ಅನ್ನ, ಹಾಲು ಕೊಟ್ಟವರಿಗೆ ವೋಟ್ ಕೊಡಿ: ಪಾಟೀಲ
ಗಜೇಂದ್ರಗಡ: ಕಾಂಗ್ರೆಸ್ ಪಕ್ಷ ಸರ್ವ ಧರ್ಮಗಳ ಸಂಗಮವಾಗಿದೆ. ಅನ್ನ, ಹಾಲು ಕೊಟ್ಟವರಿಗೆ ವೋಟ್ ಕೊಡಿ ಎಂದು ಶಾಸಕ ಜಿ.ಎಸ್. ಪಾಟೀಲ ಮತದಾರರಲ್ಲಿ ವಿನಂತಿಸಿದರು.
ಅವರು ಪಟ್ಟಣಕ್ಕೆ ಶನಿವಾರ ಭೇಟಿ ನೀಡಿದ ಅವರು ಕಾಂಗ್ರೆಸ್ ನಾಯಕರು, ಕಾರ್ಯಕರ್ತರ ಜತೆ ವಿವಿಧ ಬಡಾವಣೆಯಲ್ಲಿ ಪಾದಯಾತ್ರೆ ನಡೆಸಿ ಹಾವೇರಿ ಲೋಕಸಭೆ ಮತಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಪರ ಮತ ಯಾಚಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸ್ವಾತಂತ್ರ್ಯದ ಬಳಿಕ ಕತ್ತಲೆ ಕೂಪದಲ್ಲಿದ್ದ ಭಾರತವನ್ನು ಅಭಿವೃದ್ಧಿ ಪಥಕ್ಕೆ ತಂದಿದ್ದು ಕಾಂಗ್ರೆಸ್ ಪಕ್ಷವಾಗಿದೆ. ದೇಶವನ್ನು ಲೂಟಿ ಮಾಡಿದ ಬಳಿಕ ದೇಶ ಸಂಕಷ್ಟದ ಸ್ಥಿತಿಯಲ್ಲಿತ್ತು. ಜನತೆಗೆ ವಾಸ ಮಾಡಲು ಮನೆಯಿರಲಿಲ್ಲ. ವಿದ್ಯುತ್ ವ್ಯವಸ್ಥೆ ಇರಲಿಲ್ಲ. ಆಸ್ಪತ್ರೆ, ಶಾಲೆ, ರಸ್ತೆ ಎಲ್ಲವನ್ನು ಮಾಡಿರುವುದು ಕಾಂಗ್ರೆಸ್. 6 ದಶಕ ದೇಶವನ್ನಾಳಿದ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವ ಬಿಜೆಪಿಗೆ ನಮ್ಮಲ್ಲಿ ಉತ್ತರವಿದೆ ಎಂದರು. ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ವೀರಣ್ಣ ಸೊನ್ನದ, ಜಿಲ್ಲಾ ಉಪಾಧ್ಯಕ್ಷ ಅಶೋಕ ಬಾಗಮಾರ, ಪುರಸಭೆ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ವಿ.ಆರ್. ಗುಡಿಸಾಗರ, ಸುಭಾನಸಾಬ್ ಆರಗಿದ್ದಿ, ಚಂಬಣ್ಣ ಚವಡಿ, ಶ್ರೀಧರ ಗಂಜಿಗೌಡ್ರ, ಶ್ರೀಕಾಂತ ಅವಧೂತ, ಶಶಿಧರ ವಕ್ಕಲರ, ವಿ.ಬಿ. ಸೋಮನಕಟ್ಟಿಮಠ, ಬಾಬಣ್ಣ ನದಾಫ್, ಮರ್ತುಜಾ ಡಾಲಾಯತ್, ಪ್ರಶಾಂತ ರಾಠೋಡ, ಉಮೇಶ ರಾಠೋಡ, ರವಿ ಗಡೇದವರ, ಪಿ.ಸಿ. ರಾಯಬಾಗಿ, ಹೂವಾಜಿ ಚಂದೂಕರ ಉಪಸ್ಥಿತರಿದ್ದರು.