ಶಿವಾನುಭವದಿಂದ ನ್ಯಾಯಾಧೀಶನಾಗಲು ಪ್ರೇರಣೆ
ಗದಗ: ತೋಂಟದಾರ್ಯ ಮಠದಲ್ಲಿ ಪ್ರತಿ ಸೋಮವಾರ ನಡೆಯುವ ಶಿವಾನುಭವದಿಂದ ಬದುಕಿನ ಉನ್ನತ ಸಾಧನೆಗೆ ಪ್ರೇರಣೆ ಪಡೆದವರಲ್ಲಿ ತಾವೂ ಒಬ್ಬರಾಗಿದ್ದು, ಕಾನೂನು ಶಿಕ್ಷಣ ಮುಗಿಸಿ, ನ್ಯಾಯಾಧೀಶರಾಗಿ ದಕ್ಷತೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವಂತಹ ಆದರ್ಶ ಪರಿಪಾಲನೆಗೆ ಶಿವಾನುಭವ ತಮಗೂ ಪ್ರೇರಣೆ ನೀಡಿದೆ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನಾಗರಾಜ ಅರಳಿ ನುಡಿದರು. ಶನಿವಾರ ರಾತ್ರಿ ಜ. ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಶಿವಾನುಭವ ಸಮಿತಿ ಚೇರ್‌ಮನ್ ಪ್ರೊ. ಎಸ್.ಎನ್. ಆದಿ ಬರೆದ ಶಿವಾನುಭವ ಗ್ರಂಥ ಬಿಡುಗಡೆಗೊಳಿಸಿದರು. ಪ್ರೊ. ಚಂದ್ರಶೇಖರ ವಸ್ತ್ರದ ಅವರ ಸಂಪಾದಕತ್ವದಲ್ಲಿ ಪ್ರಕಟಿತ ಸಾವಿರ ಶಿವಾನುಭವ (ದ್ವಿತೀಯ ಘಟ್ಟ) ಗ್ರಂಥವನ್ನು ಧಾರವಾಡದ ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಬಸವಪ್ರಭು ಬಿಡುಗಡೆಗೊಳಿಸಿದರು. ಲಿಂಗಾಯತ ಪ್ರಗತಿಶೀಲ ಸಂಘದ ನೂತನ ಅಧ್ಯಕ್ಷರಾಗಿ ಪ್ರಭುದೇವ ಹಿರೇಮಠ, ಉಪಾಧ್ಯಕ್ಷರಾಗಿ ಶೇಖಣ್ಣ ಕಳಸಾಪುರಶೆಟ್ರ ಹಾಗೂ ರತ್ನಕ್ಕ ಪಾಟೀಲ, ಗೌರವ ಕಾರ್ಯದರ್ಶಿಗಳಾಗಿ ಕೆ.ಪಿ. ಗುಳಗೌಡ್ರ, ಸಹಕಾರ್ಯದರ್ಶಿಯಾಗಿ ವೀರಪ್ಪ ಜ್ಯೋತಿ, ಕೋಶಾಧ್ಯಕ್ಷರಾಗಿ ಚಂದ್ರಶೇಖರಪ್ಪ ಅರಳಿ, ಶಿವಾನುಭವ ಸಮಿತಿ ಚೇರ್‌ಮನ್‌ರಾಗಿ ಎಸ್.ಎನ್. ಆದಿ ಅವರಿಗೆ ಸಾನ್ನಿಧ್ಯ ವಹಿಸಿದ್ದ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಪ್ರತಿಜ್ಞಾವಿಧಿ ಬೋಧನೆ ಮೂಲಕ ಅಧಿಕಾರ ಹಸ್ತಾಂತರ ಕಾರ್ಯಕ್ಕೆ ಚಾಲನೆ ನೀಡಿದರು. ಎಂ.ಎ. ಹಂಚನಾಳ ನಿರೂಪಿಸಿದರು.