ಸಮಾಜಕ್ಕೆ ವಿಜ್ಞಾನದ ಕೊಡುಗೆ ಅಪಾರ
ಕನ್ನಡಪ್ರಭ ವಾರ್ತೆ, ರೋಣ, ಏ. 20
ಮನುಷ್ಯನ ಮೂಲ ಅಗತ್ಯತೆಗಳ ಪೂರೈಕೆಗಾಗಿ ಮತ್ತು ಪ್ರತಿ ಕ್ಷೇತ್ರದ ಪ್ರಗತಿಗೆ ಪ್ರಸ್ತುತ ದಿನದಲ್ಲಿ ವಿಜ್ಞಾನ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದೆ. ದಿನೇ ದಿನೇ ಹೊಸ ಆವಿಷ್ಕಾರ ಸೃಷ್ಟಿಸಿ ವಿಷ್ಮಯವನ್ನು ಮೂಡಿಸುತ್ತಿರುವ ವಿಜ್ಞಾನವು ಸಮಾಜಕ್ಕೆ ಮಹತ್ತವಾದ ಕೊಡುಗೆ ನೀಡುತ್ತಿದೆ ಎಂದು ವಿಜ್ಞಾನ ಶಿಕ್ಷಕ ಅಶೋಕ ಉಂಡಿ ಹೇಳಿದರು.
ಅವರು ಈಚೆಗೆ ಪಟ್ಟಣದ ರಾಜೀವಗಾಂದಿ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ(ಬಿ.ಇಡಿ.) 2013-14ನೇ ಸಾಲಿನ ಪ್ರಶಿಕ್ಷಣಾರ್ಥಿಗಳ ವಿಜ್ಞಾನ ಸಂಘವನ್ನು ಚಿಮ್ಮುವ ನೀರಿನಲ್ಲಿ ಚಂಡು ತೇಲುವಂತೆ ಮಾಡುವ ಪ್ರಯೋಗದ ಮೂಲಕ ಉದ್ಘಾಟಿಸಿ ಮಾತನಾಡಿದರು. ವಿವಿಧ ಜ್ಞಾನಗಳ ಅನಾವರಣ ಮತ್ತು ಮನುಷ್ಯನ ಕಲ್ಪನೆಗೂ ಮಿರಿದ ನವೀನ ಪರೀಶೋಧನೆ ಮತ್ತು ಆವಿಷ್ಕಾರಗಳ ಅವತರಣಿಕೆಯೇ ವಿಜ್ಞಾನವಾಗಿದ್ದು, ಇದೊಂದು ಶಾಸ್ತ್ರೀಯ ಜ್ಞಾನವಾಗಿದೆ. ಇಂದಿನ ಪ್ರತಿ ರಂಗದ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವು ತನ್ನದೆಯಾದ ಛಾಪು ಮೂಡಿಸಿದೆ. ಪಾತಾಳದಿಂದಿಡಿದೂ ಬಾಹ್ಯಾಕಾಶದವರೆಗೆ ಇಂದು ವಿಜ್ಞಾನ ಸಂಶೋಧನೆಗಳನ್ನ ನಡೆಸಿದೆ. ನಾವು ಬಳಸುತ್ತಿರುವ ಪ್ರತಿ ವಸ್ತುಗಳ ವಿಜ್ಞಾನದ ಆವಿಷ್ಕಾರದಿಂದಾಗಿವೆ. ಆದಿ, ಅನಾದಿ ಕಾಲದಲ್ಲಿಯೂ ವಿಜ್ಞಾನವಿತ್ತು. ಅಂದು ಅಷ್ಟರ ಮಟ್ಟಿಗೆ ಅದು ಬೆಳೆದಿದ್ದಿಲ್ಲ. ಇಂದು ಯಾಂತ್ರಿಕತೆಗೆ ಒರಗಿಕೊಂಡ ಮನುಷ್ಯನಿಗೆ ವಿಜ್ಞಾನದ ಆವಿಷ್ಕಾರಗಳು ಅತಿ ಅವಶ್ಯವೆನಿಸಿವೆ. ವಿಜ್ಞಾನಕ್ಕೆ ಸವಾಲಾಗಿ ನಿಲ್ಲಬಲ್ಲ ವಸ್ತು, ವಿಷಯ ಮತ್ತೊಂದಿಲ್ಲ ಎನ್ನಬಹುದು. ವಿಜ್ಞಾನದ ಕುರಿತು ಪ್ರತಿಯೊಬ್ಬರೂ ತಿಳಿಯುವುದು ಅತ್ಯಗತ್ಯವಾಗಿದೆ ಎಂದರು. ಪ್ರಾಚಾರ್ಯ ವೈ.ಎನ್. ಪಾಪನ್ನವರ ಮಾತನಾಡಿ, ಇಂದು ತಂತ್ರಜ್ಞಾನದ ಬಳಕೆ ಹೆಮ್ಮರವಾಗಿದೆ. ಎಲ್ಲದಕ್ಕೂ ತಂತ್ರಜ್ಞಾನ ಅತಿ ಅವಶ್ಯ ಎನಿಸುವ ಮಟ್ಟಿಗೆ ಎಲ್ಲಡೆ ತನ್ನದೆಯಾದ ಗುರುತು ಮೂಡಿಸಿದೆ. ಮಾನವನ ಬುದ್ಧಿಮಟ್ಟಕ್ಕೆ ಮಿರಿದ ರೀತಿಯಲ್ಲಿ ವಿಜ್ಞಾನ ಬೆಳವಣಿಗೆ ಹೊಂದುತ್ತಿದೆ. ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ತಂತ್ರಜ್ಞಾನದ ಪಾತ್ರ ಪ್ರಮುಖವಾಗಿದೆ. ಆದ್ದರಿಂದ ಶಾಲಾ, ಕಾಲೇಜ್ ಹಂತದಲ್ಲಿ ಕಂಪ್ಯೂಟರ್ ಬಳಕೆ, ಕಂಪ್ಯೂಟರ್ನ ಪ್ರಯೋಜನ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.
ಎಚ್.ಆರ್. ದೊಡ್ಡಮನಿ, ಪಿ.ಎಚ್. ಚೊಳಚಗುಡ್ಡ, ಸಿದ್ದಪ್ಪ ಪಿ., ಸಿ.ಎಚ್. ಕಂದಗಲ್ಲ, ಜಿ.ವಿ. ವೀರಾಪುರ, ಮೌನೇಶ ಬಡಿಗೇರ, ಎಸ್.ಎಸ್. ಗೌಡರ, ರವಿ ಕೊಪ್ಪದ, ಪುಂಡಲೀಕ ದೊಂಗಡೆ, ರವಿ ಹುಬ್ಬಳ್ಳಿ, ಅಶ್ವೀನಿ ದಲಬಂಜನ, ಪವಿತ್ರಾ ಜಡಿಮಠ, ಅನಸೂಯಾ ಬೇವಿನಗಿಡದ, ಮಲ್ಲಪ್ಪ ಭಂಡಾರಿ, ಮಂಜುನಾಥ ಭೋವಿ, ಬಸವರಾಜ ನರೇಗಲ್ಲ ಮುಂತಾದವರು ಉಪಸ್ಥಿತರಿದ್ದರು. ಆನಂದ ಪಟ್ಟಣಶೆಟ್ಟಿ ಸ್ವಾಗತಿಸಿದರು. ಸ್ಮೀತಾ ಯಂಡಿಗೇರಿ ನಿರೂಪಿಸಿದರು. ಜಿ.ಎನ್. ನಾಯಕ ವಂದಿಸಿದರು.