ಚುನಾವಣೆ: ಬಹಿರಂಗ ಪ್ರಚಾರಕ್ಕೆ ತೆರೆ
ಗದಗ: ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಮಂಗಳವಾರ ಕೊನೆ ದಿನವಾಗಿದ್ದು, ಜಿಲ್ಲೆಯಾದ್ಯಂತ ಎಲ್ಲಾ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ನಡೆಸಿದರು.
ಗದಗ, ಬೆಟಗೇರಿ ಅವಳಿ ನಗರದಲ್ಲಿ ನಟಿ ಹರ್ಷಿಕಾ ಪೊಣ್ಣಚ್ಚ ಬಿಜೆಪಿ ಯುವ ಘಟಕದ ಪದಾಧಿಕಾರಿಗಳು ಹಾಗೂ ಯುವಕರೊಂದಿಗೆ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಕಾಂಗ್ರೆಸ್ ಯುವ ಘಟಕದ ಪದಾಧಿಕಾರಿಗಳು ಕೂಡಾ ಅವಳಿ ನಗರದಾದ್ಯಂತ ಬೈಕ್ ರ್ಯಾಲಿ ನಡೆಸಿದರು.
ಇನ್ನು ಮಹಿಳಾ ಘಟಕಗಳ ಪದಾಧಿಕಾರಿಗಳು ಮಹಿಳಾ ಮತದಾರರ ಮನವೊಲಿಸಲು ಕೈಯಲ್ಲಿ ಕರಪತ್ರ ಹಿಡಿದುಕೊಂಡು ಗಲ್ಲಿ ಗಲ್ಲಿಗಳಲ್ಲಿ ಸಂಚರಿಸಿ ಮತ ಯಾಚನೆ ಮಾಡಿದರು. ಆಯಾ ಕ್ಷೇತ್ರಗಳಲ್ಲಿರುವ ಶಾಸಕರು ಮಾಜಿ ಶಾಸಕರು ತಮ್ಮ ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿ ಶತಾಯಗತಾಯ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಮತದಾರರ ಮನವೊಲಿಸಲು ಪ್ರಯತ್ನಿಸಿದರು. ಮಂಗಳವಾರ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಇನ್ನೇನಿದ್ದರೂ ಗುಪ್ತ ಪ್ರಚಾರ, ಗುಪ್ತ ವ್ಯವಹಾರ ಎನ್ನುವ ಮಾತುಗಳು ರಾಜಕೀಯ ವಲಯದಿಂದಲೇ ಕೇಳಿ ಬರುತ್ತಿವೆ.
ಜಿಲ್ಲೆಯಲ್ಲಿ ಶಾಂತಿಯುತ ಚುನಾವಣೆಗೆ ಸಕಲ ಸಿದ್ಧತೆ
ಗದಗ: ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಗದಗ ಜಿಲ್ಲೆಯ 3 ವಿಧಾನಸಭೆ ಕ್ಷೇತ್ರಗಳು ಸೇರಿದಂತೆ ಏ. 17ರ ಮತದಾನ ಶಾಂತಿಯುತ, ಸುವ್ಯವಸ್ಥಿತವಾಗಿ ಜರುಗಿಸಲು ಸರ್ವ ಕ್ರಮ ಜರುಗಿಸಲಾಗಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ಹಾಗೂ ಲೋಕಸಭೆ ಕ್ಷೇತ್ರದ ಚುನಾವಣೆ ಅಧಿಕಾರಿ ಎಂ. ಮಂಜುನಾಥ ನಾಯಕ ಹೇಳಿದರು.
ಅವರು ಮಂಗಳವಾರ ಗದಗ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು. ಹಾವೇರಿಯ 5 ಹಾಗೂ ಗದಗ ಜಿಲ್ಲೆಯ 3 ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 1876 ಮತಗಟ್ಟೆ ಸ್ಥಾಪಿಸಲಾಗಿದ್ದು, 8304 ಅಧಿಕಾರಿ ಹಾಗೂ ಸಿಬ್ಬಂದಿ ಚುನಾವಣೆ ಕಾರ್ಯದಲ್ಲಿ ನಿಯುಕ್ತರಾಗಿದ್ದಾರೆ. 282 ವಾಹನ ಬಳಸಿಕೊಳ್ಳಲಾಗುತ್ತಿದ್ದು, 200 ವಾಹನ ಪೊಲೀಸ್ ಬಂದೋಬಸ್ತ್‌ಗೆ ನಿಯುಕ್ತಗೊಳಿಸಲಾಗಿದೆ.
337 ಅತಿ ಸೂಕ್ಷ್ಮ, 508 ಸೂಕ್ಷ್ಮ ಹಾಗೂ 1031 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಿ ಆಯೋಗದ ನಿರ್ದೇಶನದಂತೆ ಎಲ್ಲ ಭದ್ರತಾ ಕ್ರಮ ಕೈಕೊಳ್ಳಲಾಗುತ್ತಿದೆ. ಗದಗ ಜಿಲ್ಲೆಯಲ್ಲಿ ಮತದಾರ ಗುರುತಿನ ಚೀಟಿ ಶೇ. 99ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಇದ್ದು ಇಡೀ ಲೋಕಸಭಾ ಕ್ಷೇತ್ರದಲ್ಲಿ ಶೇ. 99.89ರಷ್ಟು ಗುರುತಿನ ಚೀಟಿ ಮತದಾರರಿಗೆ ನೀಡಲಾಗಿದೆ. ಇದರ ಹೊರತಾಗಿ ಪ್ರತಿ ಮನೆ ಮತಗಟ್ಟೆ ಅಧಿಕಾರಿಗಳು ಹೋಗಿ ಭಾವಚಿತ್ರವಿರುವ ಮತಚೀಟಿಗಳನ್ನು ವಿತರಿಸಿ ಅವರಿಂದ ಸ್ವೀಕೃತಿ ಪಡೆಯುತ್ತಿದ್ದಾರೆ. ಯಾರು ಅಂತಹ ಮತಚೀಟಿ ಸ್ವೀಕರಿಸಿಲ್ಲವೋ ಅವರು ಏ. 17ರಂದು ಮತಗಟ್ಟೆ ಹೊರಗೆ ಸಹಾಯವಾಣಿ ಕೇಂದ್ರದಲ್ಲಿರುವ ಮತಗಟ್ಟೆ ಅಧಿಕಾರಿಯನ್ನು ಭೇಟಿಯಾಗಿ ಗುರುತಿನ ಮತ ಚೀಟಿ ಪಡೆಯಬಹುದು. ಅಲ್ಲದೇ ಇವು ಯಾವೂ ಇಲ್ಲದಾಗ ಮತದಾರ ಪಟ್ಟಿಯಲ್ಲಿ ಹೆಸರಿದ್ದರೆ ಆಯೋಗ ನಿರ್ದಿಷ್ಟಪಡಿಸಿದ 10 ಗುರುತು ಪತ್ರಗಳಲ್ಲಿ ಒಂದನ್ನು ಒದಗಿಸಿ ಮತದಾನ ಮಾಡಬಹುದಾಗಿದೆ ಎಂದು ಹಾವೇರಿ ಲೋಕಸಭೆ ಚುನಾವಣಾಧಿಕಾರಿ ಮಂಜುನಾಥ ನಾಯ್ಕ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಅಪರ ಜಿಲ್ಲಾಧಿಕಾರಿ ನಾಗರಾಜ, ಸಿಇಒ ವೀರಣ್ಣ ತುರಮರಿ, ಎಸ್ಪಿ ಬಾಲಕೃಷ್ಣ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಹಾಜರಿದ್ದರು.