ಡಾ. ಎಂ. ವೆಂಕಟೇಶಕುಮಾರ್‌ಗೆ ಸನ್ಮಾನ
ಗದಗ: ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಗುರುತಿಸಿ ಕರ್ನಾಟಕ ವಿಶ್ವವಿದ್ಯಾಲಯವು ಡಾ. ಎಂ. ವೆಂಕಟೇಶಕುಮಾರವರಿಗೆ ಗೌರವ ಡಾಕ್ಟರೇಟ್ ನೀಡಿ ವಿಶ್ವವಿದ್ಯಾಲಯವು ತನ್ನ ಘನತೆ ಹೆಚ್ಚಿಸಿಕೊಂಡಿದೆ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿ ಕಲ್ಲಯ್ಯಜ್ಜನವರು ಹೇಳಿದರು.
ಅವರು ಈಚೆಗೆ ಪಂಡಿತ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಧಾರವಾಡದ ಕ.ವಿ.ವಿ. ಸಂಗೀತ ಹಾಗೂ ಲಲಿತ ಕಲಾ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಎಂ. ವೆಂಕಟೇಶಕುಮಾರ ಅವರನ್ನು ಸನ್ಮಾನಿಸಿ ಮಾತನಾಡಿದರು. ಪಂಡಿತ ಪಂಚಾಕ್ಷರಿ ಗವಾಯಿಗಳವರ ಶಿಷ್ಯರಾದ ಡಾ. ಬಸವರಾಜ ರಾಜಗುರು ಹಾಗೂ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳಿಗೂ ಗೌರವ ಡಾಕ್ಟರೇಟ್ ಪದವಿ ಲಭಿಸಿತ್ತು. ನಂತರ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಶಿಷ್ಯರಾದ ಪಂಡಿತ ಎಂ. ವೆಂಕಟೇಶಕುಮಾರ ಅವರಿಗೂ ಗೌರವ ಡಾಕ್ಟರೇಟ್ ಪದವಿ ದೊರೆತಿದ್ದು ವೀರೇಶ್ವರ ಪುಣ್ಯಾಶ್ರಮದ ಎಲ್ಲ ಶಿಷ್ಯವರ್ಗದವರಿಗೂ ಸಂತೋಷವಾಗಿದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಎಂ. ವೆಂಕಟೇಶಕುಮಾರ ಸಂಗೀತ ಪರಂಪರೆ ಉಳಿಸಿಕೊಂಡು ಹೋಗುವುದೇ ಗುರುವಿಗೆ ನಾವು ಕೊಡುವ ಕಾಣಿಕೆಯಾಗಿದೆ ಎಂದರು. ಬಸವರಾಜಸ್ವಾಮಿ ಹಿಡ್ಕಿಮಠ ಮಾತನಾಡಿ, ಡಾ.ಎಂ. ವೆಂಕಟೇಶಕುಮಾರ ಪುಟ್ಟರಾಜ ಕವಿ ಗವಾಯಿಗಳ ಪ್ರೀತಿಯ ಶಿಷ್ಯರಾಗಿದ್ದರು. ಪುಟ್ಟರಾಜ ಕವಿ ಗವಾಯಿಗಳು ಜಾತಿ, ಮತ, ಪಂಥ ನೋಡದೆ ಸರ್ವರಿಗೂ ಜಾತ್ಯತೀತ ಆಧಾರದ ಮೇಲೆ ಸಂಗೀತ ಹೇಳಿ ಹಿಂದೂಸ್ತಾನಿ ಸಂಗೀತ ಬೆಳೆಸಿದರು. ಅದೇ ಪರಂಪರೆಯನ್ನು ಮುಂದುವರಿಸಿ ಎಂ. ವೆಂಕಟೇಶಕುಮಾರವರು ಸಂಗೀತ ಕ್ಷೇತ್ರಕ್ಕೆ ಅಪಾರ ಸೇವೆ ಮಾಡುತ್ತಿದ್ದಾರೆ ಎಂದರು. ಸ್ಥಾನಿಕ ಸಮಿತಿ ಅಧ್ಯಕ್ಷ ಎಸ್.ಎಂ. ಗೌಡರ, ಡಾ. ಪಿ.ಜಿ.ಎ.ಎಸ್. ಸಮಿತಿ ನಿರ್ದೇಶಕ ವಿ.ಎಸ್. ಮಾಳೆಕೊಪ್ಪಮಠ, ಪ್ರಾಚಾರ್ಯ ವಿ.ಎಂ. ಗುರುಮಠ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಕುಮಾರಿ ಅಶ್ವಿನಿ ಹಿರೆಗೂಳಿ ಉಪಸ್ಥಿತರಿದ್ದರು. ಎಸ್.ಎಸ್. ಗಡ್ಡದಮಠ ನಿರೂಪಿಸಿದರು. ರಾಜೀವ ಹಿರೇಮಠ ಸ್ವಾಗತಿಸಿದರು. ಡಾ. ಮೃತ್ಯುಂಜಯ ಶೆಟ್ಟರ್ ವಾರ್ಷಿಕ ವರದಿ ವಾಚಿಸಿದರು. ಗಂಗಾಧರ ಹಿಡ್ಕಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.