ತಿಮ್ಮಾಪುರ ಕಥೆಗಳಲ್ಲಿ ಗ್ರಾಮೀಣ ಬದುಕಿನ ಚಿತ್ರಣ
ಮುಂಡರಗಿ: ಉಮೇಶ ತಿಮ್ಮಾಪುರ ಅವರ ಕಥೆಗಳಲ್ಲಿ ಗ್ರಾಮೀಣ ಬದುಕಿನ ಚಿತ್ರಣವಿದೆ ಎಂದು ಹಂಪಿ ಕನ್ನಡ ವಿವಿಯ ಸಂಶೋಧಕ ಡಾ. ಅರುಣ ಜೋಳದ ಹೇಳಿದರು.
ಅವರು ಭಾನುವಾರ ಇಲ್ಲಿಯ ಕೆ.ಆರ್. ಬೆಲ್ಲದ ಕಾಲೇಜಿನ ಸಭಾಭವನದಲ್ಲಿ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೆ.ಆರ್. ಬೆಲ್ಲದ ಪದವಿ ಮಹಾವಿದ್ಯಾಲಯ ಮತ್ತು ಜಿಲ್ಲಾ ಕನ್ನಡ ಅಧ್ಯಾಪಕರ ಪರಿಷತ್ತು ಆಶ್ರಯದಲ್ಲಿ ಹಮ್ಮಿಕೊಂಡಿರುವ ಸಾಹಿತಿ ಉಮೇಶ ತಿಮ್ಮಾಪುರ ಅವರ ಸಾಹಿತ್ಯಾವಲೋಕನ ಕಾರ್ಯಕ್ರಮದಲ್ಲಿ ಅವರ ಕಥೆಗಳನ್ನು ಕುರಿತು ಮಾತನಾಡಿದರು. ಧಾರವಾಡದ ಸಾಹಿತಿ ಪ್ರೊ. ವಿದ್ಯಾ ಕುಂದರಗಿ ಮಾತನಾಡಿ, ತಿಮ್ಮಾಪುರ ಅವರ ಕಾವ್ಯಗಳು ನೈಜ ಮತ್ತು ಸರಳತೆಯಿಂದ ಕೂಡಿವೆ. ಬಿರಿದ ನೆನಪುಗಳು ಮತ್ತು ಮೇಘಧ್ವನಿ ಕವನ ಸಂಕಲನಗಳಲ್ಲಿ ಬಡತನ ಮತ್ತು ಬಂಡಾಯದ ಛಾಯೆ ಕಂಡುಬಂದರೂ ಬದುಕಿಗೆ ಹತ್ತಿರವಾಗಿ ಕಾವ್ಯಗಳು ಗೆಲ್ಲುತ್ತವೆ ಎಂದರು.
ಬಾಗಲಕೋಟೆ ಸಾಹಿತಿ ಡಾ. ಬಾಳಾಸಾಹೇಬ ಲೋಕಾಪುರ ಅಧ್ಯಕ್ಷತೆ ವಹಿಸಿದ್ದರು. ಕಾವ್ಯ ಮತ್ತು ಕಥೆಗಳ ಸಂಕೀರ್ಣತೆಯನ್ನು ಸಾವಿತ್ರಿ ಮುಜಮದಾರ ವಿಮರ್ಶಿಸಿದರು. ಡಾ. ರಾಜಶೇಖರ ದಾನರಡ್ಡಿ, ಡಾ. ವಡ್ಡಿಗೇರೆ ನಾಗರಾಜಯ್ಯ, ಡಾ. ವೆಂಕಟಗಿರಿ ದಳವಾಯಿ, ಉಮೇಶ ತಿಮ್ಮಾಪುರ ಇದ್ದರು.