ರಾಜ್ ಕನ್ನಡಿಗರ ಶಕ್ತಿ ಸಾಕ್ಷಾತ್ಕಾರ
ಗಜೇಂದ್ರಗಡ: ಅಭಿಮಾನಿಗಳಲ್ಲಿ ದೇವರನ್ನು ಕಂಡ ಕನ್ನಡಿಗರ ಶಕ್ತಿಯ ಸಾಕ್ಷಾತ್ಕಾರ ಡಾ. ರಾಜ್ಕುಮಾರ್. ಅವರ ಬದುಕಿನ ಸಾಧನೆ ಎಲ್ಲರೂ ಮಾರ್ಗದರ್ಶನ ಎಂದು ಬಾಗಮಾರ ಸೇವಾ ಸಮಿತಿ ಅಧ್ಯಕ್ಷ ಅಶೋಕ ಬಾಗಮಾರ ಹೇಳಿದರು.
ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಗುರುವಾರ ಸಂಜೆ ಡಾ. ರಾಜ್ಕುಮಾರ ಅಭಿಮಾನಿ ಬಳಗ ವತಿಯಿಂದ ಕರಾಟೆ ಉಚಿತ ತರಬೇತಿ ಮುಕ್ತಾಯ ಹಾಗೂ ಡಾ. ರಾಜ್ಕುಮಾರ್ ಅವರ 86ನೇ ಜನ್ಮ ದಿನದ ಪ್ರಯುಕ್ತ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಾ. ರಾಜ್ ಬದುಕಿರುವಾಗಲೆ ದಂತಕತೆಯಾದ ವ್ಯಕ್ತಿ ಅವರ ವ್ಯಕ್ತಿತ್ವ ಸೂಜಿಗಲ್ಲು. ಇಂತಹ ಅಪರೂಪ ಸರಳತೆ ಗುಣ ಹೊಂದಿದ ಅಣ್ಣಾವ್ರು ನಾಡಿನ ಕೋಟ್ಯಂತರ ಅಭಿಮಾನಿಗಳ ಹೃದಯಗಳಲ್ಲಿ ಶಾಶ್ವತ ನೆಲೆಯೂರಿದ್ದಾರೆ ಎಂದರು.
ಪುರಸಭೆ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ ಮಾತನಾಡಿ, ಡಾ. ರಾಜ್ ಚಲನಚಿತ್ರ ರಂಗಕ್ಕೆ ಮಾತ್ರ ಮಿಸಲಾಗದೆ 80ರ ದಶಕದಲ್ಲಿ ನಾಡಿನಲ್ಲಿ ಗೋಕಾಕ್ ಚಳವಳಿ ಉತ್ತುಂಗಕ್ಕೆ ಏರಿದಾಗ ಚಳವಳಿಯ ನೇತೃತ್ವವಹಿಸಿ ಕನ್ನಡ ಚಿತ್ರರಂಗದ ಎಲ್ಲ ಕಲಾವಿದರೊಂದಿಗೆ ನಾಡಿನಾದ್ಯಾಂತ ಸಂಚರಿಸಿ ಗೋಕಾಕ್ ಚಳವಳಿಗೆ ಯಶಸ್ವಿಗೊಳಿಸಿದ ಕೀರ್ತಿ ಡಾ. ರಾಜ್ಕುಮಾರ್ ಅವರಿಗೆ ಸಲ್ಲುತ್ತದೆ. ಇಂತಹ ಅನಭಿಷಕ್ತ ನಟನ ಜನ್ಮ ದಿನದ ಸವಿ ನೆನಪಲ್ಲಿ ಅಭಿಮಾನಿ ಸಂಗಪ್ಪ ಯಲಬುಣಚಿ ಕರಾಟೆ ತರಬೇತಿ ನೀಡಿ ಇಂತಹ ಸಾಂಸ್ಕೃತಿಕ ಸಮಾರಂಭ ಏರ್ಪಡಿಸಿರುವುದು ಶ್ಲಾಘನೀಯ ಎಂದರು. ಕಾಲಕಾಲೇಶ್ವರ ದೇಗುಲ ಅರ್ಚಕ್ ಕಲ್ಲಿನಾಥಭಟ್ ಪೂಜಾರ ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಸದಸ್ಯ ಶರಣಪ್ಪ ರೇವಡಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮಾಜಿ ಅಧ್ಯಕ್ಷ ಡಿ.ಎಚ್. ಬಳೂಟಗಿ, ನ್ಯಾಯವಾದಿ ಶ್ರೀಕಾಂತ ಅವಧೂತ್, ಜೆಡಿಎಸ್ ರಾಜ್ಯ ಮುಖಂಡ ಡಾ. ಮಂಜುನಾಥ ವಿಶ್ವಬ್ರಾಹ್ಮಣ, ಕನ್ನಡ ಪರ ಹೋರಾಟಗಾರ ಶರಣಪ್ಪ ಪೂಜಾರ, ಮುತ್ತಣ್ಣ ಚಟ್ಟೇರ, ಬಸವರಾಜ ಮಾಳೋತ್ತರ, ರಾಜು ಪವಾರ, ಮುನ್ನಾ ಹಣಗಿ, ವೀರೇಶ ಹಡಪದ, ಕಳಕಪ್ಪ ಹಡಪದ, ಬಾಷಾಸಾಬ್ ಕರ್ನಾಚಿ ಪಾಲ್ಗೊಂಡಿದ್ದರು.
ಕರಾಟೆ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ಬಳಿಕ ಚೈತ್ರಾ ಮೆಲೋಡಿಸ್ ಕಲಾವಿದರು ಡಾ. ರಾಜ್ ಅಭಿನಯದ ಚಿತ್ರಗಳ ಗೀತೆ ಹಾಡಿ ರಂಜಿಸಿದರು. ಬಾಬು ಗೊಡೇಕಾರ ಸ್ವಾಗತಿಸಿದರು. ಪ್ರೊ. ಬಿ.ಕೆ. ಮಾದಿ ನಿರೂಪಿಸಿದರು.