ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮುಕ್ತಿಮಂದಿರದಲ್ಲಿ ಸ್ವಾಮೀಜಿ ಆಸೆಯಂತೆ ತ್ರಿಕೋಟಿ ಲಿಂಗ ಸ್ಥಾಪನೆ

Rashmi Kasaragodu
Updated On : 25 Apr 2014, 12:03 pm

ಲಕ್ಷ್ಮೇಶ್ವರ: ಮುಕ್ತಿಮಂದಿರ ಧರ್ಮ ಕ್ಷೇತ್ರವು ರಂಭಾಪುರಿ ಪೀಠದ ಜಗದ್ಗುರು ಲಿಂಗೈಕ್ಯ ವೀರಗಂಗಾಧರ ಶ್ರೀಗಳ ತಪೋಭೂಮಿಯಾಗಿದ್ದು, ಶ್ರೀಗಳ ಆಸೆಯಂತೆ ಮುಕ್ತಿಮಂದಿರದಲ್ಲಿ ತ್ರಿಕೋಟಿ ಲಿಂಗಗಳ ಸ್ಥಾಪನಾ ಕಾರ್ಯವು ಬಹಳ ಉತ್ಸುಕತೆಯಿಂದ ಸಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ರಂಭಾಪುರಿ ಪೀಠದ ಜಗದ್ಗುರು ವೀರಸೋಮೇಶ್ವರ ಶ್ರೀಗಳು ಹೇಳಿದರು.
ಸಮೀಪದ ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಗುರುವಾರ ಬೆಳಗ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ತ್ರಿಕೋಟಿ ಲಿಂಗಗಳನ್ನು ಸ್ಥಾಪಿಸುವ ಸ್ಥಳದ ಪರಿಶೀಲನೆ ಮಾಡಿದ ಶ್ರೀಗಳ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ತ್ರಿಕೋಟಿ ಲಿಂಗಗಳನ್ನು ಸ್ಥಾಪಿಸಲು ಮುಕ್ತಿಮಂದಿರದ ಪರಿಸರ ಅತ್ಯಂತ ಸೂಕ್ತವಾದ ಸ್ಥಳವಾಗಿದ್ದು, ದೇವಸ್ಥಾನದ ಪಕ್ಕದಲ್ಲಿನ ಗುಡ್ಡದ ಮೇಲಿರುವ ಜಾಗೆಯನ್ನು ಸ್ವಚ್ಛಗೊಳಿಸಿ ಗುಡ್ಡದ ಸುತ್ತಲೂ ಮೆಟ್ಟಿಲುಗಳ ಆಕಾರದಲ್ಲಿ ಗುಡ್ಡವನ್ನು ಕೊರೆದು ಆ ಜಾಗೆಯಲ್ಲಿ ತ್ರಿಕೋಟಿ ಲಿಂಗಗಳನ್ನು ಸ್ಥಾಪನೆ ಮಾಡುವ ಕಾರ್ಯವು ಭರದಿಂದ ಸಾಗಿದೆ. ಈ ಭಾಗದ ಭಕ್ತರು ಇನ್ನೂ ಹೆಚ್ಚಿನ ರೀತಿಯ ಸಹಾಯ ಸಹಕಾರವನ್ನು ನೀಡುವ ಮೂಲಕ ತ್ರಿಕೋಟಿ ಲಿಂಗಗಳನ್ನು ಸ್ಥಾಪಿಸುವ ಕಾರ್ಯದಲ್ಲಿ ಭಾಗಿಯಾಗಬೇಕು. ಅಲ್ಲದೆ ವೀರಗಂಗಾಧರ ಶ್ರೀಗಳ ಕಸನು ನನಸು ಮಾಡಿ ಮುಕ್ತಿಮಂದಿರವನ್ನು ಭೂಕೈಲಾಸವನ್ನಾಗಿ ಮಾಡಬೇಕು. ಅಲ್ಲದೆ ರಂಭಾಪುರಿ ಪೀಠವು ತ್ರಿಕೋಟಿ ಲಿಂಗಗಳ ಸ್ಥಾಪನಾ ಕಾರ್ಯದಲ್ಲಿ ಎಲ್ಲ ರೀತಿಯ ತನು ಮನ ಧನದ ಸಹಾಯ ಹಸ್ತವನ್ನು ನೀಡುವಲ್ಲಿ ಹಿಂದು ಮುಂದೆ ನೋಡುವುದಿಲ್ಲ. ಮುಕ್ತಿಮಂದಿರದ ಪಟ್ಟಾಧ್ಯಕ್ಷರಾದ ವಿಮಲ ರೇಣುಕ ವೀರಮುಕ್ತಿ ಮುನಿ ಸ್ವಾಮಿಗಳು ಹಾಗೂ ಕಲಾದಗಿಯ ಪಂಚಗ್ರಹ ಹಿರೇಮಠದ ಚಂದ್ರಶೇಖರ ಸ್ವಾಮಿಗಳು ತ್ರಿಕೋಟಿ ಲಿಂಗ ಸ್ಥಾಪನಾ ಕಾರ್ಯದಲ್ಲಿ ಉತ್ಸುಕತೆಯಿಂದ ತಮ್ಮನ್ನು ತೊಡಗಿಸಿಕೊಂಡು ಉತ್ತಮವಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಪಂಚಪೀಠದ ಅಭಿಮಾನಿಗಳು ಹಾಗೂ ನಡೆದಾಡುವ ದೇವರು ಎಂದು ಖ್ಯಾತಿ ಪಡೆದಿದ್ದ ವೀರಗಂಗಾಧರ ಶ್ರೀಗಳ ಭಕ್ತ ಕುಲ ಕೋಟಿ ಅಭಿಮಾನಿಗಳು ಈ ಮಂಗಳ ಕಾರ್ಯದಲ್ಲಿ ಇನ್ನೂ ಹೆಚ್ಚಿನ ನೆರವು ನೀಡುವ ಮೂಲಕ ತ್ರಿಕೋಟಿ ಲಿಂಗ ಸ್ಥಾಪನಾ ಕಾರ್ಯ ಶೀಘ್ರವಾಗಿ ನೆರವೇರಿಸಬೇಕು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement