ಬಿಸಿಲಿಗೆ ಬಸವಳಿದ ಜನತೆ
ಗದಗ: ಜಿಲ್ಲಾದ್ಯಂತ ಏಪ್ರಿಲ್ 2ನೇ ವಾರದಲ್ಲಿಯೇ ಬಿಸಿಲಿನ ಪ್ರಖರತೆ ಜೋರಾಗಿದ್ದು, ಬಿಸಿಲಿನ ತಾಪಕ್ಕೆ ಬಸವಳಿದ ಜನತೆ ಮಧ್ಯಾಹ್ನದ ವೇಳೆಯಲ್ಲಿ ಮನೆಯಿಂದ ಆಚೆ ಬರದಂತಹ ಸ್ಥಿತಿ ನಿರ್ಮಾಣವಾಗಿದೆ. ಅವಳಿ ನಗರ ಸೇರಿದಂತೆ ಜಿಲ್ಲೆಯ ಎಲ್ಲ ಪಟ್ಟಣಗಳಲ್ಲಿ ಮಧ್ಯಾಹ್ನದ ವೇಳೆಯಲ್ಲಿ ರಸ್ತೆಗಳು ಬಿಕೋ ಎನ್ನುತ್ತಿವೆ.
ಬಿಸಿಲಿನ ಪ್ರಖರತೆ ಎಷ್ಟೊಂದು ಜೋರಾಗಿದೆ ಎಂದರೆ ವೃದ್ಧರು ಮತ್ತು ಕಾಯಿಲೆಗಳಿಂದ ಬಳಲುತ್ತಿರುವವರು ಮನೆಯಲ್ಲಿಯೇ ಕುಳಿತರೂ ಶಕೆ(ಜಳ)ಯ ತಾಪದಿಂದ ಗೋಗರೆಯುವಂತಾಗಿದೆ. ಅದರಲ್ಲಿ ಅಸ್ತಮಾದಂತಹ ಕಾಯಿಲೆಯಿಂದ ಬಳಲುತ್ತಿರುವವರು ತೀವ್ರ ಉಸಿರಾಟದ ತೊಂದರೆ ಅನುಭವಿಸುವಂತಾಗಿದೆ. ಇನ್ನು ವರ್ಷಪೂರ್ತಿ ಹೊಲದಲ್ಲಿ ಕೆಲಸ ಮಾಡುವ ರೈತಾಪಿ ವರ್ಗವೇ ತಮ್ಮ ಎಲ್ಲ ಕೆಲಸಗಳನ್ನು 11 ಗಂಟೆಯೊಳಗೆ ಮುಗಿಸುತ್ತಿದ್ದಾರೆ.
37 ಡಿಗ್ರಿ ತಾಪಮಾನ: ಕಳೆದ ಸಾಲಿಗೆ ಹೋಲಿಕೆ ಮಾಡಿದಲ್ಲಿ ಈ ಬಾರಿಯ ತಾಪಮಾನದಲ್ಲಿ ಹೆಚ್ಚಳ. ಸದ್ಯ 37 ಡಿಗ್ರಿ ಉಷ್ಣಾಂಶ ಗದಗ ಜಿಲ್ಲೆಯಲ್ಲಿ ದಾಖಲಾಗಿದೆ. ಕಳೆದ ಸಾಲಿನ ಏಪ್ರಿಲ್ ಕೊನೆಯ ವಾರದಲ್ಲಿ 35ರಿಂದ 36ರಷ್ಟಿದ್ದ ತಾಪಮಾನ ಈ ಬಾರಿ ಏಪ್ರಿಲ್ 2ನೇ ವಾರದಲ್ಲಿಯೇ ಅದನ್ನು ದಾಟಿದೆ. ಇನ್ನು ಮುಂಬರುವ ಮೇ ತಿಂಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. 40ರ ಗಡಿ ದಾಟುವ ಸಾಧ್ಯತೆ ಇದೆ. ಕಳೆದ 3 ವರ್ಷಗಳ ತಾಪಮಾನಕ್ಕೆ ಹೋಲಿಕೆ ಮಾಡಿದಲ್ಲಿ ಈ ಬಾರಿಯ ಉಷ್ಠಾಂಶ ಅತಿ ಹೆಚ್ಚಳ ಎನ್ನುವುದನ್ನು ಹವಾಮಾನ ಇಲಾಖೆಯ ಮೂಲಗಳು ಖಚಿತ ಪಡಿಸುತ್ತಿವೆ.
ರೈತರಿಗೂ ತೊಂದರೆ: ಈಗಾಗಲೇ ಸುಗ್ಗಿಯ ಎಲ್ಲ ಕೆಲಸಗಳನ್ನು ಮುಗಿಸಿರುವ ರೈತರು. ಹೊಲಗಳನ್ನು ಸ್ವಚ್ಛಗೊಳಿಸುವುದು (ಹರಗುವುದು) ಹಾಗೂ ಜಾನುವಾರುಗಳಿಗೆ ವರ್ಷಪೂರ್ತಿ ಬೇಕಾಗುವ ಹೊಟ್ಟು ಮೇವಿನ ಬಣವೆ ಒಟ್ಟುವ(ಕಟ್ಟುವುದು) ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಆದರೆ, ಭೂಮಿಯ ಮಕ್ಕಳೆಂದೇ ಕೆರೆಯುವ ರೈತರೇ ಬಿಸಿಲಿನ ತಾಪಕ್ಕೆ ಹೆದರಿ ತಮ್ಮ ಎಲ್ಲ ಕೆಲಸಗಳನ್ನು ಬೆಳಗ್ಗೆ 6ಕ್ಕೆ ಪ್ರಾರಂಭಿಸಿ, ಬಿಸಿಲು ಹೆಚ್ಚುವುದರೊಳಗಾಗಿ ತಮ್ಮ ಕೆಲಸ ಮುಗಿಸಿ (ಅಥವಾ ಅರ್ಧಕ್ಕೆ ನಿಲ್ಲಿಸಿ) ಮರಳಿ ಮನೆಗೆ ಬರುತ್ತಿದ್ದಾರೆ. ಇದು ಜಾನುವಾರುಗಳ ಆರೋಗ್ಯ ದೃಷ್ಟಿಯಿಂದ ಅನುಕೂಲಕರವಾಗಿದೆ.
ತಂಪು ಪದಾರ್ಥಗಳಿಗೆ ಬೇಡಿಕೆ: ಬಿಲಿಸಿನ ತಾಪದಿಂದ ಜನರು ಕಲ್ಲಂಗಡಿ, ದ್ರಾಕ್ಷಿ, ಕಬ್ಬಿನ ಹಾಲು, ಸೋಡಾ ಸೇರಿದಂತೆ ಹಲವಾರು ತಂಪು ಪಾನೀಯಗಳ ಪದಾರ್ಥಗಳ ಮೊರೆ ಹೋಗಿದ್ದು, ಕುಡಿಯುವ ಮೂಲಕ ತಾಪವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಮನೆಯಲ್ಲಿಯೂ ನೀರಿನ ಅಂಶ ಹೆಚ್ಚಾಗಿರುವ ಪದಾರ್ಥಗಳನ್ನು ಜನರು ಬಳಕೆ ಮಾಡಲು ಮುಂದಾಗುತ್ತಿರುವುದರಿಂದ ತಂಪು ಪದಾರ್ಥಗಳ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದೆ.
ಸಾಧ್ಯವಾದಷ್ಟು ಬಿಸಿಲಿನ ವೇಳೆಯಲ್ಲಿ ಕೆಲಸ ಮಾಡುವುದನ್ನು ಕಡಿಮೆ ಮಾಡಿ, ಕೆಲಸಗಳನ್ನು ಬಿಸಿಲಿನ ತಾಪ ಹೆಚ್ಚಾಗುವ ಮೊದಲೇ ಪೂರ್ಣಗೊಳಿಸಿ, ನೀರಿನ ಅಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಕರಿದ ಹಾಗೂ ಹೆಚ್ಚಿನ ಮಸಾಲೆ ಅಂಶಗಳನ್ನು ಹೊಂದಿರುವ ಆಹಾರವನ್ನು ಸೇವಿಸುವುದನ್ನು ಕಡ್ಡಾಯವಾಗಿ ಬಿಡಬೇಕು. ಹಸಿ ತರಕಾರಿ ಬಳಕೆ ಮಾಡಬೇಕು. ಕುಡಿವ ನೀರಿನ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಕಾಯಿಸಿ, ಆರಿಸಿದ ನೀರನ್ನೇ ಸೇವಿಸಬೇಕು. ಇದರಿಂದ ವಾಂತಿ ಭೇದಿಯಂತಹ ಕಾಯಿಲೆಗಳನ್ನು ತಡೆಗಟ್ಟಬಹುದು. ಇನ್ನು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಾದಷ್ಟು ಕಾಟನ್ ಬಟ್ಟೆಗಳನ್ನು ಧರಿಸಬೇಕು ಮತ್ತು ದಟ್ಟವಾದ ಬಣ್ಣದ (ಕಪ್ಪು) ಬಟ್ಟೆ ಬಳಕೆ ಮಾಡುವುದನ್ನು ನಿಲ್ಲಿಸಬೇಕು.
ಡಾ. ಎಸ್.ಬಿ. ಪಾಟೀಲ, ವೈದ್ಯರು, ಗದಗ
ಬಿಸಿಲಿನ ಪ್ರಖರತೆ ಜೋರಾಗಿದೆ. ಮೇ ತಿಂಗಳಲ್ಲಿ ಇದರ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಇದರ ಮಧ್ಯೆ ಬೇಸಿಗೆ ಮಳೆಯಾದಲ್ಲಿ ತಾಪಮಾನದಲ್ಲಿ ಅಲ್ಪ ಪ್ರಮಾಣದ ಕುಸಿತವಾಗಲಿದೆ. ಆದರೆ, ಮಳೆಯಾಗದೇ ಇದ್ದಲ್ಲಿ ಬಿಸಿಲಿನ ತಾಪ ಜೂನ್ ಮೊದಲ ವಾರದವರೆಗೂ ಮುಂದುವರಿಯಲಿದೆ.
ಎನ್.ಎಚ್. ನದಾಫ,
ಹವಾಮಾನ ಇಲಾಖೆ
ನಿವೃತ್ತ ಅಧಿಕಾರಿ
-ಶಿವಕುಮಾರ ಕುಷ್ಟಗಿ