ಭ್ರಷ್ಟ ಪಕ್ಷಗಳಿಗೆ ಮತ ಕೊಡಬೇಡಿ: ನಾಡಗೌಡ
ನರಗುಂದ: ದೇಶಕ್ಕೆ ಸ್ವಾತಂತ್ರ್ಯ ಬಂದು 67 ವರ್ಷ ಗತಿಸಿದರೂ ಅಭಿವೃದ್ಧಿ ಎನ್ನುವುದು ಈ ದೇಶಕ್ಕೆ ಮರೀಚಿಕೆ ಆಗಿದೆ. ಇಂತಹ ಪಕ್ಷಗಳಿಗೆ ಲೋಕಸಭಾ ಚುನಾವಣೆಯಲ್ಲಿ ಮತ ಹಾಕಬಾರದು ಎಂದು ಸಂಯುಕ್ತ ಜನತಾ ದಳದ ರಾಜ್ಯಾಧ್ಯಕ್ಷ ಎಂ.ಪಿ. ನಾಡಗೌಡ ಹೇಳಿದರು.
ಅವರು ಶನಿವಾರ ಪಟ್ಟಣದ ಬಸವೇಶ್ವರ ಸರ್ಕಲ್‌ನಿಂದ ರೋಡ್ ಶೋ ಮೂಲಕ ಜೆಡಿಯು ಅಭ್ಯರ್ಥಿ ಎಸ್.ಎಸ್. ಕಣಗೂರು ಪರ ಮತ ಯಾಚಿಸಿ ಅನಂತರ ಬಹಿರಂಗ ಸಭೆಯಲ್ಲಿ ಮಾತನಾಡಿದರು. ದೇಶದ ಸಂಪತ್ತು ಲೂಟಿ, ಅಭಿವೃದ್ಧಿ ಹಾಳು ಮಾಡಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ದೇಶದಲ್ಲಿ ಸಂಪತ್ತು ಸದ್ಬಳಕೆಗೆ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ. ಈ ಕಳಸಾ-ಬಂಡೂರಿ ನಾಲಾ ಯೋಜನೆಗೆ ನ್ಯಾಯಾಧೀಕರಣ ಮಾಡಬೇಕೆಂದು 10 ವರ್ಷದ ಹಿಂದೆ ಹೇಳಿದ್ದೆ. ಈ ಭಾಗದ ರೈತರ ಬಹುವರ್ಷಗಳ ಕನಸಾಗಿತ್ತು. ಆ ಸಮಯದಲ್ಲಿ ಆಡಳಿತ ನಡೆಸುತ್ತಿದ್ದವರು ತಮ್ಮ ಮಾತಿಗೆ ಬೆಲೆ ನೀಡಿಲ್ಲ. ಹೀಗಾಗಿ ಯೋಜನೆ ಅರ್ಧಕ್ಕೆ ನಿಂತಿದೆ. ಈ ಯೋಜನೆ ಹೆಸರಿನಲ್ಲಿ ರಾಜಕೀಯ ಮಾಡಿದ ಬಿಜೆಪಿ ಕೂಡ ಯೋಜನೆ ಪೂರ್ಣಗೊಳಿಸಿಲ್ಲ ಎಂದರು. ಜೆಡಿಎಸ್ ಮಹಿಳಾ ಘಟಕದ ಉಪಾಧ್ಯಕ್ಷ ಸಾವಿತ್ರಿ ಗುಂಡಿ ಮಾತನಾಡಿ, ಅಭಿವೃದ್ಧಿ ಹೆಸರಿನಲ್ಲಿ ಯುಪಿಎ ಸರ್ಕಾರ ದೇಶವನ್ನು ಕೊಳ್ಳ ಹೊಡೆದಿದೆ. ಇನ್ನು ಅದೇ ಹೆಸರನಲ್ಲಿ ಬಿಜೆಪಿ ಕೂಡ ಮತ ಕೇಳಿ, ಜನತೆಗೆ ಮೋಸ ಮಾಡುವ ಕಾರ್ಯ ನಡೆಸಿದೆ. ಅದಕ್ಕೆ ಮತದಾರರು ಅವಕಾಶ ಕೊಡಬಾರದು ಎಂದರು. ಎಸ್.ಎಸ್. ಕಣಗೂರು, ಎ.ಜಿ. ತಿರ್ಲಾಪುರ, ಕೋರಿಶೆಟ್ಟರ, ಹನುಮಂತಗೌಡ ಹುಡೇದ, ಶ್ರೀಶೈಲಗೌಡ ಕಮತ ಇದ್ದರು.