ತಡೆಗೋಡೆಗೆ ಪರವಾನಗಿ ಕೊಡದಿದ್ದರೆ ಮತ್ತೆ ರೈತ ಬಂಡಾಯ: ಕುಲಕರ್ಣಿ
ನರಗುಂದ: ಉತ್ತರ ಕರ್ನಾಟಕ ಭಾಗದ ರೈತ ಸಮುದಾಯದ ಬಹುದಿನಗಳ ಬೇಡಿಕೆಯಾದ ಮಲಪ್ರಭೆಗೆ ಕಳಸಾ-ಬಂಡೂರಿ ನಾಲಾ ಜೋಡಣೆ ಕುರಿತ 20 ವರ್ಷದ ಹೋರಾಟ ಮಾಡಿದ್ದು, ಸದ್ಯ ಕಾಮಗಾರಿ ಮುಗಿದು ತಡೆಗೋಡೆ ನಿರ್ಮಿಸಿ ನೀರು ಜಲಾಶಯಕ್ಕೆ ತರಬೇಕೆಂದರೆ ಅದಕ್ಕೆ ನ್ಯಾಯಾಧಿಕರಣ ಸಮಿತಿ ಸೆಪ್ಟೆಂಬರ್ ತಿಂಗಳವರೆಗೆ ತಡೆಗೋಡೆ ಬೇಡವೆಂದು ಹೇಳಿದ್ದು ಖಂಡನೀಯ ಎಂದು ಕಳಸಾ-ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಹೇಳಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲಪ್ರಭೆ ಜಲಾಶಯಕ್ಕೆ ಕಳಸಾ-ಬಂಡೂರಿ ನಾಲಾ ಜೋಡಣೆ ಮಾಡಿದರೆ ಉತ್ತರ ಕರ್ನಾಟಕ ಭಾಗದ 4 ಜಿಲ್ಲೆಯ 9 ತಾಲೂಕಗಳಿಗೆ ಕುಡಿವ ನೀರಿನ ಸಮಸ್ಯೆ ನೀಗಲಿದೆ. ಆದರೆ, ಈ ನಾಲೆಗಳಿಗೆ ತಡೆಗೋಡೆ ನಿರ್ಮಾಣ ಮಾಡಿದರೆ ಈ ವರ್ಷದಿಂದ ಜಲಾಶಯಕ್ಕೆ 3 ರಿಂದ 4 ಟಿಎಂಸಿ ನೀರು ಬರುತ್ತದೆ. ಆದರೆ, ನ್ಯಾಯಾಧೀಕರಣ ಸಮಿತಿಯವರು ನಾಲೆಗಳಿಗೆ ತಡೆಗೋಡೆ ನಿರ್ಮಾಣ ಮಾಡಬಾರದೆಂದು ಹೇಳಿದ್ದು ಹೋರಾಟಗಾರರಿಗೆ ತೀವ್ರ ನೋವುಂಟು ಮಾಡಿದೆ. ನಮ್ಮ ರಾಜ್ಯದಲ್ಲಿ ಹರಿದು ಹೋಗುವ ಹಳ್ಳಗಳ ನೀರಿಗೆ ತಡೆಗೋಡೆ ಬೇಡವೆಂದು ಹೇಳುವುದು ಸರಿ ಅಲ್ಲ. ರಾಜ್ಯ ಸರ್ಕಾರ ಈ ತಡೆಗೋಡೆ ನಿರ್ಮಾಣಕ್ಕೆ ಬೇಗ ಕ್ರಮ ತೆಗೆದುಕೊಂಡು ಜೂನ್ ತಿಂಗಳ ಅಂತ್ಯದೊಳಗೆ ನಾಲೆಗಳಿಗೆ ತಡೆಗೋಡೆ ನಿರ್ಮಾಣ ಮಾಡುವ ಪ್ರಯತ್ನ ಮಾಡದಿದ್ದರೆ ಕಳಸಾ-ಬಂಡೂರಿ ಹೋರಾಟ ಸಮಿತಿ ವತಿಯಿಂದ ಈ ಭಾಗದ ರೈತ ಸಮುದಾಯ ಕರೆದುಕೊಂಡು ಹೋಗಿ ನಾಲೆಗಳಿಗೆ ತಡೆಗೋಡೆ ನಿರ್ಮಾಣ ಮಾಡುತ್ತೇವೆ. ನಾವು ಇನ್ನೊಂದು ರೈತ ಬಂಡಾಯಕ್ಕೆ ಸಿದ್ಧವಿದ್ದೇವೆ ಎಂದರು.