ನೀರಿಗಾಗಿ ರು. 2 ಕೋಟಿ ಪ್ರಸ್ತಾವನೆ
ಕನ್ನಡಪ್ರಭ ವಾರ್ತೆ, ಗದಗ, ಏ. 23
ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ರು. 2 ಕೋಟಿ ಅನುದಾನವನ್ನು ತಕ್ಷಣ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಬುಧವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವಳಿನಗರ ಸೇರಿದಂತೆ ಜಿಲ್ಲೆಯ ನೀರಿನ ಸಮಸ್ಯೆ ಕುರಿತು ಪರಿಶೀಲನಾ ಸಭೆ ನಡೆಸಿದ ನಂತರ ಸಾಯಂಕಾಲ ನಗರದ ಕಾಟನ್ ಸೇಲ್ ಸೊಸೈಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಪಂಗೆ ರು. 60 ಲಕ್ಷ ಬಿಡುಗಡೆ ಮಾಡಲಾಗಿದ್ದು, ಈಗಾಗಲೇ ವಿವಿಧ ಗ್ರಾಮಗಳಲ್ಲಿ 56 ಕೊಳವೆಬಾವಿ ಕೊರೆಯಲಾಗಿದೆ. ಮುಂದಿನ 15 ದಿನಗಳಲ್ಲಿ ಎಲ್ಲ ಕೊಳವೆಬಾವಿಗಳಿಗೆ ವಿದ್ದುದ್ದೀಕರಣಗೊಳಿಸಿ ಜನರ ಉಪಯೋಗಕ್ಕೆ ಲಭ್ಯಗೊಳಿಸಲಾಗುವುದು. ರೋಣ ತಾಲೂಕಿನ ಹೊಳೆಮಣ್ಣೂರು, ಗಾಡಗೋಳಿ ಹಾಗೂ ಗದಗ ತಾಲೂಕಿನ ಚಿಂಚಲಿ, ಕಣವಿ, ಕಲ್ಲೂರು, ನೀಲಗುಂದ, ಅಡವಿಸೋಮಾಪುರ ತಾಂಡಾ, ಲಿಂಗದಾಳ ಹೋಬಳಿಗಳಲ್ಲಿ ನೀರಿನ ಸಮಸ್ಯೆ ಅತಿಯಾಗಿದೆ. ಹೊಳೆಮಣ್ಣೂರು, ಗಾಡಗೋಳಿ ಹಾಗೂ ತಾಲೂಕಿನ ಅಡವಿಸೋಮಾಪುರ ತಾಂಡಾಗಳಿಗೆ ತಕ್ಷಣ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಸೂಚನೆ ನೀಡಲಾಗಿದೆ.
ಸಹಾಯವಾಣಿ ಸ್ಥಾಪನೆ: ನೀರಿನ ಸಮಸ್ಯೆಯ ಕುರಿತು ದೂರು ನೀಡುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದಲ್ಲಿ ಸಹಾಯವಾಣಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದ್ದು, ದೂರು ದಾಖಲೆಗಾಗಿ 08372-234987 ದೂರವಾಣಿಗೆ ಸಂಪರ್ಕಿಸಬಹುದಾಗಿದೆ. ತಾಪಂ ಇಒಗಳನ್ನು ನೋಡೆಲ್ ಅಧಿಕಾರಿಗಳೆಂದು ನೇಮಕ ಮಾಡಲಾಗಿದ್ದು, ಅವರಿಂದ ದೊರೆಯುವ ಪ್ರತಿದಿನ ದೂರು, ವರದಿ, ಕೈಗೊಂಡ ಕ್ರಮದ ಮಾಹಿತಿಯನ್ನು ಪ್ರತಿವಾರ ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಯಾವುದೇ ಕಾರಣಕ್ಕೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತವನ್ನು ಸನ್ನದ್ಧಗೊಳಿಸಲಾಗಿದೆ.
ವಿದ್ದುತ್ ಪೂರೈಸಲು ಕ್ರಮ: ಗದಗ-ಬೆಟಗೇರಿ ಅವಳಿನಗರ ಕಳೆದ ಒಂದೂವರೆ ತಿಂಗಳುಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ತೊಂದರೆ ಅನುಭವಿಸುತ್ತಿದೆ. 25 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಪ್ರಥಮ ಹಂತದಲ್ಲಿ ಕೊರೆಯಿಸಲಾದ 57 ಕೊಳವೆಬಾವಿಗಳಲ್ಲಿ 40 ಕೊಳವೆಬಾವಿಗಳು ಯಶಸ್ವಿಯಾಗಿದ್ದು, ವಿದ್ದುದ್ದೀಕರಣ ಕಾರ್ಯ ಪೂರೈಸಲಾಗಿದೆ. 2ನೇ ಹಂತದಲ್ಲಿ ಕೊರೆಯಿಸಲಾದ 64 ಕೊಳವೆಬಾವಿಗಳಲ್ಲಿ 42 ಕೊಳವೆಬಾವಿಗಳಲ್ಲಿ ನೀರು ಲಭ್ಯವಾಗಿದ್ದು, ಮುಂಬರುವ 8 ದಿನಗಳಲ್ಲಿ ಎಲ್ಲ 42 ಕೊಳವೆಬಾವಿಗಳಿಗೆ ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಪ್ರತಿ 2 ವಾರ್ಡ್ಗೆ 1 ಟ್ಯಾಂಕರ್ ಮೀಸಲು: ಅವಳಿನಗರದ ಪ್ರತಿ 2 ವಾರ್ಡ್ಗಳ ಮಧ್ಯದಲ್ಲಿ ಒಂದು ಕುಡಿಯುವ ನೀರಿನ ಟ್ಯಾಂಕರ್ ಮೀಸಲಾಗಿಡುವಂತೆ ಸೂಚಿಸಿದ್ದು, ಒಟ್ಟು ನಗರ ನೀರು ಪೂರೈಕೆಗಾಗಿ 19 ಟ್ಯಾಂಕರ್ ಒದಗಿಸುವಂತೆ ಸ್ಥಳೀಯ ಆಡಳಿತಕ್ಕೆ ಸೂಚಿಸಲಾಗಿದೆ. ಹಾಗೂ ಅವಳಿ ನಗರದ ಕುಡಿಯುವ ನೀರಿನ ದೂರುಗಳನ್ನು ದಾಖಲಿಸಿಕೊಳ್ಳುವ ನಿಟ್ಟಿನಲ್ಲಿ ನಗರಸಭೆಯಲ್ಲಿ ಸಹಾಯವಾಣಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. 08372-278504 ಇಲ್ಲಿಗೆ ಸಂಪರ್ಕಿಸಲು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. 2ನೇ ಹಂತದ ಕುಡಿಯುವ ನೀರಿನ ಯೋಜನೆ ಡಿಸೆಂಬರ್ 2015ರ ಅಂತ್ಯಕ್ಕೆ ಅನುಷ್ಠಾನಗೊಳಿಸುವ ಪ್ರಯತ್ನ ಜಾರಿಯಲ್ಲಿದೆ.
ಈಗಾಗಲೇ ರು. 4.84 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶಹರ ಪ್ರದೇಶಗಳಲ್ಲಿ ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಮುಳಗುಂದ ಪಟ್ಟಣಕ್ಕೆ ತುಂಗಭದ್ರಾ ನದಿ ಪಾತ್ರದಿಂದ ಕುಡಿಯುವ ನೀರು ಹರಿಸಲು ಪ್ರಾರಂಭಿಸಲಾಗಿದ್ದು, ಕಾಮಗಾರಿಯನ್ನು ಮುಂದಿನ 45 ದಿನಗಳಲ್ಲಿ ಪೂರ್ಣಗೊಳಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ನರಗುಂದ ಪಟ್ಟಣಕ್ಕೆ ನೀರು ಪೂರೈಸುವ ಕೆರೆಯಲ್ಲಿ 10 ದಿನಗಳಿಗಾಗುವಷ್ಟು ನೀರು ಸಂಗ್ರಹವಿದ್ದು, ತಕ್ಷಣ ಮಲಪ್ರಭಾ ನದಿ ಪಾತ್ರದಿಂದ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ನೀರಾವರಿ ಸಚಿವರನ್ನು ಕೋರಲಾಗಿದೆ ಎಂದರು.
ಶಾಸಕ ಬಿ.ಆರ್. ಯಾವಗಲ್, ನಗರಸಭೆ ಅಧ್ಯಕ್ಷೆ ರುದ್ರಮ್ಮ ಕೆರಕಲಮಟ್ಟಿ, ಉಪಾಧ್ಯಕ್ಷ ಕೃಷ್ಣಾ ಪರಾಪುರ, ಸದಸ್ಯ ಬಿ.ಬಿ. ಅಸೂಟಿ, ಎಂ.ಸಿ. ಶೇಖ, ಮಂಜುನಾಥ ಪೂಜಾರ, ಅನಿಲ ಗರಗ, ಅಶೋಕ ಮಂದಾಲಿ, ಉಮರಫಾರೂಖ ಹುಬ್ಬಳ್ಳಿ, ಬಸವರಾಜ ಕಡೇಮನಿ, ಚಾಂದಸಾಬ್ ಕೊಟ್ಟೂರು ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.
ಜಿಪಂಗೆ ರು. 60 ಲಕ್ಷ ಬಿಡುಗಡೆ ಮಾಡಲಾಗಿದ್ದು, ಈಗಾಗಲೇ ವಿವಿಧ ಗ್ರಾಮಗಳಲ್ಲಿ 56 ಕೊಳವೆಬಾವಿ ಕೊರೆಯಲಾಗಿದೆ. ಮುಂದಿನ 15 ದಿನಗಳಲ್ಲಿ ಎಲ್ಲ ಕೊಳವೆಬಾವಿಗಳಿಗೆ ವಿದ್ದುದ್ದೀಕರಣಗೊಳಿಸಿ ಜನರ ಉಪಯೋಗಕ್ಕೆ ಲಭ್ಯಗೊಳಿಸಲಾಗುವುದು. ರೋಣ ತಾಲೂಕಿನ ಹೊಳೆಮಣ್ಣೂರು, ಗಾಡಗೋಳಿ ಹಾಗೂ ಗದಗ ತಾಲೂಕಿನ ಚಿಂಚಲಿ, ಕಣವಿ, ಕಲ್ಲೂರು, ನೀಲಗುಂದ, ಅಡವಿಸೋಮಾಪುರ ತಾಂಡಾ, ಲಿಂಗದಾಳ ಹೋಬಳಿಗಳಲ್ಲಿ ನೀರಿನ ಸಮಸ್ಯೆ ಅತಿಯಾಗಿದೆ. ಹೊಳೆಮಣ್ಣೂರು, ಗಾಡಗೋಳಿ ಹಾಗೂ ತಾಲೂಕಿನ ಅಡವಿಸೋಮಾಪುರ ತಾಂಡಾಗಳಿಗೆ ತಕ್ಷಣ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಸೂಚನೆ ನೀಡಲಾಗಿದೆ.
-ಎಚ್.ಕೆ. ಪಾಟೀಲ್, ಸಚಿವ