ಎಟಿಎಂ, ಔಷಧ ಅಂಗಡಿ ಸ್ಥಾಪಿಸಿ: ಮನವಿ
ಗದಗ: ಜಿಲ್ಲೆ ಮತ್ತು ತಾಲೂಕು ಸ್ಥಳಗಳಲ್ಲಿ ಪ್ರತಿ 50 ಹಾಸಿಗೆ ಮೇಲ್ಪಟ್ಟ ಆಸ್ಪತ್ರೆಯ ಮುಂದೆ ಒಂದು ಎಟಿಎಂ ಮತ್ತು ಔಷಧ ಅಂಗಡಿ ಸ್ಥಾಪಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಜೈ ಭೀಮ್ ಸೇನಾ ಘಟಕದಿಂದ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ರಾತ್ರಿ ವೇಳೆಯಲ್ಲಿ ಹಣವಿಲ್ಲದೇ ಪರದಾಡುವ ರೋಗಿಗಳ ತೊಂದರೆ ದಿನೇ ದಿನೇ ಸಾಮಾನ್ಯವಾಗಿದೆ. ಅಲ್ಲದೇ ಸರಿಯಾದ ಸಮಯದಲ್ಲಿ ಔಷಧ ಸಿಗದೇ ರೋಗಿ ಪ್ರಾಣ ಕಳೆದುಕೊಳ್ಳುವ ಸಂಭವವಿದೆ. ರಾತ್ರಿ ವೇಳೆಗೆ ಔಷಧ ಕೊರತೆ ನೀಗಿಸಲು ಜಿಲ್ಲೆ ಮತ್ತು ತಾಲೂಕು ಸ್ಥಳಗಳಲ್ಲಿ ಪ್ರತಿ 50 ಹಾಸಿಗೆ ಮೇಲ್ಪಟ್ಟ ಆಸ್ಪತ್ರೆಯ ಮುಂದೆ ಒಂದು ಸುಸಜ್ಜಿತ ಔಷಧ ಅಂಗಡಿಗೆ 24 ಗಂಟೆಗಳ ಸೇವೆ ಒದಗಿಸುವ ಷರತ್ತಿನೊಂದಿಗೆ ಪರವಾನಗಿ ನೀಡಬೇಕು.
ರಾಜ್ಯದ ಪ್ರತಿಯೊಂದು ಆಸ್ಪತ್ರೆಗಳ ಮುಂದೆ ಒಂದು ಎಟಿಎಂ. ಮತ್ತು ಔಷಧಿ ಅಂಗಡಿಯನ್ನು ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕಾಗಿದೆ. ಅಂದಾಗ ಮಾತ್ರ ಎಲ್ಲ ರೋಗಿಗೆ ಮತ್ತು ಸಂಬಂಧಿಗಳಿಗೆ ರಾತ್ರಿ ವೇಳೆಯಲ್ಲಿ ಆಗುವ ತೊಂದರೆ ತಪ್ಪಿಸಬಹುದು. ತಹಸೀಲ್ದಾರ್ ಈ ಸಮಸ್ಯೆ ಕುರಿತು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಮೂಲಕ ಸಾರ್ವಜನಿಕರ ತೊಂದರೆ ನಿವಾರಿಸಲು ಶ್ರಮಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ. ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಹುಬ್ಬಳ್ಳಿ, ಕಾರ್ಯದರ್ಶಿ ರಾಘವೇಂದ್ರ ಪರಾಪೂರ, ವಿಜಯ ಕಲ್ಮನಿ, ಉಪಾಧ್ಯಕ್ಷ ಮಂಜುನಾಥ ತೌಜಲ್, ದೀಪಕ ಕಲ್ಮನಿ, ಪರಶುರಾಮ ಸಂಗಾಪೂರ, ಓಬಳೇಶ ಯಶವಂತಪೂರ, ಮಂಜುನಾಥ ಪರಾಪೂರ, ಪರಶುರಾಮ ಸೀತಿಮನಿ, ಪರಶುರಾಮ ದೊಡ್ಡಮನಿ, ಹೇಮಂತ ಹುಬ್ಬಳ್ಳಿ, ಮಂಜುನಾಥ ಕಲ್ಲೂರ, ಬಸವರಾಜ ಬದಾಮಿ, ವಿರುಪಾಕ್ಷ ಸಂಗಾಪೂರ, ರಾಘವೇಂದ್ರ ಹರಿಜನ, ರಾಷ್ಟೀನ್ ಜೋಷಫ, ಶಂಕರ ಹುಬ್ಬಳ್ಳಿ ಉಪಸ್ಥಿತರಿದ್ದರು.