ಉದಾಸಿ ಕೊಡುಗೆ ಶೂನ್ಯ: ಕುನ್ನೂರ
ಹಾವೇರಿ: ಹಾವೇರಿಯಲ್ಲಿ ರೇಲ್ವೆ ಮೇಲ್ಸೇತುವೆ, ತೋಟಗಾರಿಕಾ ಮಿಶನ್ ಸೇರಿದಂತೆ ಅನೇಕ ಯೋಜನೆಗಳು ಕಾರ್ಯಗತವಾಗಲು ತಾವೇ ಕಾರಣ ಎಂದು ಶಿವಕುಮಾರ ಉದಾಸಿ ಹೇಳಿಕೊಳ್ಳುತ್ತಿದ್ದಾರೆ. ಕ್ಷೇತ್ರಕ್ಕಾಗಿ ಉದಾಸಿ ಅವರ ಕೊಡುಗೆ ಶೂನ್ಯ. ಆದ್ದರಿಂದ ಈ ಬಾರಿ ಸಲೀಂ ಅಹ್ಮದ್ ಗೆಲ್ಲುವುದು ನಿಶ್ಚಿತ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೇಲ್ವೆ ಮೇಲ್ಸೇತುವೆ ಕಾಮಗಾರಿಗೆ ನಾನು ಸಂಸದನಾಗಿದ್ದಾಗಲೇ ಪ್ರಯತ್ನ ಮಾಡಿ ಮಂಜೂರಾತಿ ದೊರಕಿಸಿಕೊಟ್ಟಿದ್ದೇನೆ.
ರೇಲ್ವೆ ಸಚಿವರು, ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆ ತಿಳಿಸಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಮಂಜೂರಾತಿ ದೊರಕಿಸಲು ಪ್ರಯತ್ನ ಮಾಡಿದ್ದೇನೆ. ಆದರೆ, ಈಗ ಶಿವಕುಮಾರ ಉದಾಸಿ ಈ ಯೋಜನೆ ತನ್ನದೆಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ತೋಟಗಾರಿಕಾ ಮಿಶನ್ ರಾಷ್ಟ್ರೀಯ ಯೋಜನೆಯಾಗಿದ್ದು, ಎಲ್ಲ ಕಡೆ ಸಿಗುವಂತೆ ಇಲ್ಲಿಯೂ ದೊರಕಿದೆ. ಅದನ್ನೂ ತಮ್ಮ ಕೊಡುಗೆ ಎಂದು ಉದಾಸಿ ಹೇಳಿಕೊಂಡು ತಿರುಗುತ್ತಿದ್ದಾರೆ. ಇವೆಲ್ಲವೂ ಯುಪಿಎ ಸರ್ಕಾರದ ಕೊಡುಗೆಯಾಗಿವೆ ಎಂದರು. ಅಭ್ಯರ್ಥಿ ಸಲೀಂ ಅಹ್ಮದ್ ಮಾತನಾಡಿ, ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.
ಶಾಸಕ ಮನೋಹರ ತಹಸೀಲ್ದಾರ್, ಶಿವಕುಮಾರ ಉದಾಸಿ ಜನತೆಯ ಪಾಲಿಗೆ ಗಗನ ಕುಸುಮವಾಗಿದ್ದಾರೆ. ಇದುವರೆಗೆ ಕ್ಷೇತ್ರದ ಜನತೆಗೆ ಸಿಗದ ಅವರು ಈಗ ಎಲ್ಲೆಡೆ ಹೋಗುತ್ತಿದ್ದಾರೆ. ಅವರ ಸಾಧನೆ ಶೂನ್ಯ ಎಂದರು.
ಶಾಸಕ ರುದ್ರಪ್ಪ ಲಮಾಣಿ, ಕ್ಷೇತ್ರದಲ್ಲಿ 7 ಕಾಂಗ್ರೆಸ್ ಶಾಸಕರಿದ್ದಾರೆ. ಆದ್ದರಿಂದ ಸಲೀಂ ಅಹ್ಮದ್ ಅವರಿಗೆ ಎಲ್ಲೆಡೆ ಉತ್ತಮ ಜನ ಬೆಂಬಲ ವ್ಯಕ್ತವಾಗುತ್ತಿದ್ದು, ಅವರ ಜಾತ್ಯತೀತ ವ್ಯಕ್ತಿತ್ವಕ್ಕೆ ಜನ ಅವರನ್ನು ಆಯ್ಕೆ ಮಾಡಲಿದ್ದಾರೆ ಎಂದರು. ಕಾಂಗ್ರೆಸ್ ಎಸ್ಟಿ ವಿಭಾಗದ ರಾಜ್ಯಾಧ್ಯಕ್ಷ ಟಿ. ಈಶ್ವರ ಮಾತನಾಡಿದರು. ಲೋಕಸಭಾ ವೀಕ್ಷಕ ಡಿ. ಬಸವರಾಜ ಇತರರು ಇದ್ದರು.