ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವೇಬ್ರಿಜ್ ಇನ್ನೂ ಉದ್ಘಾಟನೆ ಇಲ್ಲ

Mainashree
Updated On : 21 Apr 2014, 9:53 am

ನರಗುಂದ: ಪಟ್ಟಣದ ನೂತನ ಎಪಿಎಂಸಿ ಆವರಣದಲ್ಲಿ 2010-11ನೇ ಸಾಲಿನ ಯೋಜನೆ ಅಡಿಯಲ್ಲಿ ತಾಲೂಕಿನ ರೈತರು ಬೆಳೆದ ಬೆಳೆಗಳ ತೂಕ ಮಾಡಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬೃಹತ್ ತೂಕದ ಯಂತ್ರ (ವೇಬ್ರಿಜ್) ನಿರ್ಮಾಣ ಮಾಡಿದೆ. ಆದರೆ, ಅದು ನಿರ್ಮಾಣವಾಗಿ ಹಲವಾರು ತಿಂಗಳುಗಳೇ ಗತಿಸಿದರೂ ಅದರ ಉಪಯೋಗ ತಾಲೂಕಿನ ರೈತರಿಗೆ ಸಿಗದಂತಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆಯ ಆರ್‌ಕೆವಿವೈ ಯೋಜನೆದಲ್ಲಿ ರು. 19.96 ಲಕ್ಷದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ನಿರ್ಮಾಣ ಕಾಮಗಾರಿ ಮುಗಿದು ಹಲವಾರು ತಿಂಗಳುಗಳೇ ಕಳೆದಿದ್ದರೂ ರೈತರಿಗೆ ಲಾಭ ತಟ್ಟುತ್ತಿಲ್ಲ. ಜಿಲ್ಲೆಯಲ್ಲಿಯೇ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಕಾಲುವೆಗಳನ್ನು ಹಲವಾರು ಗ್ರಾಮಗಳು ಹೊಂದಿವೆ. ಇದರೊಟ್ಚಿಗೆ ತಾಲೂಕಿನ ಕೊಣ್ಣೂರು ಹೋಬಳದ ಲಖಮಾಪುರ, ವಾಸನ, ಬೆಳ್ಳೇರಿ, ಕೊಣ್ಣೂರು, ಬೂದಿಹಾಳ, ಕಪ್ಪಲಿ, ಕಲ್ಲಾಪುರ, ಶಿರೋಳ ಗ್ರಾಮಗಳು ಮಲಪ್ರಭೆ ನದಿಗೆ ಹೊಂದಿಕೊಂಡಿರುವುದರಿಂದ ಈ ಭಾಗದ ರೈತರು ನದಿಯ ನೀರನ್ನು ಪಂಪ್‌ಸೆಟ್‌ಗಳ ಮೂಲಕ ಎತ್ತಿ ನೀರಾವರಿ ಮಾಡುವುದರಿಂದ ಪ್ರಮುಖ ವಾಣಿಜ್ಯ ಬೆಳೆಗಳಾದ ಗೋವಿನಜೋಳ, ಸೂರ್ಯಕಾಂತಿ, ಗೋದಿ, ಬಿ.ಟಿ. ಹತ್ತಿ, ನೀರಾವರಿ ಗೋದಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯವ ರೈತರಿಗೆ ಇಂದು ಅವುಗಳನ್ನು ವಾಹನಗಳ ಮೂಲಕ ತೂಕ ಮಾಡಿಸಬೇಕೆಂದರೆ ಸರ್ಕಾರ ಸಂಬಂಧಿಸಿದ ಇಲಾಖೆಯ ತೂಕದ ಯಂತ್ರ ಇಲ್ಲದೆ ರೈತ ಹೆಚ್ಚುವರಿ ಹಣ ನೀಡಿ ಖಾಸಗಿ ತೂಕದ (ವೇ ಬ್ರೀಜ್) ಯಂತ್ರಗಳಲ್ಲಿ ತೂಕ ಮಾಡಿಸುವ ಸ್ಥಿತಿ ನಿರ್ಮಾಣವಾಗಿದೆ. ಎಪಿಎಂಸಿಗೆ ರೈತರು ಉತ್ಪನ್ನಗಳನ್ನು ಮಾರಾಟ ಮಾಡಲು ಬಂದರೂ ಹೊರಗಡೆಯೇ ವೇಬ್ರಿಜ್ ಮೂಲಕ ತೂಕ ಮಾಡಿಸುವಂತಾಗಿದೆ.
ಉಪಯೋಗವಿಲ್ಲ: ಈ ತೂಕದ ಯಂತ್ರ (ವೇಬ್ರೀಜ್) ಕಾಮಗಾರಿ ಮಳೆಗಾಲ ಸೇರಿದಂತೆ 3.4. 2013ರಂದು ಪ್ರಾರಂಭಗೊಂಡು ನವಂಬರ್ 2013ರಲ್ಲಿ ಪೂರ್ಣಗೊಳ್ಳಬೇಕಿತ್ತು. ಇದೇ ಅವಧಿಯಲ್ಲಿಯೇ ಕಾಮಗಾರಿ ಪೂರ್ಣ ಮುಗಿದಿದ್ದರೂ ಎಪಿಎಂಸಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರಕ್ಕೆ ಬರಬೇಕಾಗಿದ್ದ ಆದಾಯವೂ ಕೈ ತಪ್ಪುತ್ತಿದೆ. ಇನ್ನೊಂದೆಡೆ ರೈತರು ಹೆಚ್ಚಿನ ಆರ್ಥಿಕ ಹೊರೆಯನ್ನು ಅನುಭವಿಸುವಂತಾಗಿದೆ. ಯಂತ್ರ ನಿರ್ಮಾಣ ಪೂರ್ಣಗೊಂಡಿದ್ದರೂ ಅದಕ್ಕೆ ಬೇಕಾಗುವ ರಸ್ತೆ ಕಾಮಗಾರಿಯ ಬಾಕಿ ಉಳಿಸಲಾಗಿದ್ದು, ಈ ಕುರಿತು ಗುತ್ತಿಗೆದಾರರೊಂದಿಗೆ ಚರ್ಚಿಸುವ ಗೋಜಿಗೂ ಅಧಿಕಾರಿಗಳು ಹೋಗುತ್ತಿಲ್ಲ ಎನ್ನುವ ಆರೋಪಗಳು ರೈತ ವಲಯದಿಂದ ಕೇಳಿ ಬರುತ್ತಿವೆ.

 ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement