ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮುಂಡರಗಿ: ಶಾಂತ ಮತದಾನ

Mainashree
Updated On : 18 Apr 2014, 10:01 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಏ. 17
ಹಾವೇರಿ ಲೋಕಸಭೆ ಕ್ಷೇತ್ರದ ಚುನಾವಣೆಯ ಮತದಾನ ಗುರುವಾರ ತಾಲೂಕಿನಾದ್ಯಂತ ಶಾಂತಿಯುತವಾಗಿ ನಡೆಯಿತು. ಬೇಸಿಗೆಯ ಬಿರುಬಿಸಿನಲ್ಲಿಯೂ ಮತದಾರರು ಮತಗಟ್ಟೆಗೆ ಬಂದು ಮತ ಚಲಾಯಿಸಿದರು.
ಪಟ್ಟಣದಲ್ಲಿ ಬೆಳಗ್ಗೆ 7ಕ್ಕೆ ಪ್ರಾರಂಭಗೊಂಡ ಮತದಾನ 11ರ ವರೆಗೆ ಬಿರುಸಿನಿಂದ ಕೂಡಿತ್ತು. ನಂತರ 12ರಿಂದ ಸಾಯಂಕಾಲ 4ರ ವರೆಗೆ ಮಂದಗತಿಯಲ್ಲಿ ಸಾಗಿತ್ತು. ಸಂಜೆ 4ರಿಂದ  6ರ ವರೆಗೆ ಮತ್ತೆ ತುರುಸಿನಿಂದ ನಡೆದಿದ್ದು ಕಂಡು ಬಂದಿತು. ಗ್ರಾಮೀಣ ಪ್ರದೇಶಗಳಾದ ಕೊರ್ಲಹಳ್ಳಿ, ನಾಗರಹಳ್ಳಿ, ಸಿಂಗಟಾಲೂರು, ಹೆಸರೂರು, ಬೀಡನಾಳ, ಹಮ್ಮಿಗಿ, ಡಂಬಳ, ಪೇಠಾಲೂರು, ಮೇವುಂಡಿ ಗ್ರಾಮಗಳಲ್ಲಿ ಮಧ್ಯಾಹ್ನದ ಬಿರು ಬಿಸಿಲಿನಲ್ಲೂ ಲೆಕ್ಕಿಸದೇ ಮತದಾರರು ಸರದಿಯಲ್ಲಿ ನಿಂತು ಮತದಾನ ಮಾಡಿದ್ದು ಕಂಡುಬಂದಿತು.
ಕೈಕೊಟ್ಟು ಮತಯಂತ್ರ: ಬೆಳಗ್ಗೆ ಮತದಾನ ಪ್ರಾರಂಭವಾಗುವ ಸಂದರ್ಭದಲ್ಲಿ ಮುಂಡರಗಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಕೋಟೆ ಶಾಲೆ ಮುಂಡರಗಿಯ ಮತಗಟ್ಟೆ ಸಂಖ್ಯೆ 35ರಲ್ಲಿನ ಮತಯಂತ್ರ ಬೇಗನೆ ಪ್ರಾರಂಭವಾಗದ್ದರಿಂದ ಸುಮಾರು ಒಂದು ಗಂಟೆ ಮತದಾನ ತಡವಾಗಿ ಪ್ರಾರಂಭಗೊಂಡಿತು. ತಾಲೂಕಿನ ಬಸಾಪುರದಲ್ಲಿ ಮತಯಂತ್ರದ ಜೋಡಣೆಯಲ್ಲಿ ವ್ಯತ್ಯಯವಾಗಿದ್ದರಿಂದ ಮತದಾನ ಕೆಲ ಸಮಯ ವಿಳಂಬವಾಯಿತು.  
ವಿಶೇಷ ಮತದಾನ: ತಾಲೂಕಿನ ಕಲಕೇರಿ ಗ್ರಾಮದಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ, ಮುಂಡರಗಿಯಲ್ಲಿ ವೈ.ಎನ್. ಗೌಡರ ಹಾಗೂ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ಬೆಳಗ್ಗೆ 10.30ಕ್ಕೆ ಮುಂಡರಗಿ ಪಟ್ಟಣದಲ್ಲಿರುವ ಸರ್ಕಾರಿ ಶಾಸಕರ ಮಾದರಿ ಕೇಂದ್ರ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ 40ರಲ್ಲಿ ಸಾರ್ವಜನಿಕರ ಸರದಿಯಲ್ಲಿ ನಿಂತು ಮತದಾನ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ದೊಡ್ಡಮನಿ ಈ ಬಾರಿ ಹಾವೇರಿ ಲೋಕಸಭೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement