ವಾಜಪೇಯಿ ವಸತಿ ಸ್ಕೀಂ ಚೆಕ್ಗಾಗಿ ಸತ್ಯಾಗ್ರಹ
ಗಜೇಂದ್ರಗಡ: ವಾಜಪೇಯಿ ವಸತಿ ಯೋಜನೆ ಫಲಾನುಭವಿಗಳಿಗೆ ಸಹಾಯಧನದ ಚೆಕ್ ವಿತರಿಸುವಲ್ಲಿ ಪುರಸಭೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿ ಸಿಪಿಐ (ಎಂ) ನಗರ ಘಟಕ ಕಾರ್ಯಕರ್ತರು ಸೋಮವಾರ ಪುರಸಭೆ ಆವರಣದಲ್ಲಿ ಸತ್ಯಾಗ್ರಹ ನಡೆಸಿದರು.
ಸಿಪಿಐಎಂನ ಪುರಸಭೆ ಸದಸ್ಯ ಎಂ.ಎಸ್. ಹಡಪದ ಮಾತನಾಡಿ, ವಾಜಪೇಯಿ ವಸತಿ ಯೋಜನೆ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ನೀಡಿ ವರ್ಷವಾಗಿದೆ. ಈ ನಡುವೆ ಜಿಪಿಎಸ್ ತಂತ್ರಜ್ಞಾನ ಗೊಂದಲ ಉಂಟಾಗಿ ಕೆಲವರು ಮನೆ ನಿರ್ಮಿಸಿಕೊಳ್ಳಲು ವಿಳಂಬವಾಗಿ, ಬಳಿಕ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಯೋಜನೆಯಡಿ ಪುರಸಭೆ ವ್ಯಾಪ್ತಿಯಲ್ಲಿ 500ಕ್ಕೂ ಹೆಚ್ಚು ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಜಿಪಿಎಸ್ ಅಳವಡಿಕೆಯಾಗಿ 3 ತಿಂಗಳಾದರೂ ಕೆಲವರಿಗೆ ಮೊದಲ ಕಂತಿನ ಸಹಾಯಧನದ ಚೆಕ್ ನೀಡಿಲ್ಲ. ಪುರಸಭೆಯ ವಿಳಂಬ ನೀತಿಯಿಂದಾಗಿ ಬಡವರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು. ಪುರಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಸದಸ್ಯರು ಈ ಕುರಿತು ಮುಂಜಾಗ್ರತೆ ಕ್ರಮವನ್ನು ಕೈಗೊಳ್ಳಲು ವಿಫಲರಾಗಿದ್ದಾರೆ. ಕೆಲವು ಸದಸ್ಯರು ಸಹಾಯಧನದ ಚಕ್ ಪಡೆಯಲು ರು. 5000 ನೀಡುವಂತೆ ಫಲಾನುಭವಿಗಳಿಗೆ ಸತಾಯಿಸುತ್ತಿದ್ದಾರೆ. ಪುರಸಭೆ ಅಧಿಕಾರಿಗಳು ಚುನಾವಣೆ ನೀತಿ ಸಂಹಿತೆ ನೆಪವೊಡ್ಡಿ ಜನರ ಕೆಲಸಗಳನ್ನೂ ಮಾಡಿಕೊಡುತ್ತಿಲ್ಲ ಎಂದು ಆರೋಪಿಸಿದರು. ಸಿಪಿಐಎಂ ಮುಖಂಡ ಬಾಲು ರಾಠೋಡ್ ಮಾತನಾಡಿ, ಅಭಿವೃದ್ಧಿ ಕಾಮಗಾರಿಗಾಗಿ ಹಿಂದಿನ ಅವಧಿಯಲ್ಲಿ ಸಾಕಷ್ಟು ಅನುದಾನ ಬಿಡುಗಡೆಯಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಪಟ್ಟಣದಲ್ಲಿ ಕೆಲಸಗಳಾಗಿಲ್ಲ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಅನುದಾನ ಸದ್ಬಳಕೆಯಾಗುತ್ತಿಲ್ಲ. ಈ ಕುರಿತು ಸಿಪಿಐಎಂ ಪ್ರತಿಭಟನೆ ಮಾಡಿ ಮನವಿ ನೀಡಿದರೂ ರಾಜಕೀಯ ಲಾಭಕ್ಕಾಗಿ ಜನರನ್ನು ಒಕ್ಕಲೆಬ್ಬಿಸುತ್ತೀರಿ ಎಂದು ನಮ್ಮ ಮೇಲೆ ಗೂಬೆ ಕೂರಿಸುತ್ತಾರೆ. ವಾಜಪೇಯಿ ವಸತಿ ಯೋಜನೆ ಫಲಾನುಭವಿಗಳ ಬಾಕಿ ಉಳಿದ ಸಹಾಯಧನದ ಎಲ್ಲ ಚೆಕ್ಕುಗಳನ್ನು ನೀಡುವವರೆಗೂ ಸತ್ಯಾಗ್ರಹ ಮುಂದುವರಿಸುತ್ತೇವೆ ಎಂದರು. ಫಯಾಜ್ ತೋಟದ, ಬಾಲಕೃಷ್ಣ ಜಾಡಬಂಡಿ, ಶಿವಾಜಿ ಗಡ್ಡದ, ಯಮನೂರ ತಿರಕೋಜಿ, ಪರಸಪ್ಪ ಇಂಗಳೆ, ಬಾಳಪ್ಪ ಅರಗಂಜಿ, ನರಸಪ್ಪ ರಾಮಜಿ, ಕಳಕಪ್ಪ ಹೂಗಾರ, ಭೀಮಪ್ಪ ಅರಗಂಜಿ, ಕೆಂಚವ್ವ ಅರಗಂಜಿ, ಕಮಲವ್ವ ರಾಠೋಡ್, ಚಂದ್ರವ್ವ ರಾಠೋಡ್ ಇತರರಿದ್ದರು.