ಬಡವರಿಗೆ ಅಕ್ಕಿ: ಬಿಜೆಪಿಗೆ ಅಸಮಾಧಾನ
ಗದಗ: ಬಿಜೆಪಿ ಬಡವರ ವಿರೋಧಿ. ಸಿದ್ದರಾಮಯ್ಯ ಬಡವರಿಗೆ ರು. 1ಗೆ ಕೆಜಿ ಅಕ್ಕಿ ಕೊಟ್ಟು ಸೋಮಾರಿಗಳನ್ನಾಗಿ ಮಾಡಿದ್ದಾನೆ ಎಂದು ಬಿಜೆಪಿ ನಾಯಕರು ಹೇಳುವ ಮೂಲಕ ಬಡವರ ವಿರೋಧಿ ಎಂದು ಸಾಬೀತು ಮಾಡಿದ್ದಾರೆ. ಅದಕ್ಕಾಗಿ ರಾಜ್ಯದ 1.40 ಕೋಟಿ ಬಡ ಕುಟುಂಬದವರು ತಮ್ಮ ವಿರೋಧಿಗಳಿಗೆ ಮತ ಹಾಕಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಪರ ಪ್ರಚಾರ ಕಾರ್ಯಕ್ರಮದಲ್ಲಿ ಶುಕ್ರವಾರ ಪಾಲ್ಗೊಂಡ ಅವರು, ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಅವರ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಏನು ಹೊಸದಿಲ್ಲ. ಬಡವರ ಅಭಿವೃದ್ಧಿಗೆ ಒಂದೇ ಒಂದು ಯೋಜನೆ ಇಲ್ಲ. ಇಂತಹ ಜನರಿಂದ ನೀವು ಮತ್ತಷ್ಟು ತೊಂದರೆ ಅನುಭವಿಸುತ್ತೀರಿ. ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟಿರುವ ಕಾಂಗ್ರೆಸ್‌ನ್ನು ಬೆಂಬಲಿಸಿ ಎಂದರು. ಹಸಿವು ಮುಕ್ತ ಕರ್ನಾಟಕ ನಿರ್ಮಾಣ ನನ್ನ ಗುರಿ. ನಾನು ಚಿಕ್ಕವನಿದ್ದಾಗ ಶ್ರೀಮಂತರ ಮನೆ ಮುಂದೆ ತುತ್ತು ಅನ್ನಕ್ಕಾಗಿ ಕಾಯುತ್ತಾ ನಿಂತಿರುವ ಬಡವರನ್ನು ಕಂಡಿದ್ದೇನೆ.
ಅದಕ್ಕಾಗಿಯೇ ಎಷ್ಟೇ ಹಣ ಖರ್ಚಾದರೂ ರು. 1ಗೆ ಕೆಜಿ ಅಕ್ಕಿ ಕೊಡುತ್ತಿದ್ದೇನೆ. ಇದನ್ನು ಸಹಿಸದವರು ಏನೇನೋ ಮಾತನಾಡುತ್ತಿದ್ದಾರೆ. ಅದಕ್ಕೆಲ್ಲ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.