ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕೈಕೊಟ್ಟ ಮತ ಯಂತ್ರ: ವಿಳಂಬ

Mainashree
Updated On : 18 Apr 2014, 10:01 am

ರೋಣ: ತಾಲೂಕಿನ ರಾಜೂರು, ಇಟಗಿ, ಅತ್ತಿಕಟ್ಟಿ ಮತ್ತು ರೋಣ ಪಟ್ಟಣದ 108ನೇ ಮತಗಟ್ಟೆಯಲ್ಲಿ ಬೆಳಗ್ಗೆ 7ರಿಂದ ಅರ್ಧ ಗಂಟೆ ಮತಯಂತ್ರ ಕಾರ್ಯನಿರ್ವಹಿಸದೇ ಇರುವುದರಿಂದ ಮತದಾನ ತಡವಾಗಿ ಆರಂಭವಾಯಿತು.
ಬೆಳಗ್ಗೆ 7 ಗಂಟೆಗೆ ಮತಯಂತ್ರ ಕಾರ್ಯನಿರ್ವಹಿಸದೇ ಇದ್ದಾಗ, ತಕ್ಷಣ ಕಾರ್ಯಪ್ರವೃತ್ತರಾದ ಮತಗಟ್ಟೆಯ ಸಿಬ್ಬಂದಿ ರೋಣ ವಿಧಾನಸಭೆ ಸಹಾಯಕ ಚುನಾವಣೆ ಅಧಿಕಾರಿ ಷಡಕ್ಷರಪ್ಪ, ತಹಸೀಲ್ದಾರ್ ಎ.ಜಿ. ಪಂಡಿತ, ಕ್ಷೇತ್ರಾಧಿಕಾರಿ (ಸೆಕ್ಟರ್ ಆಫೀಸರ್) ಅವರನ್ನು ಸಂಪರ್ಕಿಸಿದರು. ಕೂಡಲೇ ಮತಗಟ್ಟೆಯತ್ತ ದೌಡಾಯಿಸಿದ ಅಧಿಕಾರಿಗಳು ಮತಯಂತ್ರಗಳ ದೋಷ ಸರಿಪಡಿಸಿದರು. ಬಳಿಕ ಮತದಾನ ಸರಾಗವಾಗಿ ನಡೆಯಿತು. ಮತಪಟ್ಟಿಯಲ್ಲಿ ಹೆಸರು ನಾಪತ್ತೆ: ರೋಣ ಪಟ್ಟಣದ ಕೋ ಆಪರೇಟಿವ್ ಸೊಸೈಟಿ ಮತಗಟ್ಟೆ ಸೇರಿದಂತೆ ಕೆಲವು ಮತಗಟ್ಟೆ ಮತ್ತು ಗಜೇಂದ್ರಗಡ ಭಾಗದ ಕೆಲವು ಗ್ರಾಮಗಳ ಮತಗಟ್ಟೆಗಳ ಮತದಾರರ ಪಟ್ಟಿಯಲ್ಲಿ ಕೆಲವು ಮತದಾರರ ಹೆಸರು ನಾಪತ್ತೆಯಾಗಿದ್ದವು. ಕೆಲವರ ಹೆಸರು ಡಿಲೀಟ್ ಆಗಿತ್ತು. ಇನ್ನೂ ಕೆಲವರ ಹೆಸರಿನ ಜತೆ ಬೇರೆಯವರ ಭಾವಚಿತ್ರ ಪ್ರಕಟವಾಗಿತ್ತು. ಇದರಿಂದ ಚುನಾವಣೆ ಸಿಬ್ಬಂದಿ, ಮತದಾರರು ಗೊಂದಲಕ್ಕೀಡಾದರು. ಅದರಿಂದ ಕೆಲವರು ಮತದಾನ ವಂಚಿತರಾದರು. ಮಧ್ಯಾಹ್ನ ಬಿಸಿಲಿನ ಪ್ರಖರತೆ ಹೆಚ್ಚಳವಾಗಬಹುದೆಂದು ಅರಿತ ಮತದಾರ ಬೆಳಗ್ಗೆಯೇ ಮತಗಟ್ಟೆಯತ್ತ ದೌಡಾಯಿಸಿ, ಸರದಿ ಸಾಲಲ್ಲಿ ನಿಂತು ಮತ ಚಲಾಯಿಸಿದರು. ಮಹಿಳಾ ಮತ್ತು ಪುರುಷ ಮತದಾರರಿಗೆ ಪ್ರತ್ಯೇಕ ಸರದಿ ಸಾಲಿನ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 11ಕ್ಕೆ ಶೇ. 22ರಷ್ಟು, 12 ಗಂಟೆಗೆ ಶೇ. 30ರಷ್ಟು, 1ಕ್ಕೆ ಶೇ. 38ರಷ್ಟು, 3 ಗಂಟೆಗೆ ಶೇ. 51 ರಷ್ಟು, 5 ಗಂಟೆಗೆ ಶೇ. 63ರಷ್ಟು ಮತದಾನವಾಗಿತ್ತು. ತಾಲೂಕಿನ ಕೆಲವು ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಭೇಟಿ ನೀಡಿ ಪರಿಶೀಲಿಸಿದರು. ರೋಣ ವಿಧಾನಸಭೆ ಸಹಾಯಕ ಚುನಾವಣೆ ಅಧಿಕಾರಿ ಷಡಕ್ಷರಪ್ಪ, ತಹಸೀಲ್ದಾರ ಎ.ಜಿ. ಪಂಡಿತ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement