ಕೂಡುರಸ್ತೆ ಸಂಚಾರ ಕಷ್ಟ...ಕಷ್ಟ
ಕನ್ನಡಪ್ರಭ ವಾರ್ತೆ, ಗದಗ, ಏ. 21
ಗದಗ ನಗರದ ಹಳೆ ಜಿಲ್ಲಾ ಆಸ್ಪತ್ರೆ ಮುಂದಿನ ಕೂಡು (ವೃತ್ತ) ರಸ್ತೆಯಲ್ಲಿ, ಅಷ್ಟೇಅಲ್ಲ ಗದಗ ನಗರದಲ್ಲೇ ಎಚ್ಚರಿಕೆಯಿಂದ ಸಂಚರಿಸಬೇಕು. ಇಲ್ಲದಿದ್ದರೆ ಅಪಾಯ ಗ್ಯಾರಂಟಿ...
ಹೌದು, ಗದಗ ನಗರದ ಪ್ರಮುಖ ರಸ್ತೆಗಳಿಗೆ ಕೂಡು ರಸ್ತೆ ಹಾಗೂ ನಗರದಲ್ಲಿಯೇ ಅತ್ಯಂತ ಹೆಚ್ಚಿನ ಪ್ರಮಾಣದ ಆಸ್ಪತ್ರೆಗಳನ್ನು ಹೊಂದಿರುವ ಕೆ.ಸಿ. ರಾಣಿ ರಸ್ತೆ, ಇನ್ನೊಂದೆಡೆ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ ಸೇರಿದಂತೆ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಪಾಲಾ ಬದಾಮಿ ರಸ್ತೆ, ಈ ರಸ್ತೆಗೆ ತೋಂಟದಾರ್ಯ ಮಠದಿಂದ ಬಂದು ಸೇರುವ ಮತ್ತೊಂದು ರಸ್ತೆ ಹೀಗೆ ನಾಲ್ಕು ದಿಕ್ಕುಗಳಿಂದಲೂ ಬಂದ ರಸ್ತೆಗಳು ಇಲ್ಲಿಯೇ ಕೂಡುತ್ತದೆ. ಹೀಗಾಗಿ ಇಲ್ಲಿ ವಾಹನ ದಟ್ಟಣೆ ಹೆಚ್ಚು. ಇಲ್ಲಿ ಪ್ರಾಣವನ್ನು ಕೈಯಲ್ಲಿಯೇ ಹಿಡಿದುಕೊಂಡು ಸಂಚರಿಸಬೇಕು. ಇವರ ಗೋಳು ಕೇಳುವವರೇ ಇಲ್ಲದಂತಾಗಿದೆ.
ಹಳೆ ಜಿಲ್ಲಾ ಆಸ್ಪತ್ರೆಯ ಮುಂಭಾಗದ ರಸ್ತೆ ತೀರಾ ಇಕ್ಕಟ್ಟಾಗಿದೆ. ಇಲ್ಲಿಗೆ ನಾಲ್ಕೂ ದಿಕ್ಕುಗಳಿಂದಲೂ ಮುಖ್ಯ ರಸ್ತೆಗಳು ಬಂದು ಕೂಡುವುದರಿಂದ ಇಲ್ಲಿ ಸಂಚರಿಸುವುದು ತೀರಾ ದುಸ್ತರ. ಪೊಲೀಸ್ ಅಧಿಕಾರಿಗಳು, ನಗರಸಭೆಯ ಆಡಳಿತ ಮಂಡಳಿ ಈ ಸಮಸ್ಯೆಯ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ಈ ಕೂಡು ರಸ್ತೆಗೆ ಪೂರ್ವದಿಂದ ಕಿತ್ತೂರ ಚನ್ನಮ್ಮ ರಸ್ತೆಯಿಂದ, ಪಶ್ಚಿಮದಿಂದ ತೋಂಟದಾರ್ಯ ಮಠದ ಕಡೆಯಿಂದ, ಉತ್ತರದಿಂದ ರೋಣ, ಬದಾಮಿ, ಬಾಗಲಕೋಟೆ ಹಾಗೂ ಸ್ಥಳೀಯವಾಗಿ ಬೆಟಗೇರಿ ಭಾಗದಿಂದ ಬರುವ ವಾಹನಗಳು, ದಕ್ಷಿಣದಿಂದ ಬಸ್ ನಿಲ್ದಾಣದಿಂದ ಬಳಗಾನೂರು, ಹುಯಿಲಗೋಳ, ಗಜೇಂದ್ರಗಡ, ನರೇಗಲ್ಲ, ಸಮೀಪದ ಹಳ್ಳಿಗಳಿಗೆ ಹೋಗುವ ಮತ್ತು ಸ್ಥಳೀಯ ಬೆಟಗೇರಿ ಭಾಗಕ್ಕೆ ತೆರಳುವ ಬಹುತೇಕ ವಾಹನಗಳು ಈ ಕೂಡು ರಸ್ತೆಯಲ್ಲಿಯೇ ಹಾಯ್ದು ಹೋಗಬೇಕು.
ಸಮಸ್ಯೆ ತೀವ್ರ: ಸಂಚಾರ ದಟ್ಟಣೆ ಹೆಚ್ಚಾಗಲು ಈ ಕೂಡು ರಸ್ತೆ ಇಕ್ಕಟ್ಟಾಗಿರುವುದು, ಇದರೊಟ್ಟಿಗೆ ಇಲ್ಲಿಗೆ ನಾಲ್ಕೂ ದಿಕ್ಕುಗಳಿಂದ ವಾಹನಗಳು ಸಂಚರಿಸುವುದೂ ಪ್ರಮುಖ ಕಾರಣ. ಗ್ರಾಮಾಂತರ ಭಾಗದಿಂದ ಬರುವ ವಾಹನಗಳು ಪ್ರಯಾಣಿಕರನ್ನು ಇಳಿಸಲು ಇಲ್ಲಿಯೇ ನಿಲುಗಡೆ ಮಾಡಲಾಗುತ್ತದೆ. ಇನ್ನು ನಗರ ಸಾರಿಗೆಯ ಬಸ್‌ಗಳು ಬೆಟಗೇರಿಯಿಂದ ರೈಲು ನಿಲ್ದಾಣ, ಜೆ.ಟಿ. ಕಾಲೇಜಿನ ಮೂಲಕ ಬರುವ ಹಾಗೂ ಹಾತಲಗೇರಿ ಭಾಗದಿಂದ ಬರುವ ಎಲ್ಲ ವಾಹನಗಳಿಗೆ ಈ ಕೂಡು ರಸ್ತೆಯ ಸ್ವಲ್ಪ ಹಿಂದೆಯೇ ನಿಲುಗಡೆ ಮಾಡುತ್ತಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿ ಸಮಸ್ಯೆ ಸೃಷ್ಟಿಗೆ ಕಾರಣ.
ಪಾದಚಾರಿಗಳಿಗೆ ತೊಂದರೆ: ಇದೇ ಕೂಡು ರಸ್ತೆಯನ್ನು ದಾಟಿ ನಡೆದಾಗಲೇ ಹೆರಿಗೆ ಆಸ್ಪತ್ರೆಗೆ ಹಾಗೂ ಬಹುತೇಕ ಖಾಸಗಿ ಆಸ್ಪತ್ರೆಗೆ ತೆರಳಲು ಸಾಧ್ಯ.
ಇನ್ನು ಬಸ್ ನಿಲ್ದಾಣಕ್ಕೆ ತೋಂಟದಾರ್ಯ ಮಠ ಹಾಗೂ ಮುಖ್ಯ ಮಾರುಕಟ್ಟೆಗೆ ತೆರಳಬೇಕಾದವರಿಗೆ ಇದು ಮುಖ್ಯ ಸಂಪರ್ಕ ರಸ್ತೆ. ಇಲ್ಲಿ ಪಾದಚಾರಿಗಳಿಗೆ ತೀವ್ರ ತೊಂದರೆಯಾಗಿದೆ.
ಅವಕಾಶವಿಲ್ಲ: ಈ ತೊಂದರೆಯಿಂದ ಸಾರ್ವಜನಿಕರನ್ನು ಪಾರು ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಯನ್ನು ನೇಮಿಸಿದ್ದರೂ, ಈ ಕೂಡು ರಸ್ತೆ ಅತ್ಯಂತ ಇಕ್ಕಟ್ಟಾಗಿದ್ದರಿಂದ ಪೊಲೀಸ್ ಸಿಬ್ಬಂದಿ ಇಲ್ಲಿ ನಿಂತು ಕೆಲಸ ನಿರ್ವಹಿಸಲು ಸಾಧ್ಯವಿಲ್ಲ. ಅದಕ್ಕಾಗಿ ಸಿಬ್ಬಂದಿ ಇದ್ದರೂ ಇಲ್ಲದಂತಾಗಿದೆ. ಇಲ್ಲಿ ಚೌಕಿ ನಿರ್ಮಿಸಿದರೆ ಪೊಲೀಸರು ಅಲ್ಲಿ ನಿಂತುಕೊಂಡಾದರೂ ಸಂಚಾರ ದಟ್ಟಣೆ ತಡೆಯಲು ಸಾಧ್ಯ.
ಗಮನ ನೀಡಲಿ: ಸಿಗ್ನಲ್ ಲೈಟ್‌ಗಳ ಅಳವಡಿಕೆ ಮಾಡಿದಲ್ಲಿ ಈ ಮುಖ್ಯ ಕೂಡು ರಸ್ತೆ ಕೂಗಳತೆ ದೂರದಲ್ಲಿರುವ ರೋಟರಿ ವೃತ್ತದಲ್ಲಿ ಟ್ರಾಫಿಕ್ ಜಾಮ್ ಆಗುತ್ತದೆ. ಇದನ್ನು ಪರಿಗಣಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಈ ಕೆ.ಸಿ. ರಾಣಿ ರಸ್ತೆಯನ್ನು ಒನ್‌ವೇ ಮಾಡಿದ್ದರು. ಆದರೆ, ಯಾವ ಕಾರಣಕ್ಕೆ ಅದನ್ನು 1 ತಿಂಗಳಲ್ಲಿ ಸ್ಥಗಿತಗೊಳಿಸಿದರೊ? ಟಂಟಂ ಹಾಗೂ ದ್ವಿಚಕ್ರ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಯರ್ರಾ ಬಿರ್ರಿಯಾಗಿ ಬರುವುದರಿಂದ ಹತ್ತಾರು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಿವೆ.
- ಶಿವಕುಮಾರ ಕುಷ್ಟಗಿ