ಜನಸಮುದಾಯ ಕಟ್ಟಿ ಬೆಳೆಸಿದ ಜಾತ್ರೆ
ಗದಗ: ಜನರ ಮನೋವಿಕಾಸ, ಆರೋಗ್ಯವೃದ್ಧಿ, ಕೃಷಿ ಸುಧಾರಣೆ, ಪರಿಸರ ಮುಂತಾದ ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲುವ ಗದುಗಿನ ತೋಂಟದಾರ್ಯ ಮಠದ ಜಾತ್ರೆ ಜನಸಮುದಾಯ ಕಟ್ಟಿ ಬೆಳೆಸಿದೆ ಎಂದು ಅಖಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಾಹಿತಿ ಡಾ. ನಾ. ಡಿಸೋಜಾ ಹೇಳಿದರು.
ಸೋಮವಾರ ರಾತ್ರಿ ನಗರದ ಜ. ತೋಂಟದಾರ್ಯ ಮಠದ ಆವರಣದಲ್ಲಿ ಜ. ತೋಂಟದಾರ್ಯ ಜಾತ್ರಾ ಮಹೋತ್ಸವವನ್ನು ಸಸಿಗೆ ನೀರೆರೆವ ಮೂಲಕ ಉದ್ಘಾಟಿಸಿ, ಸಾಹಿತ್ಯಿಕ, ಸಾಂಸ್ಕೃತಿಕವಾಗಿ, ಸಮಾಜಮುಖಿಯಾಗಿ ಜನ ಸಮುದಾಯವನ್ನು ಕಟ್ಟಿ ನಿಲ್ಲಿಸುವ ಮಹತ್ವಪೂರ್ಣ ಕೆಲಸವನ್ನು ಗದುಗಿನ ತೋಂಟದಾರ್ಯರ ಜಾತ್ರೆ ಮಾಡುತ್ತ ಬಂದಿದೆ. ಶರಣ, ಜಂಗಮ, ದಾಸೋಹ, ಸಂಗಮ, ಪ್ರಸಾದ, ಕಾಯಕ, ಮಹಾಮನೆ ಮುಂತಾದ ಶಬ್ದಗಳ ಮೂಲಕ ಸಮಾಜಕ್ಕೆ ಹೊಸ ಅರ್ಥ ಸ್ವರೂಪ ನೀಡಿದೆ. ಪರಿಸರ ಸಂರಕ್ಷಣೆಯಲ್ಲಿ ನಾವು ಹಿಂದೆ ಇದ್ದೇವೆ. ವೀರಶೈವ ಮಠಗಳು ಹಾಗೂ ಶರಣರು ಆಹಾರ ಪದಾರ್ಥಗಳಿಗೆ ಪ್ರಸಾದ ಎನ್ನುವ ಹಾಗೂ ಕಾಯಕ ಎನ್ನುವ ಶಬ್ದಕ್ಕೆ ಕೈಲಾಸ ಎನ್ನುವ ಶಬ್ದ ಸೇರಿಸಿ ಸಮಾಜದ ಕೆಳವರ್ಗದ ಕೆಲಸಗಳಿಗೆ ಗೌರವ ತಂದುಕೊಟ್ಟಿದ್ದಾರೆ ಎಂದರು.
ಸಾಹಿತಿ ಡಾ. ಕುಂ. ವೀರಭದ್ರಪ್ಪ ಲಿಂಗಾಯತ ಪುಣ್ಯಪುರುಷ ಸಾಹಿತ್ಯ ರತ್ನಮಾಲೆಯ ಗ್ರಂಥಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. ಡಾ. ಎಂ.ಎಂ. ಶಿವಪ್ರಕಾಶ ಅವರ ಎಂ.ಪಿ. ಪ್ರಕಾಶ, ಡಾ. ಎನ್.ಡಿ. ತಿಪ್ಪೇಸ್ವಾಮಿ ಅವರ ಅಬ್ಬಿಗೇರಿ ವಿರೂಪಾಕ್ಷಪ್ಪ, ಡಾ. ವೀರಣ್ಣ ದಂಡೆ ಅವರ ಡಾ. ಎಂ.ಎಸ್. ಲಠ್ಠೆ ಹಾಗೂ ಡಾ. ಜಯಶ್ರೀ ದಂಡೆ ಅವರ ಗಳಂಗಳಪ್ಪ ಪಾಟೀಲ ಕೃತಿಗಳ ಪರಿಚಯವನ್ನು ಸಾಹಿತಿ ಡಾ. ವೀರಣ್ಣ ದಂಡೆ ಮಾಡಿದರು. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಸಾಹಿತಿ ಕಳಕಮ್ಮ ಹರ್ಲಾಪುರ, ಡಾ. ಎಂ.ಎಂ. ಶಿವಪ್ರಕಾಶ, ಡಾ. ಎನ್.ಡಿ. ತಿಪ್ಪೇಸ್ವಾಮಿ, ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ, ಜಾತ್ರಾ ಸಮಿತಿ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳೊಳ್ಳಿ, ಕಾರ್ಯದರ್ಶಿ ಮಲ್ಲಿಕಾರ್ಜುನ ಐಲಿ ಇದ್ದರು. ಶ್ರೀಮಠದ ಕಲಾವಿದರು ಪ್ರಾರ್ಥಿಸಿದರು. ತೇಜಶ್ವಿನಿ ತೋಟದ ವಚನ ಪಠಿಸಿದರು. ಇಂದುಮತಿ ಶೆಟ್ಟರ ವಚನ ಚಿಂತನ ಗೈದರು. ರೇವಣಸಿದ್ಧಯ್ಯ ಮರಿದೇವರಮಠ ವಚನ ಸಂಗೀತ ಪ್ರಸ್ತುತಪಡಿಸಿದರು. ಉಪಾಧ್ಯಕ್ಷ ಕೆ.ಎಚ್. ಬೇಲೂರು ಸ್ವಾಗತಿಸಿದರು.