ಸರಳ ವಿವಾಹಕ್ಕೆ ಆದ್ಯತೆ ನೀಡಿ
ಗಜೇಂದ್ರಗಡ: ಸರ್ವರು ಆಡಂಬರದ ವಿವಾಹಕ್ಕೆ ತಿಲಾಂಜಲಿ ನೀಡಿ ಸರಳ ವಿವಾಹಕ್ಕೆ ಆದ್ಯತೆ ನೀಡಬೇಕು ಎಂದು ಗ್ರಾಪಂ ಅಧ್ಯಕ್ಷೆ ಹೇಮಾವತಿ ರಾಠೋಡ ಹೇಳಿದರು.
ಸಮೀಪದ ಅಮರಗಟ್ಟಿ ಗ್ರಾಮದ ಈಶ್ವರ ದೇಗುಲ ಆವರಣದಲ್ಲಿ ನಡೆದ ಭೀಮಾಂಬಿಕಾದೇವಿ ಪುರಾಣ ಮಹಾಮಂಗಲೋತ್ಸವ, ಕುಂಭಮೇಳ ಹಾಗೂ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದರು. ಗ್ರಾಮೀಣ ಜನರ ಆರ್ಥಿಕ ಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಮದುವೆ ಬಡ ಕುಟುಂಬಗಳಿಗೆ ಹೊರೆಯಾಗಿದ್ದನ್ನು ಇಳಿಸಲು ಸಾಮೂಹಿಕ ವಿವಾಹ ಸಹಕಾರಿಯಾಗಲಿದೆ. ಆಡಂಬರ, ವರದಕ್ಷಿಣೆ ಪೀಡುಗು ನಿರ್ಮೂಲನೆಗೆ ಸಾಮೂಹಿಕ ವಿವಾಹ ರಾಮಬಾಣ. ಬಡವರು ಮದುವೆ ಮಾಡುವುದು ಇಂದಿನ ದುಬಾರಿ ಕಾಲದಲ್ಲಿ ಕಷ್ಟ. ಸಾಲದ ಸುಳಿಯಲ್ಲಿ ಸಿಲುಕಿ ನಲುಗಬಾರದೆಂಬ ಉದ್ದೇಶದಿಂದ ಸಾಮೂಹಿಕ ವಿವಾಹ ನಡೆಸಲಾಗಿದೆ ಎಂದರು. ಮಳೆ ರಾಜೇಂದ್ರಸ್ವಾಮಿ ಶ್ರೀಮಠದ ಮುರನಾಳ ಶ್ರೀಗಳು ಮಾತನಾಡಿದರು.
ಇದಕ್ಕೂ ಮುನ್ನ ಬೆಳಗ್ಗೆ ಈಶ್ವರಲಿಂಗಕ್ಕೆ ರುದ್ರಾಭಿಷೆಕ, ವಿಶೇಷ ಪೂಜೆ ನಡೆಯಿತು. ಮಧ್ಯಾಹ್ನ ಭೀಮಾಂಬಿಕಾದೇವಿ ಭಾವಚಿತ್ರ ಮೆರವಣಿಗೆಯಲ್ಲಿ ಕುಂಭಹೊತ್ತ ಮಹಿಳೆಯರು ಹಾಗೂ ಡೊಳ್ಳು, ಜಾಂಜ್ಮೇಳ, ಭಜನೆ, ಸಕಲ ಮಂಗಲ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಳಿಕ ದೇಗುಲ ತಲುಪಿತು.
ಗುಳಗುಳಿಯ ವೀರೇಶ ಸ್ವಾಮೀಜಿ, ಯೋಗಾಶ್ರವು ಶ್ರೀಗಳು, ಪರಸಪ್ಪ ರಾಠೋಡ, ಬಸಪ್ಪ ಹೊಸಳ್ಳಿ, ಉಮೇಶ ಹೊಸಳ್ಳಿ, ಯಲ್ಲಪ್ಪ ರಾಜೂರ, ಗವಿಸಿದ್ದಪ್ಪ ಮುಧೋಳ, ಸಕ್ರಪ್ಪ ರಾಠೋಡ, ಪ್ರಕಾಶ ಜೋಗಿನ, ಯಮನಪ್ಪ ಅಬ್ಬಿಗೇರಿ, ಸಣ್ಣಫಕೀರಪ್ಪ ರಾಠೋಡ ಉಪಸ್ಥಿತರಿದ್ದರು.