ಬಿಜೆಪಿಗೆ ಮನುಷ್ಯತ್ವವೇ ಇಲ್ಲ
ಗದಗ: ಬಿಜೆಪಿಯವರಿಗೆ ಮನುಷ್ಯತ್ವವೇ ಇಲ್ಲ. ಇಲ್ಲಿ ಬಡವರಿಗೆ ಅಗ್ಗದ ದರದಲ್ಲಿ ಅಕ್ಕಿ ನೀಡಿದರೆ ಟೀಕಿಸುತ್ತಾರೆ. ಗುಜರಾತ್ನಲ್ಲಿ ಹಲವಾರು ಜೀವಗಳು ಬಲಿಯಾಗಿದ್ದರೂ ಅಲ್ಲಿನ ಸಿಎಂ ಕನಿಷ್ಠ ಪಶ್ಚಾತ್ತಾಪ ಪಡುವ ಸೌಜನ್ಯ ತೋರುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಅವರು ಶುಕ್ರವಾರ ಗದಗ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲಿಂ ಅಹ್ಮದ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು. ರಾಜ್ಯದ ಬಿಜೆಪಿ ನಾಯಕರಿಗೆ ಮತ ಕೇಳಲು ನೈತಿಕ ಹಕ್ಕಿಲ್ಲ. ಅದಕ್ಕಾಗಿ ಮೋದಿ ಅವರನ್ನು ಪದೇ ಪದೇ ರಾಜ್ಯಕ್ಕೆ ಕರೆ ತಂದು ಪ್ರಚಾರ ಮಾಡುತ್ತಿದ್ದಾರೆ.
ಅವರಿಗೆ ಜನತೆ ಕೊಟ್ಟ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು, ಸ್ವಜನ ಪಕ್ಷಪಾತ, ಭ್ರಷ್ಟಾಚಾರದಲ್ಲಿ ಮುಳುಗಿದ್ದರಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ 13 ಮಂತ್ರಿಗಳು ಅಧಿಕಾರ ಕಳೆದುಕೊಂಡಿದ್ದು ರಾಜ್ಯದ ಇತಿಹಾಸದಲ್ಲಿ ದಾಖಲಾಗಿದೆ ಎಂದು ಲೇವಡಿ ಮಾಡಿದರು.
ಅಭ್ಯರ್ಥಿ ಸಲೀಂ ಅಹ್ಮದ ಮಾತನಾಡಿ, ಕಳೆದ 5 ವರ್ಷದಲ್ಲಿ ಹಾಲಿ ಸಂಸದರ ಸಾಧನೆ ಶೂನ್ಯ. ನಾನು 18 ವರ್ಷಗಳಿಂದ ಕ್ಷೇತ್ರದ ಸಂಪರ್ಕದಲ್ಲಿದ್ದು, ಕಳೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದು, ಈ ಬಾರಿ ಗೆಲುವು ನನ್ನದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ನಾವು ಅಬ್ಬರ ಪ್ರಚಾರದ ಮೂಲಕ ಜನತೆಯನ್ನು ದಾರಿ ತಪ್ಪಿಸಲ್ಲ. ಹೇಳಿದ ಕೆಲಸ ಮಾಡಿ ತೋರಿಸುತ್ತೇವೆ. ಮೋದಿ ಒಬ್ಬ ಸುಳ್ಳುಗಾರ ಎಂದು ಟೀಕಿಸಿದರು. ಸಿ.ಎಂ. ಇಬ್ರಾಹಿಂ, ಬಸವಣ್ಣನವರ ವಚನಗಳನ್ನು ಉದ್ಧರಿಸಿ, ಬಿಜೆಪಿಯನ್ನು ಜರೆದರು. ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಮೋದಿ ಈಗ ತಮ್ಮ ಪತ್ನಿ ಹೆಸರನ್ನು ನಮೂದಿಸಿದ್ದಾರೆ. ಹೆಂಡತಿಯನ್ನೇ ಗಮನಿಸದ ವ್ಯಕ್ತಿ ದೇಶವನ್ನು ಹೇಗೆ ಗಮನಿಸುತ್ತಾರೆ ಎಂದು ಪ್ರಶ್ನಿಸಿದರು. ರೋಣ ಶಾಸಕ ಜಿ.ಎಸ್. ಪಾಟೀಲ, ವೀರಣ್ಣ ಮತ್ತಿಕಟ್ಟಿ ಮತ್ತು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿದರು. ನರಗುಂದ ಶಾಸಕ ಬಿ.ಆರ್. ಯಾವಗಲ್ಲ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಐ.ಎಸ್. ಪಾಟೀಲ ಇದ್ದರು.