ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪಕ್ಷಗಳಿಗೆ ಸ್ಟಾರ್ ಪ್ರಚಾರಕರ ಕೊರತೆ!

Rashmi Kasaragodu
Updated On : 7 Apr 2014, 12:36 pm

ಶಿವಕುಮಾರ ಕುಷ್ಟಗಿ
ಗದಗ: ಲೋಕಸಭಾ ಚುನಾವಣೆಯ ಮತದಾನಕ್ಕೆ 15 ದಿನ ಉಳಿದಿದೆ. ಆದರೆ, ಎಲ್ಲ ಪಕ್ಷಗಳಲ್ಲಿಯೂ ಸ್ಟಾರ್ ಪ್ರಚಾರಕರ ಕೊರತೆ ಕಾಡುತ್ತಿದೆ.
ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಚುನಾವಣೆ ಘೋಷಿಸಿದ್ದೇ ಇದಕ್ಕೆ ಕಾರಣ. ಮೊದಲು ಇದೇನೂ ಸಮಸ್ಯೆಯೇ ಅಲ್ಲ ಎಂದಿದ್ದ ನಾಯಕರು ಹಾಗೂ ಅಭ್ಯರ್ಥಿಗಳು ಈಗ ಗೊಣಗುತ್ತಲೇ ಚುನಾವಣೆ ಎದುರಿಸುವಂತಾಗಿದೆ. ಪ್ರತಿ ಪಕ್ಷದಲ್ಲೂ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಟಾರ್ ಪ್ರಚಾರಕರು ಎಂದು ಗುರುತಿಸಿಕೊಂಡ ನಾಯಕರಿರುತ್ತಾರೆ. ಅವರು ಬಂದಲ್ಲೆಲ್ಲ ಜನ ಸೇರುತ್ತಾರೆ. ಅವರಿಗೆ ಮತದಾರರನ್ನು ಓಲೈಸುವ ಶಕ್ತಿ, ಮತಗಳನ್ನಾಗಿ ಪರಿವರ್ತಿಸುವ ತಾಕತ್ತು ಇರುತ್ತದೆ. ಅಂಥ ಪ್ರಚಾರಕರು ತಮ್ಮ ಕ್ಷೇತ್ರಕ್ಕೂ ಬರಬೇಕು ಎಂಬುದು ಪ್ರತಿ ಅಭ್ಯರ್ಥಿಯ ಆಕಾಂಕ್ಷೆ. ಆದರೆ, ಈ ಸಲ ಅಂಥ ಯಾವುದೇ ಸ್ಟಾರ್ ಪ್ರಚಾರಕ ಅಭ್ಯರ್ಥಿಗಳ ಕೈಗೆ ಸಿಗುತ್ತಿಲ್ಲ!
ಯಾರು ಸ್ಟಾರ್ ಪ್ರಚಾರಕರು?: ಬಿಜೆಪಿಯಲ್ಲಿ ಯಡಿಯೂರಪ್ಪ, ಶ್ರೀರಾಮುಲು, ಕೆ.ಎಸ್. ಈಶ್ವರಪ್ಪ, ಜಗದೀಶ ಶೆಟ್ಟರ್, ಕಾಂಗ್ರೆಸ್ನಲ್ಲಿ ಸಿಎಂ ಸಿದ್ದರಾಮಯ್ಯ, ಸತೀಶ ಜಾರಕಿಹೊಳಿ, ಸಿ.ಎಂ. ಇಬ್ರಾಹಿಂ, ಎಸ್.ಎಂ. ಕೃಷ್ಣ, ಡಿ.ಕೆ. ಶಿವಕುಮಾರ್, ಜೆಡಿಎಸ್ ಪಾಲಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರೇ ಸ್ಟಾರ್ ಪ್ರಚಾರಕರು.
ಏಕೆ ಸಿಗುತ್ತಿಲ್ಲ?: ಎಲ್ಲ ಪಕ್ಷಗಳು ಈ ಚುನಾವಣೆಯನ್ನು ಸವಾಲಾಗಿ ಪರಿಗಣಿಸಿ ಸ್ಟಾರ್ ಪ್ರಚಾರಕರನ್ನೇ ಅಭ್ಯರ್ಥಿಗಳನ್ನಾಗಿ ಘೋಷಿಸಿದ್ದರಿಂದ ಅವರೆಲ್ಲ ತಮ್ಮ ಕ್ಷೇತ್ರ ಉಳಿಸಿಕೊಳ್ಳಲು ಒತ್ತು ನೀಡುತ್ತಿದ್ದಾರೆ. ಬೇರೆ ಕ್ಷೇತ್ರಗಳಿಗೆ ಪ್ರಚಾರಕ್ಕೆ ಹೋಗಲು ಸಮಯವೇ ಸಿಗುತ್ತಿಲ್ಲ. ಈ ವಿಷಯದಲ್ಲಿ ಕಾಂಗ್ರೆಸ್ ಸ್ವಲ್ಪ ನಿರಾಳ. ಸಿದ್ದರಾಮಯ್ಯ, ಸತೀಶ ಜಾರಕಿಹೊಳಿ, ಎಸ್.ಎಂ. ಕೃಷ್ಣ, ಸಿ.ಎಂ. ಇಬ್ರಾಹಿಂ ಕಣದಿಂದ ಹೊರಗಿದ್ದಾರೆ.
ನಾಯಕರ ನೋಡಿ ಮತ: ಈ ಎಲ್ಲ ಸ್ಟಾರ್ ಪ್ರಚಾರಕರು ಪ್ರಬಲ ಕೋಮಿನವರು. ರಾಜ್ಯ ದ ಯಾವ ಭಾಗಕ್ಕೆ ಹೋದರೂ ಪ್ರಭಾವ ಬೀರಬಲ್ಲಂಥವರು. ಅವರು ಪ್ರಚಾರ ಮಾಡಿದರೆ ಗೆಲವು ಸುಲಭ ಎಂಬುದು ಅಭ್ಯರ್ಥಿಗಳ ಅಂಬೋಣ. ಕೆಲ ನಾಯಕರು ಕೆಲ ಭಾಗದಲ್ಲಿ ಪ್ರಭಾವ. ಆದರೆ, ಅವರೆಲ್ಲ ರಾಜ್ಯಾದ್ಯಂತ ಪ್ರವಾಸ ಮಾಡಲು ಸಾಧ್ಯವಿಲ್ಲ. ಬಂದರೂ ಕ್ಷೇತ್ರದಲ್ಲಿ ಒಮ್ಮೆ ಪ್ರಚಾರ ಮಾಡಬಹುದಷ್ಟೇ. ಪ್ರಭಾವಿ ನಾಯಕರು ಬಂದರೆ ಚುನಾವಣೆ ಫಲಿತಾಂಶಕ್ಕೆ ಅನುಕೂಲ. ಆದರೆ, ಈ ಬಾರಿ ನಾವೇ ಕಷ್ಟಪಟ್ಟು ಪ್ರಚಾರ ಮಾಡುವಂತಾಗಿದೆ ಎಂದು ಎಲ್ಲ ಪಕ್ಷಗಳ ಕಾರ್ಯಕರ್ತರೂ ಹೇಳುತ್ತಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement