ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ತಳಗಾಳಿನ ಕಾರ್ಮಿಕರಿಗೆ ಕೂಲಿಯೇ ಇಲ್ಲ!

Mainashree
Updated On : 25 Apr 2014, 12:43 pm

ಗದಗ: ರಾಜ್ಯದ 30 ಜಿಲ್ಲೆಗಳ ವ್ಯಾಪ್ತಿಯ ಎಲ್ಲ ಎಪಿಎಂಸಿಗಳಲ್ಲಿ ನಿಮಗೆ ನಿತ್ಯವೂ ನೂರಾರು ಮಹಿಳಾ ಕಾರ್ಮಿಕರು ಕಾಣ ಸಿಗುತ್ತಾರೆ. ಅವರು ದಲಾಲರು, ರೈತರು, ವರ್ತಕರು, ಅಂಗಡಿಯವರಿಗೆ ಸಹಾಯ ಮಾಡುತ್ತಾರೆ. ಆದರೆ, ಇವರಿಗೆ ಯಾವುದೇ ಕೂಲಿ ಇಲ್ಲ. ರೈತರು ಮಾರಾಟಕ್ಕೆ ಎಂದು ತಂದ ಚೀಲಗಳನ್ನು ಇಳಿಸುವ, ತೂಕ ಮಾಡುವ ಸಂದರ್ಭದಲ್ಲಿ ನೆಲಕ್ಕೆ ಬೀಳುವ ಕಾಳುಗಳೇ ಇವರಿಗೆ ಜೀವನಾಧಾರ.
ಇವರೇ ತಳಗಾಳಿನ ಮಹಿಳಾ ಕಾರ್ಮಿಕರು! ವಿಚಿತ್ರ ಹೆಸರು ಕೇಳಿದರೆ ಅಚ್ಚರಿಯಾದೀತು. ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಮಾರಾಟಕ್ಕೆ ತಂದ ದವಸ-ಧಾನ್ಯಗಳನ್ನು ಸ್ವಚ್ಛಗೊಳಿಸುವುದು, ಅಂಗಡಿಗಳಲ್ಲಿ ಟೆಂಡರ್‌ಗಾಗಿ ರೈತರ ಧಾನ್ಯಗಳನ್ನು ಚೀಲದಿಂದ ಹೊರಗೆ ಹಾಕುವುದು, ಟೆಂಡರ್ ಮುಗಿದ ಬಳಿಕ ತುಂಬುವುದು, ಮಧ್ಯಾಹ್ನದ ವೇಳೆಗೆ ಮಳೆ ಬಂದರೆ ಆವರಣದಲ್ಲಿ ಹಾಕಿರುವ ಧಾನ್ಯ ರಕ್ಷಿಸುವುದು- ಒಟ್ಟಿನಲ್ಲಿ ರೈತರಿಗೆ ಮತ್ತು ದಲಾಲಿ ಅಂಗಡಿಯ ಮಾಲೀಕರಿಗೆ ವ್ಯಾಪಾರಕ್ಕೆ ಅನುಕೂಲವಾಗುವ ಎಲ್ಲ ರೀತಿಯ ಕೆಲಸ ಮಾಡುತ್ತಾರೆ.
ಸಂಬಳ ಇಲ್ಲ: ತಳಗಾಳಿನ ಮಹಿಳಾ ಕಾರ್ಮಿಕರಿಗೆ ನಿಗದಿತ ಸಂಬಳ ಇಲ್ಲ. ಅವರು ಕೆಲಸ ಮಾಡುವ ದಲಾಲಿ ಅಂಗಡಿ ಮಾಲೀಕರಾಗಲಿ, ಎಪಿಎಂಸಿಗಳಾಗಲಿ ಇವರಿಗೆ ಸಂಬಳ ನೀಡಲ್ಲ. ರೈತರು ಮಾರಾಟಕ್ಕೆ ತಂದ ಧಾನ್ಯಗಳ ಕಸ ಕಡ್ಡಿ ತೆಗೆದು, ಮಣ್ಣಿನಲ್ಲಿ ಕೂಡಿದ ಧಾನ್ಯ ಸ್ವಚ್ಛ ಮಾಡಬೇಕು. ತೂಕ ಮಾಡುವಾಗ ಉಳಿಯುವ ಕಾಳುಗಳೇ ಇವರ ಜೀವನಕ್ಕೆ ಆಧಾರ. ತಳಗಾಳುಗಳು ಉಳಿಯದಿದ್ದರೆ ಅಂದು ದುಡಿಮೆ ಇಲ್ಲ. ರೈತರ ಧಾನ್ಯ ದಲಾಲಿ ಅಂಗಡಿಗೆ ಬರದೇ ಇದ್ದಲ್ಲಿ ಇವರ ಊಟಕ್ಕೂ ಸಂಚಕಾರ.
9500 ಮಹಿಳಾ ಕಾರ್ಮಿಕರು: ರಾಜ್ಯದಲ್ಲಿ 9500ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಅಭದ್ರತೆಯಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲೇ ಇವರ ಸಂಖ್ಯೆ ಹೆಚ್ಚಾಗಿದೆ. ಸದ್ಯ ತಳಗಾಳಿನ ಹಮಾಲಿ ಕಾರ್ಮಿಕರಾಗಿ ದುಡಿಯುವ ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ. ಸದ್ಯ ಇರುವ 9500 ಜನರಲ್ಲಿ 547ಕ್ಕೂ ಹೆಚ್ಚು ಜನರು 55 ವರ್ಷಕ್ಕಿಂತ ಹೆಚ್ಚಿನ ವಯೋವಾನದವರು. ಈ ವೃತ್ತಿಯಲ್ಲಿಯೇ ಜೀವನ ಕಳೆದಿದ್ದಾರೆ. ಅವರಿಗೆ ಸ್ವಂತ ಮನೆ, ಸರ್ಕಾರದ ಯೋಜನೆ ಅಥವಾ ನಿಗದಿತ ವೇತನ ಸಿಕ್ಕಿಲ್ಲ.
ನಾನ್ 50 ವರ್ಷಾತ್ರೀ ಹಿಂಗ್ ಕೂಲಿ ಇಲ್ದ, ದಲಾಲಿ ಅಂಗಡ್ಯಾಗ್ ದುಡಕೊಂತ್ ಬಂದೀನ್ರೀ. ನಮ್ಗ ಯಾರೂ ಕೂಲಿ ಕೊಡುದಿಲ್ಲರ್ರೀ. ರೈತ್ರ ತಂದ ಮಾಲ್ಯಾನ್ ಚೆಲ್ಲಿದ ಕಾಳ್ ನಮ್ ಅನ್ನಕ್ಕ ದಾರಿ. ಬರಗಾಲ ಬಿದ್ರಂತೂ ನಮ್ ಮಾರಿ ನೋಡಂಗಿಲ್ಲ. ಹೊಟ್ಟಿಗೆ ತಣ್ಣೀರ್ ಬಟ್ಟಿ, ನಾವೆಲ್ಲ ಮುದುಕ್‌ರಾಗಿವಿ. ಇನ್ ಮುಂದರಾ ನಮ್ಗ ಪಗಾರ ಬರುವಂಗ್ ಮಾಡ್ರೀ.
-ಪಾರವ್ವ ತಳವಾರ, ಮಹಿಳಾ ತಳಗಾಳಿನ ಹಮಾಲಿ ಕೆಲಸದ ಮಹಿಳೆ

ಈ ಕುರಿತು ರಾಜ್ಯದ ಕೃಷಿ ಮತ್ತು ಎಪಿಎಂಸಿ ಸಚಿವರಿಗೆ ಮನವಿ ಮಾಡಲಾಗಿದೆ. ಮಹಿಳಾ ತಳಗಾಳಿನ ಕಾರ್ಮಿಕರಿಗೆ, ವಿಮಾ ಸೌಲಭ್ಯ, ವಿಶೇಷ ಪಿಂಚಣಿ ಯೋಜನೆ ಹಾಗೂ ಮುಂದೆ ಈ ರೀತಿಯ ಕೆಲಸಕ್ಕೆ ತೆಗೆದುಕೊಳ್ಳುವ ವೇಳೆ ದಲಾಲಿ ಅಂಗಡಿ ಮಾಲೀಕರು, ವರ್ತಕರು ಅಥವಾ ಎಪಿಎಂಸಿಗಳಿಂದ ಕಾರ್ಮಿಕ ಇಲಾಖೆಯ ನಿಯಮಾನುಸಾರ ಕೂಲಿ ನಿಗದಿ ಮಾಡಲು ವಿನಂತಿಸಿದ್ದೇವೆ. ಅನುಷ್ಠಾನ ಮಾಡದಿದ್ದರೆ ಹೋರಾಟ ಖಂಡಿತ.
- ಅಯ್ಯಪ್ಪ ನಾಯ್ಕರ, ಹಮಾಲಿ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ

ಎಲ್ಲಿ ಹೋಯಿತು ಕನಿಷ್ಠ ಕೂಲಿ?
ರಾಜ್ಯದ ಎಲ್ಲ ಎಪಿಎಂಸಿಗಳಲ್ಲಿ ಮಾನವ ಸಂಪನ್ಮೂಲದ ದುರ್ಬಳೆಯಾಗುತ್ತಿದ್ದರೂ ಎಪಿಎಂಸಿ ಅಧಿಕಾರಿಗಳಾಗಲಿ, ಕಾರ್ಮಿಕ ಇಲಾಖೆಯಾಗಲಿ ಗಮನ ನೀಡುತ್ತಿಲ್ಲ. ಕೇಂದ್ರ ಸರ್ಕಾರದ ಕನಿಷ್ಠ ಕೂಲಿಯ ಕಾನೂನಿನ ಲಾಭ ಇವರಿಗೆ ದಕ್ಕಿಲ್ಲ. ಈ ಕಾರ್ಮಿಕರು ಎಪಿಎಂಸಿ ಅಧಿಕಾರಿಗಳಿಗೆ ಕಾಣುತ್ತಿಲ್ಲವೇ?

 ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement