ಚುನಾವಣೆಗೆ ರೋಣ ಸನ್ನದ್ಧ
ರೋಣ: ಏ. 17ರಂದು ಜರುಗಲಿರುವ ಹಾವೇರಿ ಲೋಕಸಭೆ ಕ್ಷೇತ್ರ ಚುನಾವಣೆಗೆ ರೋಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಪ್ರಕ್ರಿಯೆಗೆ ತಾಲೂಕು ಆಡಳಿತ ಮತ್ತು ಚುನಾವಣೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ರೋಣ ವಿಧಾನಸಭೆ ಮತಕ್ಷೇತ್ರದ ಸಹಾಯಕ ಚುನಾವಣೆ ಅಧಿಕಾರಿ ಷಡಕ್ಷರಪ್ಪ ಹೇಳಿದರು.
ಈ ಕುರಿತು ಮಂಗಳವಾರ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯ ಸಭಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೋಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 258 ಮತಗಟ್ಟೆ ತೆರೆಯಲಾಗಿದೆ. ಇದರಲ್ಲಿ 68 ಸೂಕ್ಷ್ಮ ಮತಗಟ್ಟೆಗಳು, 76 ಅತಿ ಸೂಕ್ಷ್ಮ ಮತಗಟ್ಟೆಗಳು, 11 ಕ್ರಿಟಿಕಲ್ ಮತಗಟ್ಟೆಗಳು, 25 ವಲನೆರಬಲ್ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ರೋಣ ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟು ಮತದಾರರು 2,09,577. ಇದರಲ್ಲಿ 1,06,101 ಪುರುಷರು, 1,03,463 ಮಹಿಳೆಯರು, 13 ಇತರೆ ಮತದಾರರಿದ್ದಾರೆ ಎಂದರು. 258 ಮತಗಟ್ಟೆ ಅಧಿಕಾರಿಗಳಲ್ಲಿ 1135 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದು, ಇದರಲ್ಲಿ 258 ಸಹಾಯಕ ಮತಗಟ್ಟೆ ಅಧಿಕಾರಿಗಳು, 516 ಪೋಲಿಂಗ್ ಆಫೀಸರ್, 103 ಹೆಚ್ಚುವರಿ ಸಿಬ್ಬಂದಿ, 21 ಕ್ಷೇತ್ರಾಧಿಕಾರಿಗಳು (ಸೇಕ್ಟರ್ ಆಫೀಸರ್), 62 ಮೈಕ್ರೋ ಅಬ್ಜರ್ವರ, 500 ಪೊಲೀಸ್ ಸಿಬ್ಬಂದಿ, 13 ಮಾದರಿ ನೀತಿ ಸಂಹಿತೆ ತಂಡಗಳು, 12 ಸಂಚಾರಿ ದಳ, 3 ಚುನಾವಣೆ ಲೆಕ್ಕ ಪರಿಶೀಲನಾ ತಂಡಗಳು, 3 ವಿಡಿಯೋ ವಿವ್ಹಿಂಗ್ ತಂಡಗಳು, 12 ಸೈಟೆಕ್ಸ್ ಸರ್ವಲನ್ಸ್ ತಂಡಗಳು ಕಾರ್ಯ ನಿರ್ವಹಿಸಲಿದ್ದಾರೆ. ಮತ ಯಂತ್ರ ಮತ್ತು ಸಿಬ್ಬಂದಿ ವಿವಿಧೆಡೆ ಕರೆದೊಯ್ಯಲು 27 ಸಾರಿಗೆ ಸಂಸ್ಥೆಯ ಬಸ್, 12 ಟೆಂಪೋಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ತಾಲೂಕಿನ ಕೃಷ್ಣಾಪುರ, ಕೊಡಗಾನೂರ, ವೀರಾಪುರ, ನೆಲ್ಲೂರ ಪ್ಯಾಟಿ ಮತ್ತು ಬೂದಿಹಾಳ ಗ್ರಾಮಗಳ ಸರ್ಕಾರಿ ಕನ್ನಡ ಶಾಲೆಗಳಲ್ಲಿ ತಲಾ ಒಂದರಂತೆ 5 ಮಾದರಿ ಮತಗಟ್ಟೆ ತೆರೆಯಲಾಗಿದೆ. ಅದಕ್ಕೆ ಬೇಕಾದ ಸೌಲಭ್ಯಗಳ ವ್ಯವಸ್ಥೆ ಕೈಗೊಳ್ಳಲಾಗಿದೆ. ಮತದಾನ ಶಾಂತಯುತವಾಗಿ ನಡೆಯುವಲ್ಲಿ ಮುಂಜಾಗ್ರತವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಇದಕ್ಕಾಗಿ 1 ಡಿಎಸ್ಪಿ , 3 ಸಿಪಿಐ, 10 ಪಿಎಸ್ಐ, 15 ಎಎಸ್ಐ, ಮಹಿಳಾ ಪೇದೆ, ಮುಖ್ಯ ಪೇದೆ, ಪೇದೆ ಸೇರಿದಂತೆ ಒಟ್ಟು 120 ಪೇದೆಗಳು, 125 ಗೃಹ ರಕ್ಷಕದಳ ಸಿಬ್ಬಂದಿ, 2 ಕೆಎಸ್ಆರ್ಪಿ ತುಕಡಿ, 1ಡಿಎಆರ್ ತುಕಡಿ ನೇಮಿಸಲಾಗಿದೆ. ಅಲ್ಲದೆ 26 ಸೆಕ್ಟರ್ ಮೋಬೈಲ್ ವಾಹನವನ್ನು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಾದ್ಯಂತ ಗಸ್ತು ತಿರುಗಲಾಗುವುದು. ಪ್ರತಿಯೊಂದು ಸೆಕ್ಟರ್ ಮೊಬೈಲ್ ತಂಡಕ್ಕೆ ಒಂದು ವಾಹನ ಕೋಡಲಾಗಿದ್ದು, ಆ ಮೂಲಕ ಯಾವುದೇ ಸ್ಥಳದಲ್ಲಿ ಏನಾದರೂ ಘಟನೆ ನಡೆದಲ್ಲಿ ತಕ್ಷಣ ಮಾಹಿತಿ ಪಡೆಯಲಾಗುವುದು ಎಂದು ಸಿಪಿಐ ವೆಂಕಟಪ್ಪ ನಾಯಕ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನೋಡೆಲ್ ಅಧಿಕಾರಿ ರಮೇಶ ದೇಸಾಯಿ, ಉಪ ತಹಸೀಲ್ದಾರ್ ಎನ್.ಎಸ್. ಕೂಡಲ ಮತ್ತಿತರರು ಇದ್ದರು.