ಬಿಸಿಲಿನ ತಾಪಕ್ಕೆ ತತ್ತರಿಸಿದ ಜನತೆ
-ಶರಣು ಸೊಲಗಿ
ಮುಂಡರಗಿ: ಯುಗಾದಿ ಮುಗಿದು 21 ದಿನಗಳಾಯಿತು. ಮಳೆಗಾಲ ಪ್ರಾರಂಭವಾಗಿ ಹೊಸ ಮಳೆಗಳು ಪ್ರಾರಂಭವಾಗಬೇಕು. ಆದರೆ, ಮುಂಡರಗಿ ಪಟ್ಟಣವೂ ಸೇರಿದಂತೆ ತಾಲೂಕಿನಾದ್ಯಂತ ದಿನದಿಂದ ದಿನಕ್ಕೆ ಬಿಸಿಲಿನ ಪ್ರಕರತೆ ಹೆಚ್ಚುತ್ತಿದೆ. ಇದೀಗ ಮುಂಡರಗಿ ಪಟ್ಟಣದಲ್ಲಿ 36ರಿಂದ 38 ಡಿಗ್ರಿ ಸೆಲ್ಸಿಯಸ್ಗೆ ತಲುಪಿರಬಹುದೆಂದು ಅಂದಾಜಿಸಲಾಗುತ್ತಿದೆ. ಬೇಸಿಗೆಯ ಈ ಕಡು ಬಿಸಿಲಿನಿಂದಾಗಿ ತಾಲೂಕಿನ ಜನತೆ ತತ್ತರಿಸಿದ್ದಾರೆ.
ಪ್ರತಿದಿನ ಬೆಳಗ್ಗೆ 7ಕ್ಕೆ ಸಂಜೆ 6ರ ವರೆಗೂ ಬಿಸಿಲಿನ ಪ್ರಕರತೆ ಇರುತ್ತದೆ. ಹೊಲಗಳಿಗೆ ಕೆಲಸಕ್ಕೆ ಹೋಗುವ ಕಾರ್ಮಿಕರು, ರೈತರು, ವೃದ್ಧರು, ಅಂಗನವಾಡಿಗಳಿಗೆ ತೆರಳುವ ಮಕ್ಕಳು, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಬಿಸಿಲಿನ ತಾಪದಿಂದ ಮುಕ್ತಿಹೊಂದಲು ಬೇವಿನಮರ, ಹೊಂಗೆಮರ, ಮಾವಿನಮರ, ಅರಳೆಮರ, ಬಂಗಾಳಿಮರಗಳ ನೆರಳನ್ನು ಹುಡುಕುತ್ತ ಹೋದರೆ, ಹಮ್ಮಿಗಿ, ಕಕ್ಕೂರು, ಸಿಂಗಟಾಲೂರು, ಶೀರನಹಳ್ಳಿ, ಗಂಗಾಪುರ, ಮುಷ್ಟಿಕೊಪ್ಪ, ಗುಮ್ಮಗೋಳ, ವಿಠಲಾಪುರ, ಕೊರ್ಲಹಳ್ಳಿ, ಬಾಗೇವಾಡಿ, ಮುರುಡಿ, ಡೊಣಿ, ಡಂಬಳ, ಪೇಟಾಲೂರು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಅಲ್ಲಿನ ಜನತೆ ದೇವಸ್ಥಾನ, ಕೆರೆಯ ದಡಗಳಲ್ಲಿನ ಮರಗಳ ಕೆಳಗೆ ಮಲಗಿ, ಕುಳಿತು ವಿಶ್ರಾಂತಿ ಪಡೆಯುತ್ತಿರುವುದು ಕಂಡು ಬರುತ್ತಿದೆ.
ನೀರಿನ ಅರವಟಿಗೆ ಪ್ರಾರಂಭಿಸಿ: ತುಂಗಭದ್ರಾ ನದಿಯಲ್ಲಿ ನೀರು ಖಾಲಿಯಾಗಿದ್ದು, ಸ್ವಲ್ಪಮಟ್ಟಿನ ನೀರು ಇದೆ. ಇದರಿಂದಾಗಿ ಸಾರ್ವಜನಿಕರು ಕುಡಿಯುವುದಕ್ಕಾಗಿ ಶುದ್ಧ ನೀರನ್ನು ಅಲ್ಲಲ್ಲಿ ಮಾರಾಟ ಮಾಡುತ್ತಿರುವ ಜಾಗೆಗೆ ಹೋಗಿ ತೆಗೆದುಕೊಂಡು ಬರುತ್ತಿರುವುದು ಕಂಡು ಬರುತ್ತಿದೆ. ಪುರಸಭೆಯಿಂದ ಮುಂಡರಗಿ ಪಟ್ಟಣದ ಕೋಟೆ ಭಾಗದಲ್ಲಿ ಒಂದೇ ಒಂದು ಶುದ್ಧ ನೀರಿನ ಘಟಕ ಪ್ರಾರಂಭಿಸಲಾಗಿದೆ. ಈ ಹಿಂದೆ ಬೇಸಿಗೆ ಬಂದರೆ ಸಾಕು ಮುಂಡರಗಿ ಪಟ್ಟಣದಲ್ಲಿ ಅನೇಕ ಸಂಘ-ಸಂಸ್ಥೆಗಳು, ದೊಡ್ಡ ದೊಡ್ಡ ವ್ಯಾಪಾಸ್ಥರು ಹಾಗೂ ಪುರಸಭೆಯವರು ಸಾರ್ವಜನಿಕರ ಅನುಕೂಲಕ್ಕಾಗಿ ಅಲ್ಲಿಲ್ಲಿ ಕುಡಿಯುವ ನೀರಿಗೆ ಅರವಟಿಗೆಗಳನ್ನು ಪ್ರಾರಂಭಿಸುತ್ತಿದ್ದರು. ಇದೀಗ ಎಲ್ಲಿಯೂ ಒಂದು ಅರವಟೆಗೆಗಳಿಲ್ಲ. ಇದರಿಂದಾಗಿ ತಹಸೀಲ್ದಾರ್ ಕಚೇರಿ, ಪುರಸಭೆ, ತಾಪಂ, ಕೃಷಿ ಇಲಾಖೆ, ಎಪಿಎಂಸಿ, ಪೊಲೀಸ್ ಠಾಣೆ ಹೀಗೆ ಹೆಚ್ಚು ಜನನಿಬಿಡ ಪ್ರದೇಶಗಳಲ್ಲಿ ಪುರಸಭೆಯಿಂದ ನೀರಿನ ಅರವಟಿಗೆ ಪ್ರಾರಂಭಿಸುವ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕನ್ನುವುದು ಜನರ ಒತ್ತಾಯವಾಗಿದೆ.
ತಂಪು ಪಾನೀಯಗಳ ಭರಾಟೆ: ತಮ್ಮ ನಿತ್ಯದ ವ್ಯಾಪಾರ, ವಹಿವಾಟಿಗಾಗಿ, ಬ್ಯಾಂಕ್ ವ್ಯವಹಾರಕ್ಕಾಗಿ ಮುಂಡರಗಿ ಪಟ್ಟಣಕ್ಕೆ ಆಗಮಿಸುತ್ತಿರುವ ಅನೇಕ ಗ್ರಾಮಗಳ ಸಾರ್ವಜನಿಕರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ದಾಹ ತೀರಿಸಿಕೊಳ್ಳಲು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಅಲ್ಲಲ್ಲಿ ಗಿಡಮರಗಳ ಕೆಳಗಡೆಗೆ ಕಲ್ಲಂಗಡಿ ಹಣ್ಣು ಹಾಗೂ ಎಳನೀರು ವ್ಯಾಪಾರವೂ ಜೋರಾಗಿ ನಡೆಯುತ್ತಿದೆ. ಅನೇಕ ಹೋಟೆಲ್ಗಳಲ್ಲಿ ಮೊಸರು, ಅವಲಕ್ಕಿ, ಮಜ್ಜಿಗೆಗೆ ಬೇಡಿಕೆ ಹೆಚ್ಚಾಗಿದೆ.
ನಿರಂತರ ಫ್ಯಾನ್: ಮುಂಡರಗಿಯ ಬಿಸಿಲಿನ ತಾಪಕ್ಕೆ ತಾಲೂಕಿನ ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳಲ್ಲಿ, ಬ್ಯಾಂಕ್ಗಳಲ್ಲಿ ಬೆಳಗ್ಗೆ ಬಾಗಿಲು ತೆಗೆದಾಗಿನಿಂದ ಕಚೇರಿ ಅವಧಿ ಸಂ ಪೂರ್ಣ ಮುಗಿಯುವವರೆಗೂ ಫ್ಯಾನ್ಗಳು, ಎಸಿಗಳು ಹಾಗೂ ಪ್ರತಿ ಮನೆಗಳಲ್ಲಿಯೂ ಫ್ಯಾನ್ ಹಾಗೂ ಎಸಿಗಳು ನಿರಂತವಾಗಿ ತಿರುಗುತ್ತಲೇ ಇರುವುದು ಕಂಡು ಬರುತ್ತಿದೆ.
ಮುಖಕ್ಕೆ ಬಿಸಿ ಉಗಿ: ಇಲ್ಲಿನ ಪುರಸಭೆ ವ್ಯಾಪ್ತಿಯ ಶಿರೋಳ ಗ್ರಾಮಕ್ಕೆ ಹೋಗುವಾಗ ಮಧ್ಯೆದಲ್ಲಿ ಬರುವ ಕನಕರಾಯಣ ಗುಡ್ಡದ ಹತ್ತಿರ ಸಂಜೆ 5ರ ಸುಮಾರಿಗೆ ವಾಯುವಿಹಾರಕ್ಕೆಂದು ಹೊರಟರೆ ಮುಖಕ್ಕೆ ಬಿಸಿನೀರು ಉಗ್ಗಿದಂತಹ ಅನುಭವ ಆಗುತ್ತದೆ. ಬಿಸಿಲಿನ ತಾಪಕ್ಕೆ ಗುಡ್ಡ ಬಹಳಷ್ಟು ಕಾದಿದ್ದರಿಂದಾಗಿ ಅಲ್ಲಿ ಸಾಕಷ್ಟು ಝಳವಾಗುತ್ತದೆ.
ಗುಡ್ಡದಲ್ಲಿ ಕಲ್ಲು ಒಡೆಯುವವರ ಗೋಳು ಹೇಳತೀರದಾಗಿದೆ. ಆದ್ದರಿಂದ ಹೆಚ್ಚು ನೆರಳನ್ನು ಕೊಡುವ ಮೂಲಕ ಅಕ್ಕಪಕ್ಕದ ಜನತೆಗೆ ಒಂದಿಷ್ಟು ಬಿಸಿಲಿನ ಪ್ರಖರತೆ ಕಡಿಮೆ ಮಾಡಬಹುದು ಎನ್ನುವುದು ಇಲ್ಲಿನ ಪರಿಸರವಾದಿಗಳ ಅಭಿಪ್ರಾಯವಾಗಿದೆ.
ಇಲ್ಲಿ ಗಿಡಗಳನ್ನು ಹಚ್ಚುವುದರಿಂದ ಒಂದೆಡೆ ಪರಿಸರಕ್ಕೆ ಅನುಕೂಲವಾದರೆ, ಮತ್ತೊಂದೆಡೆ ಗುಡ್ಡದ ಅಕ್ಕಪಕ್ಕದವರಿಗೆ ತಂಪಾಗುತ್ತದೆ ಎನ್ನಲಾಗುತ್ತಿದೆ.