ ಸ್ವಾಸ್ಥ್ಯವನ್ನು ಹಾಳು ಮಾಡಿಕೊಳ್ಳುವುದರ ಜತೆಗೆ ಸಾಮಾಜಿಕ ಶಾಂತಿಯನ್ನು ಹಾಳು ಮಾಡುತ್ತಿರುವುದು ದುರದೃಷ್ಟಕರ ಎಂದರು. ಹೊನ್ನಾಳಿಯ ಹಿರೇಕಲ್ಮಠದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಕಲಕೇರಿ ವಿರೂಪಾಪೂರ ಮಠದ ಮುಧುಕೇಶ್ವರ ಶಿವಾಚಾರ್ಯ ಶ್ರೀ ಉಪಸ್ಥಿತರಿದ್ದು, ದೇವಸ್ಥಾನ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಅಧ್ಯಕ್ಷತೆ ವಹಿಸಿದ್ದರು. ಅಂದಪ್ಪ ಬೆಲ್ಲದ, ಬಸವರಡ್ಡಿ ನೀರಲಗಿ, ಈರಣ್ಣ ಶೆಟ್ಟರ, ಶೇಖರಪ್ಪ ಬಾಲೇಹೊಸೂರ, ಶಿವಪ್ಪ ಜತ್ಲಿ, ಅಂದಪ್ಪ ಗೋಡಿ, ಸುಭಾಸ ಬಾಗೇವಾಡಿ, ಶೇಖರಗೌಡ ಪಾಟೀಲ ಉಪಸ್ಥಿತರಿದ್ದರು. ಅಣ್ಣಯ್ಯ ಪಾಟೀಲ ಸ್ವಾಗತಿಸಿ, ಉಮೇಶ ಬೂದಿಹಾಳ ನಿರೂಪಿಸಿ, ವಂದಿಸಿದರು. ನಂತರ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರೋಣ ತಾಲೂಕಿನ ಕೊತಬಾಳ ಗ್ರಾಮದ ಅರುಣೋದಯ ತಂಡದ ಶಂಕ್ರಣ್ಣ ಸಂಕಣ್ಣವರ ಸಂಗಡಿಗರಿಂದ ಜಾನಪದ ಕಾರ್ಯಕ್ರಮ ಜರುಗಿತು.