ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗುಬ್ಬಚ್ಚಿ ಗೂಡಿನಲ್ಲಿ ಪೊಲೀಸರ ವಾಸ!

Vishwanath S
Updated On : 24 Apr 2014, 10:56 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಏ. 23
ಒಬೇರಾಯನ ಕಾಲದ ಪೊಲೀಸ್ ಠಾಣೆ ಅಲ್ಲದೆ ಗುಬ್ಬಚ್ಚಿ ಗೂಡಿನಲ್ಲಿ ಪೊಲೀಸರ ವಾಸ, ಅತಿಥಿಗಳು ಬಂದರೆ ವನವಾಸ. ಇದು ಕನಿಷ್ಠ ಸೌಲಭ್ಯ ದೊರೆಯದೆ ಹೀನಾಯ ಸ್ಥಿತಿಯಲ್ಲಿರುವ ಗಜೇಂದ್ರಗಡ ಪೊಲೀಸ್ ವಸತಿ ಗೃಹದ ದುಸ್ಥಿತಿ.
ಹೌದು, ಪಟ್ಟಣದ ಲಂಬಾಣಿ ತಾಂಡಾಕ್ಕೆ ಹೊಂದಿಕೊಂಡಿರುವ 9 ಪೊಲೀಸ್ ವಸತಿ ಗೃಹಗಳು ತೀರಾ ಕಿರಿದಾಗಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ಕಾಡುಗಲ್ಲಿನಿಂದ ನಿರ್ಮಿಸಿದ ಈ ಮನೆಗಳನ್ನು ಕುದುರೆ ಕಟ್ಟಲು ಉಪಯೋಗಿಸುತ್ತಿದ್ದರು. ಆದರೆ, ಕಾಲಕ್ರಮೇಣ ಅವುಗಳನ್ನು ಜನವಾಸಕ್ಕೆ ಪರಿವರ್ತಿಸಲಾಗಿದೆ. ಬಹುತೇಕ ಮನೆಗಳು ಶಿಥಿಲಗೊಂಡಿವೆ. ಜತೆಗೆ 9 ಮನೆಗಳಿಗೆ ಇರುವುದು ಏಕೈಕ ನೀರಿನ ನಲ್ಲಿ(ನಳ) ಅನಿವಾರ್ಯ ಕಾರಣಕ್ಕೆ ಪೊಲೀಸರು ವಾಸಿಸುತ್ತಿದ್ದಾರೆ.
ಕೆಲ ಮನೆಗಳ ಮುಂದೆ ಸ್ವಚ್ಛತೆ ಕಂಡು ಬರುತ್ತದೆ. ಹಿತ್ತಲ ಭಾಗದಲ್ಲಿ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಕಲುಷಿತ ನೀರು ಮಡುಗಟ್ಟಿ ಸೊಳ್ಳೆಗಳ ಉಗಮ ಸ್ಥಾನವಾಗಿದೆ. ಬಾಗಿಲುಗಳು ಕೆಳಮಟ್ಟದಲ್ಲಿರುವುದರಿಂದ ಮಳೆ ಬಂದರೆ ನೀರು ಒಳಗೆ ನುಗ್ಗುತ್ತದೆ. ಕುಡಿವ ನೀರಿಗೆ ಹಾಹಾಕಾರ ಇದೆ. ಪಟ್ಟಣ ಪಂಚಾಯ್ತಿ ನೀರು ಬಿಟ್ಟರೆ ಮಾತ್ರ ಅನುಕೂಲ. ಹಿಂದಿನ ಹಿರಿಯ ಅಧಿಕಾರಿಗಳು ಇಲ್ಲಿನ ಅವ್ಯವಸ್ಥೆ ಕಂಡು ಸ್ವಚ್ಛತೆ ಬಗ್ಗೆ ಕ್ರಮ ತೆಗೆದುಕೊಂಡಿದ್ದರು ಪರಿಹಾರ ಕಂಡಿಲ್ಲ.
ರಕ್ಷಣೆ ಇಲ್ಲದ ಪೊಲೀಸ್ ಕುಟುಂಬ:   ಪೊಲೀಸ್ ಕುಟುಂಬದ ಸದಸ್ಯರು ವಾಸಿಸುವ ಈ ವಸತಿ ಗೃಹದಲ್ಲಿ ಒಂದು ಕುಟುಂಬ ವಾಸಿಸಲು ಇರುವಂತ ಕನಿಷ್ಠ ಸೌಲಭ್ಯ ಇಲ್ಲದಿರುವುದು ನಾಚಿಕೇಗೇಡಿನ ಸಂಗತಿ. ಪೊಲೀಸರು ವಾಸಿಸುವ ಹೆಂಚಿನ ಮನೆಗಳು ಅಲ್ಲಲ್ಲಿ ಸೊರುತ್ತಿವೆ. ಶೌಚಾಲಯ ಅವ್ಯವಸ್ಥೆಯಿಂದ ಕೂಡಿ ಗಬ್ಬುನಾತ ಬೀರುತ್ತಿದೆ. ಆರಕ್ಷಕರು ಹಾಗೂ ಅವರ ಕುಟುಂಬ ಸದಸ್ಯರು ತೀವ್ರ ತೊಂದರೆ ಅನುಭವಿಸುತ್ತಿದ್ದರೂ ಕೇಳುವವರಿಲ್ಲದಂತಾಗಿದೆ. ಇಂಥ ದುರ್ಬಲ ವ್ಯವಸ್ಥೆಯಲ್ಲಿ ಬಳಲುತ್ತಿರುವವರು ನಮ್ಮ ರಕ್ಷಣೆ ಹೊಣೆ ಹೊರಲು ಸಾಧ್ಯವೆ?
ಅಸಹಾಯಕ ಪೊಲೀಸರು: ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಬಾರದು, ಕಳ್ಳತನ ದರೋಡೆಯಂಥ ಪ್ರಕರಣಗಳು ನಡೆಯಬಾರದು ಎಂದು ರಾತ್ರಿ ಪಟ್ಟಣದ ಗಲ್ಲಿಯಲ್ಲಿ ಗಸ್ತು ತಿರುಗುವ ಇಲ್ಲಿನ ಪೊಲೀಸರಿಗೆ ತಮ್ಮದೇ ಮನೆಗಳ ಬಗ್ಗೆ ಯಾರಿಗೂ ಹೇಳದಂತಹ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯ ನಗರಿ ಗಜೇಂದ್ರಗಡ. ಹೀಗಾಗಿ ಪೊಲೀಸ್ ಇಲಾಖೆ ಮುಂಜಾಗೃತಾ ಕ್ರಮ ಕೈಗೊಂಡು ಸಮಾಜದ ಶಾಂತತೆಗೆ ಶ್ರಮಿಸಬೇಕಾಗಿದೆ. ಜನರ ಸಂಪತ್ತು ಸಂರಕ್ಷಿಸಬೇಕಾದ ಒಟ್ಟು 41 ಸಿಬ್ಬಂದಿಗೆ 9 ವಸತಿ ಗೃಹಗಳಿವೆ. ಉಳಿದವರು ಹೆಚ್ಚಿನ ಬಾಡಿಗೆ ತೆತ್ತು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಶತಮಾನ ಕಂಡ ಠಾಣೆ ಕಟ್ಟಡ: ಪೊಲೀಸ್ ಇಲಾಖೆ ಇಲ್ಲದ ಸಮಾಜ ಊಹಿಸುವುದು ಕಷ್ಟಸಾಧ್ಯ. ಪ್ರಾಣದ ಹಂಗು ತೊರೆದು ಸಮಾಜದ ಹಿತಕ್ಕೆ ಹಗಲಿರಳು ಶ್ರಮಿಸುತ್ತಿರುವ ಸ್ಥಳೀಯ ಠಾಣೆ ಪೊಲೀಸ್ ಸಿಬ್ಬಂದಿಗೆ ಮೂಲಸೌಕರ್ಯದ ಜತೆಗೆ ಸುಸಜ್ಜಿತ ವಸತಿ ಇಲ್ಲದೇ ದುಸ್ಥಿತಿಯಲ್ಲಿರುವುದು ಅವ್ಯವಸ್ಥೆಗೆ ಹಿಡಿದಿರುವ ಕೈಗನ್ನಡಿ. 1912ರಲ್ಲಿ ಬ್ರಿಟಿಷರು ನಿರ್ಮಿಸಿರುವ ಗಜೇಂದ್ರಗಡ ಪೊಲೀಸ್ ಠಾಣೆ ಮತ್ತು ಪೊಲೀಸರ ವಸತಿ ಕಟ್ಟಡ ನೂರುವರ್ಷ ಕಂಡಿದೆ. ಆದರೆ, ಶಿಥಿಲಾವಸ್ಥೆ ಯಲ್ಲಿರುವ ಈ ವಸತಿ ಕಟ್ಟಡಗಳ ಪುನರ್ ನಿರ್ಮಾಣಕ್ಕೆ ಯಾಕೆ ಮುಂದಾಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಪ್ರಶ್ನೆ.
ಉತ್ತಮ ಸಮಾಜ ನಿರ್ಮಾಣದಲ್ಲಿ ನ್ಯಾಯಸಮ್ಮತ ನಿರ್ಣಾಯಕ ಪಾತ್ರ ವಹಿಸುವ ಪೊಲೀಸ್ ಇಲಾಖೆಗೆ ಅತ್ಯಾಧುನಿಕ ಸೌಕರ್ಯ ನೀಡುವುದು ಆಡಳಿತ ವ್ಯವಸ್ಥೆ ಕರ್ತವ್ಯ. ಆದರೆ, ಗಜೇಂದ್ರಗಡ ಪಟ್ಟಣದಲ್ಲಿ  ಪೊಲೀಸ್ ಸಿಬ್ಬಂದಿಗೆ ಮೂಲಸೌಕರ್ಯ ನೀಡುವಲ್ಲಿ ತಾತ್ಸಾರ ತೋರಿರುವುದು ನಾಚಿಕೆಗೇಡಿನ ಸಂಗತಿ. ಜತೆಗೆ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು. ಇನ್ನಾದರೂ ಸಂಬಂಧಿಸಿದ ಇಲಾಖೆ ಇತ್ತ ಗಮನಹರಿಸಲಿ
- ಅಜಿತ್ ಬಾಗಮಾರ
ಬಾಗಮಾರ ಸೇವಾ ಸಮಿತಿ


-ಡಿ.ಜಿ. ಮೊಮಿನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement