ಮೋದಿ ಅಲೆ ಬಿಜೆಪಿ ಭ್ರಮೆಯಷ್ಟೇ
ಹಿರೇಕೆರೂರ: ಯುವಕರ ಹಾಗೂ ಬುದ್ಧಿಜೀವಿಗಳ ಚಿತ್ತ ಬದಲಾವಣೆಯತ್ತ ಮುಖ ಮಾಡಿದೆ. ಹಾಗಾಗಿ ಮೋದಿ ಅಲೆ ಎಲ್ಲಿಯೂ ಇಲ್ಲ. ಅದು ಕೇವಲ ಬಿಜೆಪಿ ಭ್ರಮೆ ಅಷ್ಟೇ ಎಂದು ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ ವಿಶ್ವಾಸ ವ್ಯಕ್ತಪಡಿಸಿದರು.
ಅವರು ನಗರದ ಕಾರ್ಯಕರ್ತರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷ ಬಡವರ, ದೀನ ದಲಿತರ ಪರ ಕಾರ್ಯಕ್ರಮ ಹಾಗೂ ಕೇಂದ್ರ ಸರ್ಕಾರದ ಅಭಿವೃದ್ದಿ ಯೋಜನೆ, ಪಕ್ಷದ ಸ್ಟಿದ್ಧಾಂತ, ತ್ಯಾಗ ಬಲಿದಾನಗಳೆ ಪಕ್ಷದ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ರಾಜ್ಯದಲ್ಲಿ ಈ ಹಿಂದೆ 5 ವರ್ಷಗಳ ಕಾಲ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ಅಭಿವೃದ್ದಿ, ಸಾಧನೆ ಮಾತ್ರ ಶೂನ್ಯ ಎಂದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾವೇರಿ ಜಿಲ್ಲೆಗೆ ಸಚಿವರಾಗಿದ್ದ ಸಿ.ಎಂ. ಉದಾಸಿ ಏನೂ ಕೊಡುಗೆ ನೀಡಿಲ್ಲ. ಕೇವಲ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಮುಂತಾದ ಹಗರಣಗಳೇ ಬಿಜೆಪಿ ಸರ್ಕಾರದ ಸಾಧನೆಯಾಗಿದೆ ಎಂದು ದೂರಿದರು. ಬಾಬುಸಾಬ್ ಜಡದಿ, ಎಂ.ಪಿ. ಪ್ರಕಾಶ್, ಹೇಮಣ್ಣ ಹಾದ್ರಿಹಳ್ಳಿ, ಯಶವಂತ ಹೆಡಿಯಾಲ, ಬಾಷಾಸಾಬ ಮುಲ್ಲಾ ಮುಂತಾದವರು ಇದ್ದರು.
ಬಡವರ ಬೆನ್ನಿಗೆ ನಿಂತ ಕಾಂಗ್ರೆಸ್: ಶಿವಣ್ಣವರ
ಬ್ಯಾಡಗಿ: ಮೋದಿಯ ಹೈಟೆಕ್ ತಂತ್ರಗಾರಿಕೆಗೆ ಬಿಜೆಪಿ ಬಲಿಯಾಗಿದ್ದು, ಆಂತರಿಕ ಭಿನ್ನಮತಕ್ಕೆ ಬಿಜೆಪಿಗೆ ಸೋಲು ಖಚಿತವಾಗಿದ್ದು, ಉದ್ಯೋಗ ಖಾತ್ರಿಯಂತಹ ಜನಪರ ಯೋಜನೆಯಿಂದ ಬಡವರ ಬೆನ್ನಿಗೆ ನಿಂತಿರುವ ಕಾಂಗ್ರೆಸ್ನಿಂದ ಮಾತ್ರ ಸುಭದ್ರ ಸರ್ಕಾರ ಸಾಧ್ಯವೆಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು. ಸೋಮವಾರ ತಾಲೂಕಿನ ಛತ್ರ, ಕಲ್ಲೇದೇವರ, ಅಳಲಗೇರಿ ಬುಡಪನಹಳ್ಳಿ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು. ಸಲೀಂ ಅಹ್ಮದ್ ಸರಳ ಸಜ್ಜನಿಕೆಯ ವ್ಯಕ್ತಿ ಬಡವರ ನೋವು ನಲಿವುಗಳನ್ನು ಹತ್ತಿರದಿಂದ ನೋಡಿದ ವ್ಯಕ್ತಿ. ಅಲ್ಲದೆ, ಕಳೆದ ಬಾರಿ ಸೋತಿದ್ದ ಅವರ ಮೇಲೆ ಮತದಾರರು ಅನುಕಂಪ ಹೊಂದಿದ್ದು ಗ್ರಾಮೀಣ ಪ್ರದೇಶದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅವರ ಗೆಲುವು ಖಚಿತ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಸೇನ್ಸಾಬ್, ಎಸ್.ಆರ್. ಪಾಟೀಲ, ದಾನಪ್ಪ ಚೂರಿ, ರಮೇಶ ಸುತ್ತಕೋಟಿ, ಎಸ್.ಎಸ್. ಅಂಬಲಿ, ಚಂದ್ರಣ್ಣ ಸೊಟ್ಟಮ್ಮನವರ, ಹುಲಿಗೇಶ್, ಬೀರಪ್ಪ ಬಣಕಾರ, ಶಂಭನಗೌಡ ಪಾಟೀಲ, ಹನುಮಂತ ಲಮಾಣಿ ಇದ್ದರು