ಆಯುರ್ವೇದ ಚಿಕಿತ್ಸೆ: ಭಾರತದ ಕೊಡುಗೆ
ಗದಗ: ಪ್ರಾಚೀನ ಭಾರತದ ವೈದ್ಯಕೀಯ ಆಯುರ್ವೇದ ಮತ್ತು ಯೋಗ ಸಾಧನೆಗಳು ಮನುಕುಲದ ಒಳಿತಿಗೆ ಭಾರತ ಕೊಟ್ಟ ಬಹುದೊಡ್ಡ ಕೊಡುಗೆಯಾಗಿದೆ ಎಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀ ಹೇಳಿದರು.
ಅವರು ಶನಿವಾರ ಸಂಜೆ ಜ. ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಜ. ತೋಂಟದಾರ್ಯ ಜಾತ್ರಾ ಮಹೋತ್ಸವ ನಿಮಿತ್ತ ಆರೋಗ್ಯ ಉಪಸಮಿತಿ, ಡಿಜಿಎಂ ಆಯುರ್ವೇದಿಕ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನ ಆಶ್ರಯದಲ್ಲಿ ಇದೇ ಮೊದಲ ಬಾರಿಗೆ ಆಯುರ್ವೇದ ಚಿಕಿತ್ಸೆ ಹಾಗೂ ಯೋಗ ಸಾಧನೆ ಕುರಿತು ಜನಸಾಮಾನ್ಯರಲ್ಲಿ ಅರಿವು ಜಾಗೃತಿ ಮೂಡಿಸುವ ಬೃಹತ್ ಆಯುರ್ವೇದ ಚಿಕಿತ್ಸಾ ಮತ್ತು ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಆಯುರ್ವೇದ ಭಾರತದ ಪುರಾತನ ವೈದ್ಯಕೀಯ ಪದ್ಧತಿ. ಇದು ಕೇವಲ ರೋಗಗಳ ಸಮರ್ಪಕ ಹಾಗೂ ಅಡ್ಡ ಪರಿಣಾಮ ರಹಿತ ಚಿಕಿತ್ಸೆಗೆ ಮಾತ್ರ ಖ್ಯಾತವಾಗಿರದೇ ರೋಗ ಬರದಂತೆ ಜೀವನವನ್ನು ಹೇಗೆ ನಡೆಸಬೇಕೆಂಬ ಕುರಿತು ಸಹ ಬೆಳಕು ಚೆಲ್ಲುವ ವಿಶ್ವದ ಏಕೈಕ ವೈದ್ಯಕೀಯ ಪದ್ಧತಿಯಾಗಿದ್ದರಿಂದ ಇದರ ಪ್ರಚುರತೆ ಇಂದು ಹೆಚ್ಚಾಗಿದೆ. ಆಯುರ್ವೇದ ವೈದ್ಯಕೀಯ ಪದ್ಧತಿ ಉಳಿದು ಬೆಳೆದುಕೊಂಡು ಬರಲು ನಾಡಿನ ಹಿರಿಯ ಆಯುರ್ವೇದ ಪಂಡಿತರು, ವೈದ್ಯರು ತಮಗೆ ಲಭ್ಯವಿರುವ ಜ್ಞಾನವನ್ನು ಹಂಚಿಕೊಳ್ಳುವಲ್ಲಿ ಹಾಗೂ ಮುಂದಿನ ಪೀಳಿಗೆಗೆ ಅದನ್ನು ಕಲಿಸುವಲ್ಲಿ ಆಸಕ್ತಿ ವಹಿಸಬೇಕಾಗಿದೆ. ಆಯುರ್ವೇದ ವೈದ್ಯಕೀಯ ಪದ್ಧತಿಗೆ ಪೂರಕವಾದ ಅಪರೂಪದ ಔಷಧೀಯ ಸಸ್ಯ ಸಂಪತ್ತು ಬೆಳೆಸುವಲ್ಲಿ ಸರ್ಕಾರ, ಸಮಾಜ ಮುಂದಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಸಸ್ಯಕಾಶಿ ಕಪ್ಪತಗುಡ್ಡ ಪ್ರದೇಶವನ್ನು ಪದೇ ಪದೇ ಬೆಂಕಿ ಅನಾಹುತಕ್ಕೆ ಈಡಾಗುವ ಅಪಾಯವನ್ನು ತಪ್ಪಿಸಲು ಕಟ್ಟುನಿಟ್ಟಿನ ಕ್ರಮಗಳು ಇಂದು ಅನಿವಾರ್ಯವಾಗಿವೆ ಎಂದರು. ಗದಗ ಜಿಲ್ಲಾ ಆಯುಷ ಅಧಿಕಾರಿ ಡಾ. ಬಿ.ಜಿ. ಮಾತನಾಡಿ, ದೀರ್ಘಕಾಲೀನ ರೋಗಗಳಲ್ಲಿ ಆಯುರ್ವೇದ ಚಿಕಿತ್ಸೆ ಇಂದಿಗೂ ಪರಿಣಾಮಕಾರಿಯಾಗಿದೆ ಎಂದರು. ಜ. ತೋಂಟದಾರ್ಯ ಜಾತ್ರಾ ಸಮಿತಿ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳೊಳ್ಳಿ, ಕಾರ್ಯದರ್ಶಿ ಎಂ.ಸಿ. ಐಲಿ, ಪ್ರಕಾಶ ಉಗಲಾಟದ, ದಾನಯ್ಯ ಗಣಾಚಾರಿ, ಕೆ.ಎಚ್. ಬೇಲೂರು ಮುಂತಾದವರು ಉಪಸ್ಥಿತರಿದ್ದರು. ಡಿಜಿಎಂ ಆಯುರ್ವೇದಿಕ ಕಾಲೇಜಿನ ಪ್ರಾ. ಡಾ. ಜಿ.ಬಿ. ಪಾಟೀಲ ಸ್ವಾಗತಿಸಿದರು. ಜಾತ್ರಾ ಆರೋಗ್ಯ ಸಮಿತಿ ಅಧ್ಯಕ್ಷ ಡಾ. ಉಮೇಶ ಪುರದ ನಿರೂಪಿಸಿದರು.