ಮಣ್ಣು ಪರೀಕ್ಷೆ ಅಗತ್ಯ: ಕೆ.ಎ. ನದಾಫ್
ಲಕ್ಷ್ಮೇಶ್ವರ: ಮಣ್ಣಿನ ಫಲವತ್ತತೆಗೆ ಮಣ್ಣು ಪರೀಕ್ಷೆ ಅಗತ್ಯ ಎಂದು ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಕೆ.ಎ. ನದಾಫ್ ಹೇಳಿದರು.
ಅವರು ಪಟ್ಟಣದ ರೈತ ನಿಂಗಪ್ಪ ಗದ್ದಿಯವರ ಹೊಲದಲ್ಲಿ ಈಚೆಗೆ ಮಣ್ಣು ಪರೀಕ್ಷಾ ಅರಿವು ಎಂಬ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ಏರ್ಪಡಿಸಿದ್ದ ಸಂದರ್ಭದಲ್ಲಿ ಮಾತನಾಡಿದರು. ಮಣ್ಣಿನಲ್ಲಿರುವ ರಂಜಕ, ಕಬ್ಬಿಣ, ಸತ್ವ, ಸಾರಜನಕ, ಸುಣ್ಣದ ಅಂಶ ಇವುಗಳನ್ನು ಕಾಲ ಕಾಲಕ್ಕೆ ಪರೀಕ್ಷೆ ಮಾಡಿಸುವುದರಿಂದ ಮಣ್ಣಿಗೆ ಯಾವ ಯಾವ ಪೋಷಕಾಂಶಗಳು ಬೇಕಾಗುತ್ತದೆ ಎಂಬುದು ತಿಳಿಯುತ್ತದೆ. ಇದರಿಂದ ರೈತರಿಗೆ ಯಾವ ಗೊಬ್ಬರ ಉಪಯೋಗಿಸಬೇಕು ಹಾಗೂ ಯಾವ ಬೆಳೆ ಬೆಳೆಯಲು ಸಾಧ್ಯ ಎಂಬುದು ತಿಳಿಯುತ್ತದೆ. ಜತೆಗೆ ಹೆಚ್ಚಿನ ಬೆಳೆ ತೆಗೆಯಲು ಅನುಕೂಲವಾಗುತ್ತದೆ ಎಂದರು. ರೈತರು ಬೇಸಿಗೆಯ ಹಂಗಾಮಿನಲ್ಲಿ ತಮ್ಮ ಹೊಲದಲ್ಲಿರುವ ಮಣ್ಣನ್ನು ಪರೀಕ್ಷೆ ಏಕೆ ಮಾಡಿಸಿಕೊಳ್ಳಬೇಕು. ಮಣ್ಣಿನಲ್ಲಿರುವ ಬಗೆಗಳು ಯಾವುವು ಅವುಗಳಲ್ಲಿರುವ ವಿವಿಧ ಅಂಶಗಳು ಯಾವುವು ಮಣ್ಣಿನ ಸಂರಕ್ಷಣೆ ಹೇಗೆ ಕಾಪಾಡಿಕೊಳ್ಳಬೇಕು. ಮಾಗಿ ಉಳುಮೆ ಯಾಕೆ ಮಾಡಬೇಕು. ಮಣ್ಣು ಪರೀಕ್ಷೆಯ ನಂತರ ಕೈಗೊಳ್ಳಬೇಕಾದ ಕ್ರಮ ಯಾ ವುವು ಎಂಬುದರ ಬಗ್ಗೆ ರೈತರಿಗೆ ವಿವರಿಸಿದರು.
ಮಣ್ಣಿನ ಪರೀಕ್ಷೆಗೆ ಕೇಂದ್ರಕ್ಕೆ ತನ್ನಿ: ಕೃಷಿ ಭೂಮಿಯನ್ನು ಬೇಸಿಗೆ ಹಂಗಾಮಿನಲ್ಲಿ ಹದ ಮಾಡಿಟ್ಟುಕೊಂಡು ತಿಪ್ಪೆಗೊಬ್ಬರವನ್ನು ಸರಿಯಾದ ಪ್ರಮಾಣದಲ್ಲಿ ನೆಲದಲ್ಲಿ ಮಿಶ್ರಣ ಮಾಡುವ ಮೂಲಕ ತಮ್ಮ ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳಬೇಕು. ರೈತರು ತಮ್ಮ ಹೊಲದಲ್ಲಿನ ನಾಲ್ಕು ಪ್ರದೇಶಗಳಲ್ಲಿ 1 ಅಡಿ ಗುಂಡಿ ತೆಗೆದು ಅದರಲ್ಲಿನ ಮಣ್ಣನ್ನು ತೆಗೆದುಕೊಂಡು ರೈತರ ಸಂಪರ್ಕ ಕೇಂದ್ರಕ್ಕೆ ಆಗಮಿಸಿದಲ್ಲಿ ನಾವು ಮಣ್ಣಿನ ಪರೀಕ್ಷೆ ಮಾಡಿಕೊಡುತ್ತೇವೆ. ಅಲ್ಲದೇ ಅಂತಹ ಜಮೀನುಗಳಿಗೆ ಯಾವ ಬೆಳೆ ಸೂಕ್ತ ಎಂಬ ಬಗ್ಗೆ ಮಾಹಿತಿ ನೀಡುತ್ತೇವೆ. ಸರ್ಕಾರ ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಪಡೆದುಕೊಂಡು ಕೃಷಿ ಉತ್ತಮ ಪಡಿಸಿಕೊಳ್ಳಬೇಕು ಎಂದರು.
ರೈತ ಸಿದ್ದು ಕನವಳ್ಳಿ, ಪ್ರಸನ್ನ ಲೋಹಾರ, ಸಂಗಮೇಶ ಕಾಳಗಿ, ಮಹಾದೇವಪ್ಪ ಮುಳಗುಂದ, ಆನಂದ ಜಾವೂರ, ಕೇಂದ್ರದ ಸಿಬ್ಬಂದಿ ಇದ್ದರು.